Advertisement

ವಿಶ್ವಾಸ ಮತ ಗೆಲ್ಲಲು ಬಿಜೆಪಿ ಕಾರ್ಯತಂತ್ರ

06:15 AM May 19, 2018 | |

ಬೆಂಗಳೂರು: ಶನಿವಾರವೇ ಬಹುಮತ ಸಾಬೀತು ಮಾಡುವಂತೆ ಸುಪ್ರೀಂಕೋರ್ಟ್‌ಆದೇಶ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಮುಂದಿನ ಕಾರ್ಯ ತಂತ್ರಗಳ ಬಗ್ಗೆ ಶುಕ್ರವಾರ ದಿನವಿಡೀ ಸಮಾಲೋಚನೆ ನಡೆಸಿದರು.

Advertisement

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್‌ ಜಾವಡೇಕರ್‌, ರಾಜ್ಯ ಉಸ್ತುವಾರಿ ಮುರಳೀಧರ್‌ರಾವ್‌, ಕೇಂದ್ರ ಸಚಿವ ಜೆ.ಪಿ.ನಡ್ಡಾ ಖಾಸಗಿ ಹೊಟೇಲ್‌ನಲ್ಲಿ ಚರ್ಚಿಸಿ, ವಿಶ್ವಾಸ ಮತ ಯಾಚನೆ ಗೆಲ್ಲುವ ರಹಸ್ಯ ಕಾರ್ಯತಂತ್ರ ರೂಪಿಸಿದರು. ನಂತರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲೂ ಸಿಎಂ ಯಡಿಯೂರಪ್ಪ ಅವರು, ನಾವು ಖಂಡಿತವಾಗಿ ವಿಶ್ವಾಸ ಮತದಲ್ಲಿ ಗೆಲ್ಲಲಿದ್ದೇವೆ. ನಮ್ಮ ಶಾಸಕರು ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದರು. ವಿಶ್ವಾಸಮತ ಹೇಗೆ ಗೆಲ್ಲುತ್ತೇವೆ ಎಂಬುದು ನಾನು ಹೇಳಲು ಆಗುವುದಿಲ್ಲ. ಆದರೆ, ಖಂಡಿತವಾಗಿಯೂ ನಮಗೆ ಜಯ ಸಿಗಲಿದೆ ಎಂದು ಹೇಳಿದರು.

ಈ ಮಧ್ಯೆ, ಕೆ.ಜೆ.ಬೋಪಯ್ಯ ಅವರನ್ನು ಹಂಗಾಮಿ ಸಭಾಧ್ಯ ಕ್ಷರನ್ನಾಗಿ ಮಾಡಿರುವುದು ಬಿಜೆಪಿಗೆ ಒಂದು ರೀತಿಯ
ಧೈರ್ಯ ಬಂದಂತಾಗಿದ್ದು, ನಾಳೆ ಯವರೆಗೂ ಕಾದು ನೋಡಿ ಎಂದೇ ಎಲ್ಲ ನಾಯಕರು ಹೇಳುತ್ತಿದ್ದಾರೆ. ಹೀಗಾಗಿ, ಬಿಜೆಪಿ ಏನು ಮಾಡಲಿದೆ ಎಂಬುದು ಇನ್ನೂ ನಿಗೂಢವಾಗಿಯೇ ಇದೆ. ಮೂಲಗಳ ಪ್ರಕಾರ ಮಠಾಧೀಶರ ಮೂಲಕ ಹತ್ತಕ್ಕೂ ಹೆಚ್ಚು ಶಾಸಕರನ್ನು ಬಿಜೆಪಿ ಸಂಪರ್ಕಿಸಿದೆ. ಕೆಲವರು ಪ್ರಮಾಣ ವಚನ ಸ್ವೀಕಾರ ಮಾಡದೆ ಹೊರಗೆ ಉಳಿಯಬಹುದು. ಮತ್ತೆ ಕೆಲವರು ಸದನದಲ್ಲಿ ಹಾಜರಾದರೂ ಬಿಜೆಪಿ ಪರ ಮತ
ಚಲಾಯಿಸಬಹುದು ಎಂದು ಹೇಳಲಾಗಿದೆ.

ಬಿಜೆಪಿ ವಾದವೇನು?: ಎಂಟು ಶಾಸಕರು ಬಿಜೆಪಿ ಪರ ಮತ ಚಲಾಯಿಸಿದರೆ ಯಡಿಯೂರಪ್ಪ ಸರ್ಕಾರ ಬಹುಮತ ಪಡೆಯಲಿದೆ. ಸರ್ಕಾರ ಬಹುಮತ ಪಡೆದ ನಂತರ ಶಾಸಕರ ಅನರ್ಹತೆ ವಿಚಾರ ಬಿಜೆಪಿ ಸರ್ಕಾರದಲ್ಲಿ ಸ್ಪೀಕರ್‌ ಆಗುವವರ ಮುಂದೆ ಬರಲಿದೆ. ನಾವು ಅವರ ರಕ್ಷಣೆಗೆ ಸುಪ್ರೀಂಕೊರ್ಟ್‌ವರೆಗೂ ಹೋಗಲು ಸಿದ್ಧ. ಹೀಗಾಗಿ, ನಮ್ಮ ಪರ ಆತ್ಮಸಾಕ್ಷಿ ಮತ ಹಾಕುವವರಿಗೆ ಶಾಸಕತ್ವ ಕಳೆದುಕೊಳ್ಳುವ ಆತಂಕ ಇರದು ಎಂಬುದು ಬಿಜೆಪಿ ನಾಯಕರ ವಾದವಾಗಿದೆ. ಆದರೆ, ಇದಕ್ಕೆ ಎಷ್ಟು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರು ಒಪ್ಪಿದ್ದಾರೆ ಎಂಬುದು ಇನ್ನೂ ಸ್ಪಷ್ಟವಿಲ್ಲ.

ತುರ್ತು ಸಭೆ: ಶುಕ್ರವಾರ ರಾತ್ರಿ ದಿಢೀರ್‌ ಶಾಸಕರ ಸಭೆ ನಡೆಸಿದ ಬಿಜೆಪಿ, ಕಾಂಗ್ರೆಸ್‌ ಅಥವಾ ಜೆಡಿಎಸ್‌ ಆಮಿಷಗಳಿಗೆ ಬಲಿಯಾಗಬಾರದು ಎಂದು ತಾಕೀತು ಮಾಡಿತು.ಜತೆಗೆ ಎಲ್ಲರೂ ಒಂದೇ ಕಡೆ ಇರಲು ನಗರದ ಶಾಂಗ್ರಿಲಾ ಹೊಟೇಲ್‌ನಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಯಿತು. ಶನಿವಾರ ಬಿಜೆಪಿ ಶಾಸಕರು ಎಲ್ಲರೂ ಒಟ್ಟಾಗಿ ಹೊಟೇಲ್‌ನಿಂದ ವಿಧಾನಸೌಧಕ್ಕೆ ನೇರವಾಗಿ ಬರಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Advertisement

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರು ಆತ್ಮಸಾಕ್ಷಿ ಮತ ನೀಡಲಿದ್ದಾರೆ. ಹೀಗಾಗಿ, ನಾವು ವಿಶ್ವಾಸಮತದಲ್ಲಿ ಗೆಲ್ಲುತ್ತೇವೆ.
– ಬಿ.ಎಸ್‌.ಯಡಿಯೂರಪ್ಪ,ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next