ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಗಳ ಎಲ್ಲ 13 ಸ್ಥಾನಗಳಿಗೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳ ಪೂರ್ಣ ಪಟ್ಟಿ ಬಿಡುಗಡೆಯಾಗಿದೆ. ಈ ಹಿಂದಿನ ಚುನಾವಣೆಗಳ ಸಂದರ್ಭದಲ್ಲಿ ಬಿಜೆಪಿ ಸಾಮಾನ್ಯವಾಗಿ ಇತರ ಪಕ್ಷಗಳಿಗಿಂತ ಮೊದಲೇ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದ್ದರೆ, ಈ ಬಾರಿ ಪರಿಸ್ಥಿತಿ ಭಿನ್ನವಾಗಿತ್ತು. ಶುಕ್ರವಾರ ತಡ ಸಂಜೆಯ ವೇಳೆಗೆ ಉಳಿಕೆಯಾಗಿದ್ದ ಐದು ಸ್ಥಾನಗಳಿಗೆ ಅಭ್ಯರ್ಥಿಗಳ ಘೋಷಣೆಯಾಯಿತು.
ದ. ಕನ್ನಡದ 8 ಸ್ಥಾನಗಳ ಪೈಕಿ ಮೀಸಲು ಕ್ಷೇತ್ರವಾದ ಸುಳ್ಯದಲ್ಲಿ ಹಾಲಿ ಶಾಸಕ ಎಸ್. ಅಂಗಾರ ಅವರು ಮತ್ತೆ ಕಣದಲ್ಲಿದ್ದಾರೆ. ಬಂಟ್ವಾಳ ದಲ್ಲಿ ರಾಜೇಶ್ ನಾೖಕ್ ಉಳಿಪಾಡಿ, ಪುತ್ತೂರಿನಲ್ಲಿ ಸಂಜೀವ ಮಠಂದೂರು, ಮೂಡಬಿದಿರೆಯಲ್ಲಿ ಉಮಾನಾಥ ಕೋಟ್ಯಾನ್. ಕಳೆದ ಬಾರಿ ಸ್ಪರ್ಧಿಸಿದವರು ಈ ಬಾರಿಯೂ ಸ್ಪರ್ಧಿಸು ತ್ತಿದ್ದಾರೆ. ಮಂಗಳೂರು ದಕ್ಷಿಣದಿಂದ ವೇದವ್ಯಾಸ ಕಾಮತ್, ಮಂಗಳೂರು ಉತ್ತರದಿಂದ ಡಾ| ಭರತ್ ಶೆಟ್ಟಿ, ಮಂಗಳೂರು ಕ್ಷೇತ್ರದಿಂದ ಸಂತೋಷ್ ಕುಮಾರ್ ರೈ ಬೋಳಿಯಾರು, ಬೆಳ್ತಂಗಡಿಯಿಂದ ಹರೀಶ್ ಪೂಂಜ ಸ್ಪರ್ಧಿಸುತ್ತಿದ್ದಾರೆ. ಅವರೆಲ್ಲರೂ ಬಿಜೆಪಿಯಿಂದ ಮೊದಲ ಬಾರಿಗೆ ಸ್ಪರ್ಧಿಸುತ್ತಿದ್ದಾರೆ ಅನ್ನುವುದು ಗಮನಾರ್ಹವಾದ ಸಂಗತಿ.
ಉಡುಪಿ ಜಿಲ್ಲೆಯ 5 ಸ್ಥಾನಗಳ ಪೈಕಿ ಕಾರ್ಕಳ ಕ್ಷೇತ್ರದ ಹಾಲಿ ಶಾಸಕ ವಿ. ಸುನಿಲ್‌ಕುಮಾರ್ ಮತ್ತೆ ಕಣದಲ್ಲಿದ್ದಾರೆ. 2013ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಜಯಿಸಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ತಮ್ಮ ಮೂಲಪಕ್ಷ ಬಿಜೆಪಿಗೆ ಮರಳಿ; ಬಿಜೆಪಿಯಿಂದ ಸ್ಪರ್ಧಿಸು ತ್ತಿದ್ದಾರೆ. ಕಳೆದ ಬಾರಿ ಕಾಪುವಿನಿಂದ ಸ್ಪರ್ಧಿಸಿದ್ದ ಲಾಲಾಜಿ ಮೆಂಡನ್, ಬೈಂದೂರಿನಿಂದ ಸ್ಪರ್ಧಿಸಿದ್ದ ಬಿ. ಎಂ. ಸುಕುಮಾರ ಶೆಟ್ಟಿ ಅವರು ಮತ್ತೆ ಬಿಜೆಪಿಯ ಟಿಕೆಟ್ ಪಡೆದಿದ್ದಾರೆ. ಉಡುಪಿ ಕ್ಷೇತ್ರದಲ್ಲಿ ಎಂ. ರಘುಪತಿ ಭಟ್‌ಗೆ ಟಿಕೆಟ್ ದೊರೆತಿದೆ.
ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಮಂಗಳೂರು, ಉಡುಪಿ, ಕಾಪು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿ ಸಾಕಷ್ಟು ಸಮಯವನ್ನು ಬಳಸಿಕೊಂಡಿತು. ಇಲ್ಲಿ ತುಂಬಾ ಮಂದಿ ಆಕಾಂಕ್ಷಿಗಳಿದ್ದರು ಎಂಬುದು ಈ ವಿಳಂಬ ಅಥವಾ ಕಾದು ನೋಡುವ ತಂತ್ರಕ್ಕೆ ಕಾರಣವಾಗಿತ್ತು ಎಂಬುದು ವಾಸ್ತವ.
ಬಿಜೆಪಿಯ ಪಟ್ಟಿಯನ್ನು ಗಮನಿಸಿದರೆ ಇಬ್ಬರು ಹಾಲಿ ಶಾಸಕರು (ಸುನಿಲ್, ಅಂಗಾರ); ಮೂಲ ಬಿಜೆಪಿಗರಾಗಿ, ಪಕ್ಷೇತರರಾಗಿ ಮತ್ತೆ ಬಿಜೆಪಿಗರಾಗಿರುವ ಓರ್ವರು (ಹಾಲಾಡಿ), ಕಳೆದ ಬಾರಿ ಸ್ಪರ್ಧಿಸಿದ್ದ ಈ ಮೂವರ ಸಹಿತ 8 ಮಂದಿ ಟಿಕೆಟ್ ಪಡೆದಿದ್ದಾರೆ. ನಾಲ್ವರು (ಕಾಮತ್, ಡಾ| ಶೆಟ್ಟಿ, ಬೊಳಿಯಾರ್, ಪೂಂಜ) ಮೊದಲ ಬಾರಿಗೆ ಬಿಜೆಪಿಯ ಟಿಕೆಟ್ ಪಡೆದವರು.
ಶಿಸ್ತಿನ ಪಕ್ಷ ಎಂದೇ ಹೆಸರಾಗಿದ್ದ ಬಿಜೆಪಿಯ ಮಟ್ಟಿಗೆ ಕೆಲವು ಕ್ಷೇತ್ರಗಳಲ್ಲಿ ಸಮಾಧಾನದ ಪರಿಸ್ಥಿತಿ ಇಲ್ಲ. (ಕಾಂಗ್ರೆಸ್ ಗೂ ಇದೇ ಪರಿಸ್ಥಿತಿ ಇದೆ). ಟಿಕೆಟ್ ದೊರೆಯದ ನಾಯಕರನೇಕರು ತಮ್ಮ ಅಸಮಾಧಾನವನ್ನು ನೇರವಾಗಿಯೇ ತೋರ್ಪಡಿಸಿದ್ದಾರೆ. ಅವರನ್ನು ಸಮಾಧಾನಿಸುವ ಕಾರ್ಯಕ್ಕೆ ವರಿಷ್ಠರು ಮುಂದಾಗಿದ್ದಾರೆ.
ಅಂದ ಹಾಗೆ …
ಜಿಲ್ಲೆಯಲ್ಲಿ ಬಿಜೆಪಿಯ 13 ಅಭ್ಯರ್ಥಿಗಳ ಪೈಕಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಲಾಗಿಲ್ಲ. 9 ಮಂದಿ ಚುನಾವಣಾ ರಾಜಕೀಯದ ಅನುಭವಿಗಳು; 4 ಮಂದಿ ಮೊದಲ ಬಾರಿ ಸ್ಪರ್ಧಿಸುತ್ತಿರುವವರು. ಸ್ಪರ್ಧಿಗಳಲ್ಲಿ ಬಂಟ ಸಮಾಜದವರು- 6, ಬಿಲ್ಲವರು- 2. ಮೊಗವೀರ, ಪರಿಶಿಷ್ಟ, ಗೌಡ, ಜಿಎಸ್‌ಬಿ, ಬ್ರಾಹ್ಮಣ ಸಮಾಜದ ತಲಾ ಓರ್ವರು.
ಮನೋಹರ ಪ್ರಸಾದ್