Advertisement

ಮತ ಕ್ರೋಢೀಕರಣಕ್ಕೆ ಬಿಜೆಪಿ ತಾಲೀಮು ಶುರು

05:24 PM Nov 14, 2020 | Suhan S |

ಬೀದರ: ಜನತಾ ಪರಿವಾರ ಮತ್ತು ಕಾಂಗ್ರೆಸ್‌ ಪಾರುಪತ್ಯ ಮೆರೆದಿರುವ ಬಸವಕಲ್ಯಾಣ ಕ್ಷೇತ್ರದಲ್ಲಿ ಕಮಲ ಅರಳಿಸಲು ಬಿಜೆಪಿ ಪಡೆ ಸಜ್ಜಾಗಿದೆ. ಚುನಾವಣಾ ಅಖಾಡಕ್ಕಿಳಿದಿರುವ ಸಿಎಂ ಪುತ್ರ, ಬಿಜೆಪಿಯ ಟ್ರಬಲ್‌ ಶೂಟರ್‌ ಬಿ.ವೈ. ವಿಜಯೇಂದ್ರ ಮೊದಲ ತಾಲೀಮಿನಲ್ಲೇ ಪ್ರಬಲ ಸಮುದಾಯಗಳ ಓಲೈಕೆಗೆ ಅಸ್ತ್ರ ಪ್ರಯೋಗಿಸಿದ್ದಾರೆ. ಇದು ಕೈ, ದಳ ಪಡೆಯಲ್ಲಿ ತಳಮಳ ಮೂಡಿಸಿದೆ.

Advertisement

ಶಿರಾ ಮತ್ತು ಆರ್‌.ಆರ್‌. ನಗರ ಉಪ ಚುನಾವಣೆಗೆಲುವಿನ ಹುಮ್ಮಸ್ಸಿನಲ್ಲಿರುವ ಬಿಜೆಪಿ ಚಿತ್ತ ಈಗ ಬಸವಣ್ಣನ ಕರ್ಮಭೂಮಿಯತ್ತ ನೆಟ್ಟಿದೆ. ಕಾಂಗ್ರೆಸ್‌ನ ಶಾಸಕ ಬಿ. ನಾರಾಯಣರಾವ್‌ ನಿಧನ ಬಳಿಕ ತೆರವಾದ ಕ್ಷೇತ್ರಕ್ಕೆ ಶೀಘ್ರ ಉಪ ಚುನಾವಣೆ ನಡೆಯಲಿದ್ದು,ಕೆಆರ್‌ ಪೇಟೆ ಹಾಗೂ ಶಿರಾ ಕ್ಷೇತ್ರದಲ್ಲಿ ಉಸ್ತುವಾರಿ ಹೊತ್ತು ಗೆಲುವಿನ ದಡ ಮುಟ್ಟಿಸಿರುವ ವಿಜಯೇಂದ್ರ ಬಸವಕಲ್ಯಾಣ ಕ್ಷೇತ್ರವನ್ನು ಶತಾಯಗತಾಯ ಬಿಜೆಪಿ ಮಡಿಲಿಗೆ ಹಾಕಿ ಹ್ಯಾಟ್ರಿಕ್‌ ಗೆಲುವಿನ ದಾಖಲೆ ನಿರ್ಮಿಸಲು ತಂತ್ರಗಾರಿಕೆ ಹೆಣೆದಿದ್ದಾರೆ.

ಬಸವಕಲ್ಯಾಣ ಕ್ಷೇತ್ರದಲ್ಲಿ ಲಿಂಗಾಯತ, ಮರಾಠಾ ಜತೆಗೆ ಮುಸ್ಲಿಂ ಪ್ರಬಲ ಸಮುದಾಯಗಳಾಗಿವೆ. ಸಾಮಾನ್ಯವಾಗಿ ಬಿಜೆಪಿ ಲಿಂಗಾಯತ, ಮರಾಠಾ ಸೇರಿ ಮೇಲ್ವರ್ಗದ ಮತ ನೆಚ್ಚಿಕೊಂಡಿದೆ. ಬೀದರ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ತವರು ಜಿಲ್ಲೆ, ಜತೆಗೆ ಜನ ನಾಯಕರು ಎನಿಸಿಕೊಂಡಿದ್ದ ದಿ. ನಾರಾಯಣರಾವರ ವರ್ಚಸ್ಸಿನಿಂದ ಮತ ವಿಭಜನೆ ಸಾಧ್ಯತೆ ಹೆಚ್ಚು.ಹಾಗಾಗಿ ವಿಜಯೇಂದ್ರ ಮೊದಲ ಹಂತದಲ್ಲೇ ಬಿಜೆಪಿ ಪರ ಮತಗಳ ಕ್ರೂಢೀಕರಣಕ್ಕೆ ಜಾತಿ ಓಲೈಕೆ ಆರಂಭಿಸಿದ್ದಾರೆ.

