Advertisement

ಸ್ತ್ರೀ, ರೈತರಿಗೆ ಭರಪೂರ ಭರವಸೆ; ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ

06:00 AM May 05, 2018 | |

ಬೆಂಗಳೂರು: ರಾಷ್ಟ್ರೀಕೃತ ಬ್ಯಾಂಕ್‌ ಹಾಗೂ ಸಹಕಾರ ಸಂಘಗಳಲ್ಲಿ ರೈತರು ಮಾಡಿರುವ ಒಂದು ಲಕ್ಷ ರೂ.ವರೆಗಿನ ಸಾಲ ಮನ್ನಾ, 20 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ 10 ಸಾವಿರ ಆರ್ಥಿಕ ನೆರವು, ನೀರಾವರಿ ಯೋಜನೆಗಳಿಗೆ 1.50 ಲಕ್ಷ ಕೋಟಿ ರೂ., ಬಿಪಿಎಲ್‌ ಕುಟುಂಬಗಳ ಮಹಿಳೆಯರಿಗೆ  ಸ್ಮಾರ್ಟ್‌ ಫೋನ್‌ ಹಾಗೂ ಹೆಣ್ಣು ಮಕ್ಕಳ  ಮದುವೆಗೆ 25 ಸಾವಿರ ನಗದು, ಮೂರು ಗ್ರಾಂ ಬಂಗಾರದ ತಾಳಿ, ಭಾಗ್ಯಲಕ್ಮಿ ಬಾಂಡ್‌ ಮೊತ್ತ 2ಲಕ್ಷ ರೂ.ಗೆ ಏರಿಕೆ!

Advertisement

ಇವು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಿಗುವ ಲಾಭಗಳು. ಹೀಗೆಂದು “ನಮ್ಮ ಕರ್ನಾಟಕಕ್ಕೆ ನಮ್ಮ ವಚನ’ ಬಿಜೆಪಿಯ ಪ್ರಣಾಳಿಕೆಯಲ್ಲಿ ಘೋಷಿಸಲಾಗಿದೆ. ಅಷ್ಟೇ ಅಲ್ಲ, ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೊದಲ ಸಂಪುಟ ಸಭೆಯಲ್ಲಿ ಸಾಲಮನ್ನಾ ನಿರ್ಧಾರ ಕೈಗೊಳ್ಳುವುದಾಗಿಯೂ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ. ಜತೆಗೆ ಮೂರು ತಿಂಗಳಲ್ಲಿ ನೇಕಾರರ 1ಲಕ್ಷ ರೂ. ಸಾಲ ಮನ್ನಾ ಮಾಡಲಾಗುವುದು ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಭಾಗ್ಯಗಳ ಸರಣಿಗೆ ಪ್ರತಿಯಾಗಿ ಬಿಜೆಪಿಯೂ “ಸ್ತ್ರೀ ಸುವಿಧಾ’, “ಮಿಷನ್‌ ಕಲ್ಯಾಣಿ’, “ವಿವಾಹ ಮಂಗಳ’ “ನೇಗಿಲ ಯೋಗಿ’  “ಕರ್ನಾಟಕ ಮಾಲಾ’ “ಮುಖ್ಯಮಂತ್ರಿ ಸ್ಮಾರ್ಟ್‌ ಫೋನ್‌’ ಹೆಸರಿನ ಯೋಜನೆಗಳನ್ನು ಪ್ರಕಟಿಸಲಾಗಿದೆ.

ಗೋಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯಿದೆಗೆ ಮರು ಚಾಲನೆ ನೀಡಿ ಗೋ ಸೇವಾ ಆಯೋಗ ಪುನಾರಂಭ. ದೇವಸ್ಥಾನಗಳ ಆದಾಯ ಸಂಪೂರ್ಣ ದೇವಸ್ಥಾನಗಳಿಗಾಗಿಯೇ ವೆಚ್ಚ ಮಾಡುವುದು. ದೇವಾಲಯ-ಮಠಗಳ ಪುನರುತ್ಥಾನಕ್ಕಾಗಿ 500 ಕೋಟಿ ರೂ. ನಿಧಿ, ಚಿತ್ರದುರ್ಗದಲ್ಲಿ ವೀರ ಮದಕರಿ ನಾಯಕ ಸ್ಮಾರಕ ಹಾಗೂ ವೀರ ವನಿತೆ ಒನಕೆ ಓಬವ್ವ ಸ್ಮಾರಕ ನಿರ್ಮಾಣ ಮಾಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.

