ಬೆಂಗಳೂರು : ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಪಂಚರತ್ನ ಯೋಜನೆಯನ್ನು ಬಿಜೆಪಿ ಅಪಹಾಸ್ಯ ಮಾಡಿದೆ. ಒಂದೆಡೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಬಿಜೆಪಿಯ ವರಿಷ್ಠ ನಾಯಕರು ಹುಟ್ಟು ಹಬ್ಬದ ಶುಭಾಶಯ ಕೋರುತ್ತಿದ್ದರೆ, ಬಿಜೆಪಿ ಜಾಲತಾಣದಲ್ಲಿ ಅವರನ್ನು ”ಕುಟುಂಬ ರಾಜಕಾರಣದ ಆದ್ಯ ಪಿತಾಮಹ” ಎಂದು ಟೀಕಿಸಲಾಗಿದೆ.
ಬಿಜೆಪಿಯ ಈ ಸರಣಿ ಟ್ವೀಟ್ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂಚರತ್ನ ಕಾರ್ಯಕ್ರಮ ದ ಎಲ್ ಇಡಿ ಪ್ರಚಾರ ವಾಹನದ ಉದ್ಘಾಟನೆ ದಿನವೇ ಬಿಜೆಪಿ ಮಾಡಿದ ವ್ಯಂಗ್ಯ ಅವರನ್ನು ಕೆರಳಿಸಿದೆ.ಕುಳಿತು ಟ್ವೀಟ್ ಮಾಡುವುದು ಸುಲಭ. ಆದರೆ ನಾನು ಹುಡುಗಾಟಕ್ಕಾಗಿ ಈ ಯೋಜನೆ ರೂಪಿಸಿಲ್ಲ.ಸಮಾವೇಶದ ಮೂಲಕ ಸಾಮರ್ಥ್ಯ ಸಾಬೀತು ಮಾಡುತ್ತೇನೆ ಎಂದಿದ್ದಾರೆ.
ಹಾಗಾದರೆ ಬಿಜೆಪಿ ಟ್ವೀಟ್ ನಲ್ಲಿ ಏನಿದೆ ?
ಕುಮಾರಸ್ವಾಮಿಯವರೇ ನಿಮ್ಮ ಪಂಚರತ್ನ ಕಾರ್ಯಕ್ರಮಕ್ಕೆ ಶುಭವಾಗಲಿ.ಆದರೆ ಜೆಡಿಎಸ್ ನ ಪಂಚರತ್ನ ಎಂದರೆ ಜನ ಬೇರೆಯದೇ ಮಾತನಾಡುತ್ತಾರೆ.ದೇವೇಗೌಡ, ರೇವಣ್ಣ, ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಪಂಚರತ್ನಗಳು. ಐದು ಕ್ಷೇತ್ರದ ಗೆಲುವೇ ಪಂಚರತ್ನ ಯೋಜನೆ ಎಂಬುದು ನಿಜವೇ ? ಎಂದು ಕುಹಕವಾಡಿದೆ.
123 ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಗುರಿ ಹೊಂದಿದ್ದೇವೆ ಎಂದು ಬೀಗುವ ಮಾಜಿ ಲಕ್ಕಿಡಿಪ್ ಸಿಎಂ ಎಚ್ ಡಿಕೆ ಅವರೇ, 123 ಕ್ಷೇತ್ರಗಳಿಗೆ ನಿಮ್ಮ ಪಕ್ಷದಿಂದ ಅಭ್ಯರ್ಥಿಗಳು ಸಿಗಬಹುದೇ?ನಿಮ್ಮ ವಂಶಾಡಳಿತದಿಂದ ಬೇಸತ್ತು ವಲಸೆ ಹೋಗುವವರ ಸಂಖ್ಯೆಯೇ ಇದರ ಕಾಲು ಭಾಗದಷ್ಟಿದೆ. ಹೀಗಿರುವಾಗ ಜೆಡಿಎಸ್ ನಾಮಾವಶೇಷವಾಗುವುದರಲ್ಲಿ ಸಂಶಯವಿದೆಯೇ ಎಂದು ಪ್ರಶ್ನಿಸಿದೆ.
ಇದನ್ನೂ ಓದಿ : ಮಳೆಗಾಲದಲ್ಲಿ ಬೆಂಗಳೂರಿನ 84 ಬಡಾವಣೆಗಳಲ್ಲಿ ಪ್ರವಾಹ ಖಚಿತ
ಜನತಾ ಪರಿವಾರ ಎಂದರೆ ಈಗ ದೇವೇಗೌಡ & ಸನ್ಸ್ ಪ್ರೈವೇಟ್ ಲಿಮಿಟೆಡ್ ಎಂಬಂತಾಗಿದೆ.ಭಾರತದಕ್ಕೆ ನೆಹರು ಕುಟುಂಬವಾದದ ಪಿತಾಮಹರಾದರೆ , ಕರ್ನಾಟಕಕ್ಕೆ ದೇವೇಗೌಡರೇ ಕುಟುಂಬವಾದದ ಆದ್ಯ ಪಿತಾಮಹ. ಮಾಜಿ #LuckyDipCmHDK ಅವರು ಕುಟುಂಬವಾದದ ಬಹುದೊಡ್ಡ ಫಲಾನುಭವಿ ಎಂದು ವ್ಯಂಗ್ಯವಾಡಿದೆ.