Advertisement

“ಮ್ಯಾಜಿಕ್‌ ಸಂಖ್ಯೆ’ಕಾಯ್ದುಕೊಳ್ಳಲು ಕಮಲ ಕಸರತ್ತು

11:55 PM Jul 13, 2019 | Lakshmi GovindaRaj |

ಬೆಂಗಳೂರು: ರಾಜ್ಯದ ಮೈತ್ರಿ ಸರ್ಕಾರದ ಭವಿಷ್ಯ ನಿರ್ಣಾಯಕ ಹಂತ ತಲುಪುತ್ತಿದ್ದಂತೆ ಬಿಜೆಪಿಯೂ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. ಸದ್ಯ 107 ಶಾಸಕ ಬಲದ ಜತೆಗೆ, ಮೈತ್ರಿ ಪಕ್ಷಗಳ ಸಂಖ್ಯಾಬಲವನ್ನು ಇನ್ನಷ್ಟು ಇಳಿಕೆ ಮಾಡುವ ಪ್ರಯತ್ನ ಮುಂದುವರಿಸಿ, “ಮ್ಯಾಜಿಕ್‌ ಸಂಖ್ಯೆ’ಯನ್ನು ಕಾಯ್ದುಕೊಳ್ಳಲು ಕಾರ್ಯತಂತ್ರ ಹೆಣೆಯುತ್ತಿದೆ.

Advertisement

ಇನ್ನೊಂದೆಡೆ, ದಿಢೀರ್‌ ರಾಜಕೀಯ ಬೆಳವಣಿಗೆಗಳು, ಅದಕ್ಕೆ ಪೂರಕವಾಗಿ ಹುಟ್ಟಿಕೊಳ್ಳುವ ಊಹಾಪೋಹ, ವದಂತಿಗಳು, ರಾಜೀನಾಮೆ ನೀಡಿ ಮುಂಬೈ ಸೇರಿರುವ ಶಾಸಕರ ನಿಲುವಿನ ಮೇಲೆ ಪರಿಣಾಮ ಬೀರದಂತೆ ತಡೆಯುವುದರ ಜತೆಗೆ ವಾಸ್ತವಾಂಶವನ್ನು ಮನವರಿಕೆ ಮಾಡಿಕೊಡುವ ಕಾರ್ಯವನ್ನೂ ಬಿಜೆಪಿ ನಡೆಸಿದೆ.

ಇದರಿಂದಾಗಿ ಅತೃಪ್ತ ಶಾಸಕರು ತಮ್ಮ ನಿಲುವಿಗೆ ಬದ್ಧರಾಗಿರುವಂತೆ ನೋಡಿಕೊಳ್ಳುವ ಮೂಲಕ ಮುಖ್ಯಮಂತ್ರಿಯವರ ವಿಶ್ವಾಸಮತ ಯಾಚನೆ ವಿಫ‌ಲವಾಗುವಂತೆ ಮಾಡುವ ಪ್ರಯತ್ನ ಮುಂದುವರಿಸಿದೆ ಎಂದು ಮೂಲಗಳು ತಿಳಿಸಿವೆ.

ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಆದ್ಯತೆ: ಈ ನಡುವೆ, ರಾಜೀನಾಮೆ ನೀಡಿರುವ ಅತೃಪ್ತ ಶಾಸಕರ ಮನವೊಲಿಕೆಗೆ ಕಾಂಗ್ರೆಸ್‌ ನಾಯಕರು ಮುಂದಾಗಿದ್ದು, ಆರಂಭಿಕ ಯಶಸ್ಸು ಸಾಧಿಸಿರುವಂತೆ ಕಾಣುತ್ತಿದೆ. ಹಾಗಾಗಿ, ಬಿಜೆಪಿ ಈಗ ಶಾಸಕರನ್ನು ಒಗ್ಗಟ್ಟಾಗಿ ಇಟ್ಟುಕೊಳ್ಳಲು ಆದ್ಯತೆ ನೀಡಿದೆ.

ಸದ್ಯ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಎಸ್‌ಪಿ ಸೇರಿ 101 ಶಾಸಕರಿದ್ದಾರೆ. ರಾಜೀನಾಮೆ ನೀಡಿರುವ ಶಾಸಕರ ಪೈಕಿ ರಾಮಲಿಂಗಾರೆಡ್ಡಿ, ರೋಷನ್‌ ಬೇಗ್‌, ಎಂ.ಟಿ.ಬಿ.ನಾಗರಾಜ್‌, ಸುಧಾಕರ್‌ ಅವರ ಮನವೊಲಿಸಿ ರಾಜೀನಾಮೆ ಹಿಂಪಡೆದರೆ ಸಂಖ್ಯೆ 105ಕ್ಕೆ ಏರಿಕೆಯಾಗಲಿದೆ.

