ದಾವಣಗೆರೆ: ಜನಸಾಮಾನ್ಯರು ಬದುಕು ನಡೆಸಲು ಆಗದ ರೀತಿಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಜನರ ಲಕ್ಷé ಬೇರೆಡೆ ಸೆಳೆಯಲು ಬಿಜೆಪಿಯವರು ರಾಜ್ಯದಲ್ಲಿ ಹಲಾಲ್, ಹಿಜಾಬ್, ಅಜಾನ್, ಮಾವು ವ್ಯಾಪಾರ ಬಂದ್ ಎಂದೆಲ್ಲ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಅಶಾಂತಿ ಸೃಷ್ಟಿಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಆರೋಪಿಸಿದರು.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ-ಮುಸ್ಲಿಮರು ಸಹೋದರರಂತೆ ಬದುಕುತ್ತಿದ್ದೆವು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕೋಮು ಸಾಮರಸ್ಯ ಹದಗೆಡಿಸಿ ರಾಜ್ಯದಲ್ಲಿ ಅಶಾಂತಿ ಉಂಟು ಮಾಡುವ ಪ್ರಯತ್ನ ನಡೆಸುತ್ತಿದೆ. 2023ರ ವಿಧಾನಸಭೆ ಚುನಾವಣೆಗೂ ಮುನ್ನವೇ ಬಿಜೆಪಿಯವರು ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಿ ಮತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.
ಬೆಂಗಳೂರಿನಲ್ಲಿ ಚಂದ್ರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕೋಮು ಗಲಭೆಗೆ ಪ್ರಚೋದನೆ ನೀಡುವಂಥ ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ಎಲ್ಲ ಪೊಲೀಸ್ ಠಾಣೆಗಳಲ್ಲಿ ದೂರು ಸಲ್ಲಿಸಲಾಗುತ್ತಿದ್ದು, ನಗರದಲ್ಲಿಯೂ ದೂರು ದಾಖಲಿಸಲಾಗುವುದು ಎಂದರು. ಮಹಾನಗರ ಪಾಲಿಕೆ ವಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ್ ಮಾತನಾಡಿ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳ್ಳೋ ಅಥವಾ ಸಂಘ ಪರಿವಾರದ ಪ್ರತಿನಿಧಿಯೋ ಎಂಬ ಅನುಮಾನ ಬರುತ್ತಿದೆ. ಜಿನ್ನಾ ರೀತಿಯಲ್ಲಿ ಮೋದಿ ಪಟಾಲಂ ದೇಶ ಇಬ್ಭಾಗ ಮಾಡಲು ಹೊರಟಿದೆ. ರಾಜ್ಯದಲ್ಲಿ ಸಂಪೂರ್ಣ ಸಂಘ ಪರಿವಾರದ ಆಡಳಿತ ನಡೆಯುತ್ತಿದ್ದು ಬಸವರಾಜ ಬೊಮ್ಮಾಯಿ ಡಮ್ಮಿ ಮುಖ್ಯಮಂತ್ರಿ ಎಂದು ವ್ಯಂಗ್ಯವಾಡಿದರು.
ಮಹಾನಗರ ಪಾಲಿಕೆ ಸದಸ್ಯ ಎ. ನಾಗರಾಜ್ ಮಾತನಾಡಿ, ಸಮಾಜ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವವರು, ಕುಮ್ಮಕ್ಕು ನೀಡುವವರನ್ನು ಸರ್ಕಾರ ಕೂಡಲೇ ಬಂಧಿಸಿ, ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಮಹಾನಗರ ಪಾಲಿಕೆ ಸದಸ್ಯ ಕೆ. ಚಮನ್ ಸಾಬ್, ಪ್ರಮುಖರಾದ ಹುಲ್ಲುಮನಿ ಗಣೇಶ್, ಡಿ. ಶಿವಕುಮಾರ್, ಲಿಯಾಕತ್ ಅಲಿ, ಮಹಮದ್ ಜಿಕ್ರಿಯಾ, ಖಾಸೀಂ ಸಾಬ್, ಬಾಷಾ, ಹರೀಶ್, ಫಾರುಖ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.