ಎಸಿಬಿ ರದ್ದು ಮುನ್ಸೂಚನೆ
ಲೋಕಾಯುಕ್ತವನ್ನು ಅದರ ಸಂಪೂರ್ಣ ಅಧಿಕಾರದೊಂದಿಗೆ ಮರುಸ್ಥಾಪನೆಗೊಳಿಸುವುದು. ಭ್ರಷ್ಟಾಚಾರದ ವಿರುದ್ಧ ದೂರು ನೀಡಲು ನಾಗರಿಕರಿಗೆ ಸಹಾಯವಾಗುವಂತೆ ನೇರವಾಗಿ ಮುಖ್ಯಮಂತ್ರಿ ಕಚೇರಿ ಅಡಿಯಲ್ಲಿ ದಿನದ 24 ಗಂಟೆ ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ಸ್ಥಾಪಿಸಲಾಗುವುದು ಎಂದು ಹೇಳುವ ಮೂಲಕ ಎಸಿಬಿ ರದ್ದುಪಡಿಸುವ ಮುನ್ಸೂಚನೆಯನ್ನೂ ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಲಾಗಿದೆ. ಜತೆಗೆ, ಭ್ರಷ್ಟಾಚಾರ ಬಹಿರಂಗಪಡಿಸುವವರ ರಕ್ಷಿಸಲು ಕರ್ನಾಟಕ ವಿಶಲ್‌ ಬ್ಲೋವರ್‌ ಕಾಯಿದೆ ಜಾರಿಗೊಳಿಸಲಾಗುವುದು ಎಂದು ತಿಳಿಸಲಾಗಿದೆ.

Advertisement

ನಗರದ ಹೋಟೆಲ್‌ನಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ರೈತರ ಕಲ್ಯಾಣ-ರಾಜ್ಯದ ಕಲ್ಯಾಣ, ಮಹಿಳಾ ಸಬಲೀಕರಣ ಶಿಕ್ಷಣ ಕ್ಷೇತ್ರಕ್ಕೆ ನವ ಚೈತನ್ಯ, ಮೂಲಸೌಕರ್ಯಗಳ ವಿಸ್ತರಣೆ, ಸುರಕ್ಷಿತ ಆಡಳಿತಕ್ಕಾಗಿ ದಕ್ಷ ಆಡಳಿತ ಎಲ್ಲರ ಜತೆ ಎಲ್ಲರ ವಿಕಾಸ ನಮ್ಮ ಪ್ರಣಾಳಿಕೆಯ ಪ್ರಮುಖಾಂಶಗಳು ಎಂದು ಹೇಳಿದರು.

ರೈತರಿಗೆ ಬಂಪರ್‌ ಕೊಡುಗೆ:
ರೈತಾಪಿ ಸಮುದಾಯದ ಹಿತರಕ್ಷಣೆಗಾಗಿ ಸಾಲಮನ್ನಾ, 10 ಸಾವಿರ ರೂ. ಜತೆಗೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಗೆ ಬೆಳೆಯ ಒಂದೂವರೆ ಪಟ್ಟು ಆದಾಯ ನೀಡಲಾಗುವುದು. ರೈತ ಸ್ನೇಹಿ ಯೋಜನೆಗಳ ಅನುಷ್ಟಾನದ ಸೂಕ್ತ ಮೇಲ್ವಿಚಾರಣೆಗಾಗಿ “ಮುಖ್ಯಮಂತ್ರಿ ಕಚೇರಿಯಡಿ ರೈತಬಂಧು ವಿಭಾಗ’ ತೆರೆಯಲಾಗುವುದು. ಬೆಲೆ ಕುಸಿತ ಸಂದರ್ಭದಲ್ಲಿ ರೈತರ ನೆರವಿಗೆ ಧಾವಿಸಲು 5 ಸಾವಿರ ಕೋಟಿ ರೂ. “ರೈತ ಬಂಧು ಆವರ್ತ ನಿಧಿ’ ಸ್ಥಾಪಿಸಲಾಗುವುದು. ಭೂ ರಹಿತ ಕೃಷಿ ಕಾರ್ಮಿಕರಿಗೆ ಮುಖ್ಯಮಂತ್ರಿ ರೈತ ಸುರಕ್ಷಾ ವಿಮೆಯಡಿ 2 ಲಕ್ಷ ರೂ. ಅಪಘಾತ ವಿಮೆ ಮಾಡಿಸಲಾಗುವುದು.

ಸ್ತ್ರೀ ಶಕ್ತಿ ಬಲವರ್ಧನೆ:
ಸ್ತ್ರೀ ಶಕ್ತಿ ಮತ್ತು ಸ್ವಸಹಾಯ ಸಂಘಗಳ ಮಹಿಳೆಯರಿಗೆ ಶೇ.1ರ ಬಡ್ಡಿ ದರದಲ್ಲಿ 2ಲಕ್ಷ ರೂ.ವರೆಗೆ ಸಾಲ. 100 ಕೋಟಿ ರೂ. ಮೊತ್ತದ “ಕರ್ನಾಟಕ ಮಹಿಳಾ ಎಂಟರ್‌ಪ್ರೈಸಸ್‌ ಕ್ಲಸ್ಟರ್‌ ಪ್ರೋಗ್ರಾಮ್‌ ಸ್ಥಾಪನೆ ಮತ್ತು ಅದರ ಅಡಿಯಲ್ಲಿ ಮಹಿಳೆಯರಿಂದ ನಡೆಸಲಾಗುವ ವ್ಯಾಪಾರ ಬೆಂಬಲಕ್ಕೆ ಹೊಸ 30 ಎಂಎಸ್‌ಎಂಇ ಮಿನಿ ಕ್ಲಸ್ಟರ್‌ಗಳನ್ನು ಸ್ಥಾಪಿಸುವುದಾಗಿ ಹೇಳಲಾಗಿದೆ.