Advertisement

ಪಕ್ಷೇತರರನ್ನು ಮತ್ತೆ ಸೆಳೆದರೆ 107ಕ್ಕೆ ಹೆಚ್ಚಳವಾಗಲಿದೆ. ಜತೆಗೆ, ಮುಂಬೈನಲ್ಲಿರುವ ಅತೃಪ್ತ ಶಾಸಕರ ಪೈಕಿ ಮೂರು ಮಂದಿಯನ್ನು ಸೆಳೆಯಲು ಆಡಳಿತ ಪಕ್ಷದವರು ಮುಂದಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ, ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಮುಂದಾಗಿದೆ.

ಬಿಜೆಪಿ ನಿಗಾ: 105 ಶಾಸಕರ ಬಲದೊಂದಿಗೆ ಇಬ್ಬರು ಪಕ್ಷೇತರರು ಈಗಾಗಲೇ ಬೆಂಬಲ ಘೋಷಿಸಿರುವುದರಿಂದ ಬಿಜೆಪಿ ಶಾಸಕರ ಬಲ ಈಗ 107ಕ್ಕೆ ಏರಿಕೆಯಾಗಿದೆ. ಹೀಗಾಗಿ, ಯಾವ ಶಾಸಕರೂ ಪಕ್ಷ ಬಿಟ್ಟು ಹೋಗದಂತೆ ಹಿಡಿದಿಟ್ಟುಕೊಳ್ಳುವುದು ಅದರ ಮೊದಲ ಆದ್ಯತೆಯಾಗಿದೆ. ಮಹಿಳಾ ಶಾಸಕಿಯರು ಸೇರಿದಂತೆ ಇನ್ನೂ ಮೂರ್‍ನಾಲ್ಕು ಮಂದಿ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳಿವೆ.

ಆ ಬೆಳವಣಿಗೆಯಾದರೆ ಬಿಜೆಪಿಯ ಸಂಖ್ಯಾಬಲ ಮ್ಯಾಜಿಕ್‌ ಸಂಖ್ಯೆಗಿಂತಲೂ ಹೆಚ್ಚಾಗಲಿದೆ. ಹಾಗಾಗಿ, ಶಾಸಕರನ್ನು ಒಟ್ಟಿಗೆ ಇಟ್ಟುಕೊಳ್ಳುವುದರ ಜತೆಗೆ ಉಳಿದ ಅತೃಪ್ತ ಶಾಸಕರು ರಾಜೀನಾಮೆ ನೀಡಲಿದ್ದಾರೆಯೇ ಎಂಬ ಬಗ್ಗೆ ಬಿಜೆಪಿ ನಿಗಾ ವಹಿಸಿದೆ.

ಶಾಸಕರಿಗೆ ತಾಳ್ಮೆ ಪಾಠ: ರೆಸಾರ್ಟ್‌ನಲ್ಲಿ ವಾಸ್ತವ್ಯಹೂಡಿರುವ ಬಿಜೆಪಿ ಶಾಸಕರೊಂದಿಗೆ ಶನಿವಾರ ಸಭೆ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ತಾಳ್ಮೆಯ ಪಾಠ ಮಾಡಿದ್ದಾರೆ. ಅಧಿವೇಶನದುದ್ದಕ್ಕೂ ಶಾಸಕರು ಒಗ್ಗಟ್ಟಾಗಿ ಇರಬೇಕು.

ಸರ್ಕಾರ ವಿಶ್ವಾಸಮತ ಸಾಬೀತುಪಡಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾದರೆ ಅನಗತ್ಯವಾಗಿ ಬಿಜೆಪಿ ಹಾಗೂ ನಾಯಕರ ಮೇಲೆ ಆರೋಪ ಮಾಡಬಹುದು. “ಆಪರೇಷನ್‌ ಕಮಲ’, ಪ್ರಧಾನಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಸರ್ಕಾರ ಕೆಡವಲು ಷಡ್ಯಂತ್ರ ನಡೆಸಲಿದ್ದಾರೆ ಎಂಬುದಾಗಿ ಸುಳ್ಳು ಆರೋಪ ಮಾಡಿ ಪ್ರಚೋದನೆ ಮಾಡಬಹುದು.

ಇದಕ್ಕೆಲ್ಲಾ ಸಹನೆ ಕಳೆದುಕೊಳ್ಳಬಾರದು. ಒಂದೊಮ್ಮೆ ಬಿಜೆಪಿ ಶಾಸಕರು ಪ್ರತಿಕ್ರಿಯಿಸಲಾರಂಭಿಸಿದರೆ ಅದನ್ನೆ ನೆಪ ಮಾಡಿಕೊಂಡು ಅಮಾನತುಪಡಿಸಿ ಸಂಖ್ಯಾಬಲ ಇಳಿಕೆ ಮಾಡುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ, ಎಚ್ಚರದಿಂದ ವರ್ತಿಸಬೇಕು ಎಂದು ಸೂಚನೆ ನೀಡಿದ್ದಾರೆಂದು ಮೂಲಗಳು ಹೇಳಿವೆ.

