Advertisement

ಗ್ರಾ.ಪಂ ಚುನಾವಣೆಯಲ್ಲಿ ಬಿಜೆಪಿಯಿಂದ ಅಕ್ರಮಕ್ಕೆ ಯತ್ನ: ವಿನಯ್ ಕುಮಾರ್ ಸೊರಕೆ ಆಕ್ರೋಶ

01:24 PM Dec 25, 2020 | Adarsha |

ಕಾಪು: ಗ್ರಾಮ ಪಂಚಾಯತ್ ಚುನಾವಣೆಯು ಪಕ್ಷ ಮತ್ತು ಪಕ್ಷದ ಚಿಹ್ನೆ ರಹಿತವಾಗಿ ನಡೆಯುತ್ತಿದ್ದರೂ, ಬಿಜೆಪಿ ಕೆಲವೆಡೆ ಅಧಿಕಾರಿಗಳನ್ನು ಉಪಯೋಗಿಸಿಕೊಂಡು ಚುನಾವಣಾ ಅಕ್ರಮಕ್ಕೆ ಅವಕಾಶ ಮಾಡಿಕೊಡುತ್ತಿದೆ. ಆಡಳಿತ ಪಕ್ಷ ಮತ್ತು ಅಧಿಕಾರಿಗಳ ಬೇಜವಾಬ್ದಾರಿಯ ಬಗ್ಗೆ ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದ್ದು ಅವಶ್ಯಕತೆ ಬಿದ್ದರೆ ನ್ಯಾಯಾಲಯಕ್ಕೂ ಹೋಗುತ್ತೇವೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.

Advertisement

ಕಾಪು ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಪು ವಿಧಾನಸಭಾ ಕ್ಷೇತ್ರದ 10 ಗ್ರಾಮ ಪಂಚಾಯತ್‌ಗಳಿಗೆ ನಡೆದಿರುವ ಚುನಾವಣೆಯ ವೇಳೆ ಬೊಮ್ಮರಬೆಟ್ಟು ಮತ್ತು ಉದ್ಯಾವರದಲ್ಲಿ ಚುನಾವಣಾ ಅಕ್ರಮಗಳು ನಡೆದಿರುವ ಬಗ್ಗೆ ಮಾಹಿತಿಯಿದೆ. ಈ ಬಗ್ಗೆ ಉಡುಪಿ ಜಿಲ್ಲಾಡಳಿತ, ತಾಲೂಕು ಆಡಳಿತ ಮತ್ತು ಚುನಾವಣಾ ವಿಭಾಗಕ್ಕೆ ದೂರು ನೀಡಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಕೂಡಾ ದೂರು ನೀಡಲಾಗಿದೆ ಎಂದರು.

ಪಂಚಾಯತ್ ರಾಜ್ ವ್ಯವಸ್ಥೆ ಮತ್ತು ಪಂಚಾಯತ್ ಮೀಸಲಾತಿ ವ್ಯವಸ್ಥೆ ಬಗ್ಗೆ ಮೊದಲಿನಿಂದಲೂ ಆಕ್ಷೇಪ ಮತ್ತು ವಿರೋಧ ವ್ಯಕ್ತಪಡಿಸುತ್ತಲೇ ಬರುತ್ತಿರುವ ಬಿಜೆಪಿಗೆ ಗ್ರಾಮ ಪಂಚಾಯತ್ ಚುನಾವಣೆ ಎದುರಿಸಲು ಯಾವುದೇ ನೈತಿಕತೆಯಿಲ್ಲ. ಆದರೂ ಕೂಡಾ ಬಿಜೆಪಿ ಚುನಾವಣೆ ನಡೆಯುವ ಮೊದಲೆ ನಾವೇ ಗೆಲ್ಲುತ್ತೇವೆ ಎನ್ನುವ ಮೂಲಕ ಮತದಾನದ ವ್ಯವಸ್ಥೆಯನ್ನೇ ಬುಡಮೇಲುಗೊಳಿಸುವ ಪ್ರಯತ್ನ ನಡೆಸುತ್ತಿದೆ. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಗಟ್ಟಿಗೊಳಿಸಲು, ಗ್ರಾಮಸ್ವರಾಜ್ ವ್ಯವಸ್ಥೆಯನ್ನು ಬಲ ಪಡಿಸಲು ಕಾಂಗ್ರೆಸ್ ನಿರಂತರ ಪ್ರಯತ್ನ ನಡೆಸುತ್ತಿದ್ದು, ಗ್ರಾ.ಪಂ. ಚುನಾವಣೆ ಕಾಂಗ್ರೆಸ್‌ಗೆ ವರದಾನವಾಗಲಿದೆ ಎಂದರು.