ಸ್ತ್ರೀ ಸುವಿಧಾ ಯೋಜನೆಯಡಿ ಬಿಪಿಎಲ್‌ ಕುಟುಂಬದ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರಿಗೆ ಉಚಿತ ನ್ಯಾಪಿRನ್‌, ಉಳಿದ ಮಹಿಳೆಯರಿಗೆ 1 ರೂ. ದರದಲ್ಲಿ ಸ್ಯಾನಿಟರಿ ನ್ಯಾಪಿRನ್‌, ಮಹಿಳೆಯರ ಮೇಲಿನ ಇತ್ಯರ್ಥಗೊಳ್ಳದ ದೌರ್ಜನ್ಯ ಪ್ರಕರಣಗಳ ತನಿಖೆಗೆ ಮಹಿಳಾ ಪೊಲೀಸ್‌ ಅಧಿಕಾರಿಯ ನೇತೃತ್ವದಲ್ಲಿ 1 ಸಾವಿರ ಮಹಿಳಾ ಪೊಲೀಸ್‌ ಸಿಬ್ಬಂದಿ ಇರುವ ವಿಶೇಷ ತನಿಖಾ ತಂಡ ರಚನೆ ಮಾಡಲಾಗುವುದು ಎಂದು ವಿವರಿಸಿದರು.

ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್‌ ಜಾವಡೇಕರ್‌, ರಾಜ್ಯ  ಉಸ್ತುವಾರಿ ಮುರಳೀಧರ್‌ರಾವ್‌, ಸಂಸದರಾದ ಪಿ.ಸಿ.ಮೋಹನ್‌, ಶೋಭಾ ಕರಂದ್ಲಾಜೆ, ಮಾಜಿ ಸಚಿವ ಸುರೇಶ್‌ಕುಮಾರ್‌ ಉಪಸ್ಥಿತರಿದ್ದರು.

ನಾವು  ಕಾಂಗ್ರೆಸ್‌ನಂತೆ ಈಡೇರಿಸಲಾಗದ ಭರವಸೆ ಕೊಟ್ಟಿಲ್ಲ. ಕೊಟ್ಟಿರುವ ಭರವಸೆ  ಈಡೇರಿಸದೇ ಬಿಡುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ. ನಾವಂದುಕೊಂಡದ್ದು ಸಾಧಿಸುವುದು ಖಚಿತ. ಇದು ನಮ್ಮ ಬದ್ಧತೆ.
– ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

ಮುಖ್ಯಾಂಶಗಳು
*ವಾಣಿಜ್ಯ ಬ್ಯಾಂಕ್‌ ಹಾಗೂ ಸಹಕಾರಿ ಸಂಘಗಳಲ್ಲಿ ರೈತರು ಪಡೆದಿರುವ 1ಲಕ್ಷ ರೂ.ವರೆಗಿನ ಸಾಲ ಮನ್ನಾ
*ನೇಕಾರರ 1ಲಕ್ಷ ರೂ. ಸಾಲ ಮನ್ನಾ
*ನೀರಾವರಿ ಯೋಜನೆಗಳಿಗೆ 1.50ಲಕ್ಷ ಕೋಟಿ ರೂ.
*ಬಿಪಿಎಲ್‌ ಕುಟುಂಬದ ಮಹಿಳೆಯರಿಗೆ ಸ್ಮಾರ್ಟ್‌ ಫೋನ್‌
*ಬಿಪಿಎಲ್‌ ಕುಟುಂಬದ ಹೆಣ್ಣು ಮಕ್ಕಳ ಮದುವೆಗೆ 25 ಸಾವಿರ ರೂ. ನಗದು, ಮೂರು ಗ್ರಾಂ ಬಂಗಾರದ ತಾಳಿ ಉಚಿತ
*20 ಲಕ್ಷ ಸಣ್ಣ, ಅತಿ ಸಣ್ಣ ರೈತರಿಗೆ 10 ಸಾವಿರ ರೂ. ಆರ್ಥಿಕ ನೆರವು
*ಭಾಗ್ಯಲಕ್ಷ್ಮಿ ಬಾಂಡ್‌ ಮೊತ್ತ 2 ಲಕ್ಷ ರೂ.ಗೆ ಏರಿಕೆ
*ಎಸಿಬಿ ರದ್ದು ಮುನ್ಸೂಚನೆ

Advertisement

Udayavani is now on Telegram. Click here to join our channel and stay updated with the latest news.

Next