ಮುಖ್ಯವಾಗಿ ಮರಾಠಾ ಸಮುದಾಯದತ್ತ ಚಿತ್ತ ಹರಿಸಿರುವ ವಿಜಯೇಂದ್ರ ಕಲ್ಯಾಣದಲ್ಲಿ ಜರುಗಿದ ಮರಾಠಾ ಬೃಹತ್‌ ಸಭೆಯಲ್ಲಿ ಭಾಗವಹಿಸಿ ಸಮಾಜ ಬಾಂಧವರೊಂದಿಗೆ ಸಮಾಲೋಚನೆ ನಡೆಸಿದ್ದಾರಲ್ಲದೇ ಮರಾಠಾ ಅಭಿವೃದ್ಧಿ ಮಂಡಳಿ ಸ್ಥಾಪನೆ ಈಡೇರುವ ಆಶ್ವಾಸನೆ ನೀಡಿದ್ದಾರೆ. ಅಷ್ಟೇ ಅಲ್ಲ ಸಮಾಜವನ್ನು3ಬಿ ಯಿಂದ 2ಎಗೆ ಸೇರಿಸುವ ಕುರಿತು ಸಿಎಂ ಜತೆ ಚರ್ಚಿಸುವುದಾಗಿ ವಿಶ್ವಾಸ ಮೂಡಿಸಿದ್ದಾರೆ.

ಇನ್ನೂ ಉಪ ಚುನಾವಣೆ ಘೋಷಣೆಗೂ ಮುನ್ನ 500 ಕೋಟಿ ರೂ. ವೆಚ್ಚದ ನೂತನ ಅನುಭವ ಮಂಟಪಕ್ಕೆ ಅಡಿಗಲ್ಲು ನೆರವೇರಿಸಿ ಬಸವ ಭಕ್ತರ ಬಹು ದಿನಗಳ ಕನಸು ನನಸಾಗಿಸುವ ಚಿಂತನೆಬಿಜೆಪಿಯದ್ದು. ಹಾಗಾಗಿ ವಿಜಯೇಂದ್ರ ತಮ್ಮಪ್ರವಾಸದ ವೇಳೆ ಮೊದಲಿಗೆ ಅನುಭವ ಮಂಟಪಕ್ಕೆ ಭೇಟಿ ನೀಡಿ ಮಠಾಧೀಶರೊಂದಿಗೆ ಚರ್ಚೆ ಮಾಡಿ, ಮಹತ್ವದ ಯೋಜನೆಗೆ ಶೀಘ್ರ ಚಾಲನೆ ದೊರೆಯಲಿದೆಎಂದಿದ್ದಾರೆ. ಆ ಮೂಲಕ ಲಿಂಗಾಯತರ ಒಲವು ಪಕ್ಷದ ಪರ ಮತ್ತಷ್ಟು ಗಟ್ಟಿಯಾಗಿಸಲು ಲೆಕ್ಕಾಚಾರ ಹೊಂದಿದ್ದಾರೆ. ಕಾಂಗ್ರೆಸ್‌ ಸಹ ಮತ್ತೂಮ್ಮೆ ಕ್ಷೇತ್ರವನ್ನು “ಕೈ’ ವಶದಲ್ಲಿ ಇಟ್ಟಿಕೊಳ್ಳಲು ಸಜ್ಜಾಗುತ್ತಿದ್ದರೆ, ಜೆಡಿಎಸ್‌ ಸಹ ಪ್ರಬಲ ಪೈಪೋಟಿ ಕೊಡಲು ಚಿಂತನೆ ನಡೆಸಿದೆ.

Advertisement

ಆದರೆ, ಚುನಾವಣೆಗೆ ಮುಹೂರ್ತ ನಿಗದಿಗೂ ಮುನ್ನವೇ ರಾಜಕೀಯ ತಂತ್ರಗಾರಿಕೆ ಮೆರೆಯುತ್ತಿರುವ ವಿಜಯೇಂದ್ರ ಅಖಾಡಕ್ಕೆ ಧುಮುಕಿರುವುದು ಎರಡು ಪಕ್ಷಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

 

-ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next