ಇದನ್ನೂ ಓದಿ:ಪಿಎಂ ಕಿಸಾನ್ ಸಮ್ಮಾನ್ ನಿಧಿ ಬಿಡುಗಡೆ: ಆರು ರಾಜ್ಯದ ಕೃಷಿಕರ ಜೊತೆ ಮೋದಿ ಸಂವಾದ

ಪಕ್ಷದ ಚಿಹ್ನೆ ರಹಿತವಾಗಿ ನಡೆಯುವ ಚುನಾವಣೆ ಇದಾದರೂ ಬಿಜೆಪಿಯು ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲೂ ನಾವೇ ಗೆಲ್ಲುತ್ತೇವೆ ಎಂದು ಹೇಳುವ ಮೂಲಕ ಗ್ರಾಮಸ್ವರಾಜ್ ವ್ಯವಸ್ಥೆಗೆ ರಾಜಕೀಯ ಸ್ಪರ್ಷ ನೀಡುತ್ತಿದೆ. ಕಾಪು ಕ್ಷೇತ್ರದ 26 ಗ್ರಾಮ ಪಂಚಾಯತ್‌ಗಳಲ್ಲೂ ನಾವೇ ಗೆಲ್ಲುತ್ತೇವೆ ಎಂದು ಹೇಳುವ ಮೂಲಕ ಬಿಜೆಪಿ ಮತದಾರರ ಗಮನ ಸೆಳೆಯುವ ಪ್ರಯತ್ನ ನಡೆಸುತ್ತಿದೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜನರೇ ತೀರ್ಮಾನಿಸಿ, ಮತದಾನ ಮಾಡಲಿದ್ದು ಇಲ್ಲಿ ಬರುವ ಫಲಿತಾಂಶವನ್ನು ಸ್ವೀಕರಿಸಲು ನಾವು ಬದ್ಧರಾಗಿದ್ದೇವೆ ಎಂದರು.

Advertisement

ಕಾಂಗ್ರೆಸ್ ಪರ ಮತದಾರರ ಒಲವು : ಕೇಂದ್ರ ಮತ್ತು ರಾಜ್ಯ ಹಾಗೂ ಉಡುಪಿ ಜಿಲ್ಲೆಯಲ್ಲಿ ಸಂಸದರು, ಶಾಸಕರು, ಜಿ.ಪಂ., ತಾ.ಪಂ. ಸಹಿತ ಎಲ್ಲಾ ಕಡೆಗಳಲ್ಲೂ ಬಿಜೆಪಿ ಆಡಳಿತವಿದ್ದರೂ ಅಭಿವೃದ್ಧಿ ಮಾತ್ರ ಕುಂಠಿತವಾಗಿದೆ. ಕೋವಿಡ್ ನಿಯಂತ್ರಣಕ್ಕೆ ತರುವಲ್ಲಿ ಕೇಂದ್ರ – ರಾಜ್ಯಗಳು ವಿಫಲವಾಗಿವೆ. ಭೂ ಮಸೂದೆ ಕಾಯ್ದೆ, ಎಪಿಎಂಸಿ ಕಾಯ್ದೆ, ಕಾರ್ಮಿಕ ಕಾಯ್ದೆ ಸಹಿತವಾಗಿ ಡಿಸೇಲ್, ಪೆಟ್ರೋಲಿಯಂ, ಗ್ಯಾಸ್ ಬೆಲೆ ಏರಿಕೆ, ವಿದ್ಯುತ್ ಬಿಲ್, ನೀರಿನ ತೆರಿಗೆ, ತೆರಿಗೆ ಏರಿಕೆಯಿಂದ ಜನ ರೋಸಿ ಹೋಗಿದ್ದು, ಈ ಕಾರಣದಿಂದ ಜನರ ಒಲವು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪರ ಇದೆ ಎಂದರು.

ಇದನ್ನೂ ಓದಿ: ಬಾಕ್ಸಿಂಗ್ ಡೇ ಪಂದ್ಯಕ್ಕೆ ತಂಡ ಪ್ರಕಟ: ಇಬ್ಬರು ಪದಾರ್ಪಣೆ, ಕನ್ನಡಿಗನಿಗೆ ನಿರಾಸೆ!

ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ಕಾಂಗ್ರೆಸ್ ಉಸ್ತುವಾರಿ ಅಣ್ಣಯ್ಯ ಶೇರಿಗಾರ್, ಕೆಪಿಸಿಸಿ ಕೋ. ಆರ್ಡಿನೇಟರ್ ನವೀನ್‌ಚಂದ್ರ ಜೆ. ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರಭಾ ಬಿ. ಶೆಟ್ಟಿ, ಯುವ ಕಾಂಗ್ರೆಸ್ ಉಸ್ತುವಾರಿ ಅಖಿಲೇಶ್ ಕೋಟ್ಯಾನ್, ಉಡುಪಿ ಜಿ.ಪಂ. ಸದಸ್ಯ ವಿಲ್ಸನ್ ರೋಡ್ರಿಗಸ್, ತಾ.ಪಂ. ಉಪಾಧ್ಯಕ್ಷ ಯು.ಸಿ. ಶೇಖಬ್ಬ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next