ಬಿಜೆಪಿ ಮತ್ತೆ ಜೆಡಿಎಸ್‌ನೊಂದಿಗೆ ಸರ್ಕಾರ ರಚಿಸುವ ಬಗ್ಗೆ ಚಿಂತಿಸಿದೆ ಎಂದು ಬಿಂಬಿಸುವ ಮೂಲಕ ಅತೃಪ್ತರಲ್ಲಿ ಒಡಕು ಮೂಡಿಸುವ ಪ್ರಯತ್ನ ನಿರಂತರವಾಗಿ ನಡೆದಿದೆ. ಈ ರೀತಿಯ ಗೊಂದಲ ಇನ್ನೂ ಕೆಲ ದಿನ ಮುಂದುವರಿಯುವ ನಿರೀಕ್ಷೆಯಿದೆ.

ಈ ಬಗ್ಗೆಯೂ ಎಚ್ಚರ ವಹಿಸಲಾಗಿದ್ದು, ವದಂತಿ, ಗೊಂದಲಗಳಿಗೆ ಅವಕಾಶ ನೀಡದಂತೆ ಪಕ್ಷದ ಶಾಸಕರು ಹಾಗೂ ಅತೃಪ್ತ ಶಾಸಕರಿಗೂ ನಿರಂತರವಾಗಿ ಸರಿಯಾದ ಮಾಹಿತಿ ಒದಗಿಸುವ ಕಾರ್ಯ ನಡೆದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಒಟ್ಟಾರೆ, ಮುಖ್ಯಮಂತ್ರಿಯವರು ಈಗಾಗಲೇ ಘೋಷಿಸಿದಂತೆ ವಿಶ್ವಾತಮತ ಯಾಚನೆಗೆ ಮುಂದಾದರೆ ಅದು ವಿಫ‌ಲವಾಗುವಂತೆ ನೋಡಿಕೊಳ್ಳಲು ಅಗತ್ಯವಿರುವ ಎಲ್ಲ ರಾಜಕೀಯ ದಾಳಗಳನ್ನು ಉರುಳಿಸಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ. ಆದರೆ, ಅದು ಎಷ್ಟರ ಮಟ್ಟಿಗೆ ಕಾರ್ಯಗತವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಅತೃಪ್ತರಿಗೆ ನಿರಂತರ ಮನವರಿಕೆ: ಮುಂಬೈನ ಹೋಟೆಲ್‌ನಲ್ಲಿರುವ ಅತೃಪ್ತ ಶಾಸಕರು ರಾಜ್ಯ ರಾಜಕೀಯದಲ್ಲಿನ ಕೆಲ ಬೆಳವಣಿಗೆಯಿಂದ ವಿಚಲಿತರಾಗದಂತೆ ತಡೆಯುವುದರ ಜತೆಗೆ ಸೂಕ್ತ ರೀತಿಯಲ್ಲಿ ಅವರಿಗೆ ಮನವರಿಕೆ ಮಾಡುವ ಕಾರ್ಯವೂ ಬಿಜೆಪಿಯಿಂದ ನಿರಂತರವಾಗಿ ನಡೆದಂತಿದೆ.

ಅತೃಪ್ತರ ಪರ ಸುಪ್ರೀಂಕೋರ್ಟ್‌ನಲ್ಲಿ ವಕಾಲತ್ತು ವಹಿಸಿರುವ ಹಿರಿಯ ನ್ಯಾಯವಾದಿ ಮುಕುಲ್‌ ರೋಹ್ಟಗಿ ಅವರು, ರಾಜೀನಾಮೆ ಸಲ್ಲಿಸಿರುವ ಶಾಸಕರಿಗೆ ಅನರ್ಹತೆಗೆ ಗುರಿಯಾಗುವ ಸಾಧ್ಯತೆ ಇಲ್ಲ ಎಂಬುದನ್ನು ಸೂಕ್ತ ರೀತಿಯಲ್ಲಿ ಮನವರಿಕೆ ಮಾಡಿಕೊಟ್ಟಿದ್ದಾರೆ. ಹಾಗಾಗಿ, ಆ ಶಾಸಕರೆಲ್ಲ ತಮ್ಮ ನಿಲುವಿಗೆ ಬದ್ಧರಾಗಿದ್ದಾರೆ ಎಂಬ ವಿಶ್ವಾಸವೂ ಬಿಜೆಪಿಯಲ್ಲಿದೆ ಎಂದು ಮೂಲಗಳು ಹೇಳಿವೆ.

* ಎಂ.ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next