ಐಪಿಎಸ್ ಅಧಿಕಾರಿಯಾಗಿ ಕರ್ನಾಟಕದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಅಣ್ಣಾಮಲೈ ಅವರು ಬಿಜೆಪಿ ಸೇರ್ಪಡೆಯಾಗಿ ಹುಟ್ಟೂರು ತಮಿಳುನಾಡಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ವಿಧಾನಸಭೆಗೆ ಸ್ಪರ್ಧಿಸಿ ಸೋಲು ಅನುಭವಿಸಿದ ಬಳಿಕ ಎದೆಗುಂದದೆ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಯ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡು ಸಂಘಟನೆಗೆ ವರ್ಷದಿಂದ ಬೆವರು ಹರಿಸಿ ಕಠಿಣ ಶ್ರಮ ಪಡುತ್ತಿದ್ದಾರೆ. ‘ಎನ್ ಮಣ್ಣ್ ಎನ್ ಮಕ್ಕಳ್ ಯಾತ್ರೆ’ ಮೂಲಕ ದ್ರಾವಿಡ ಪ್ರಾಬಲ್ಯ ವಿರುವ ತಮಿಳುನಾಡಿನಾದ್ಯಂತ ಯಶಸ್ವಿ ಯಾತ್ರೆ ನಡೆಸಿ ಕೇಸರಿ ಪಕ್ಷದ ಸಂಘಟನೆಗೆ ಹೊಸ ದಿಕ್ಕು ತೋರಿಸಿ ತಾನೊಬ್ಬ ಪ್ರಬಲ ಸಂಘಟಕ ಎನ್ನುವುದನ್ನು ಜನರನ್ನು ಸೆಳೆಯುವ ಮೂಲಕ ತೋರಿಸಿಕೊಟ್ಟಿದ್ದಾರೆ. ಸದ್ಯ ಅವರ ಶ್ರಮ ಮತಗಳಾಗಿ ಪರಿವರ್ತನೆಯಾಗುವುದೇ ಎನ್ನುವುದನ್ನು ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕ ತಿಳಿದು ಬರಲಿದೆ.
ಕರ್ನಾಟಕ, ತಮಿಳುನಾಡು ಸೇರಿ ರಾಷ್ಟ್ರ ರಾಜಕಾರಣದ ಕುತೂಹಲಿಗರೆಲ್ಲರ ನಿರೀಕ್ಷೆ ಅಣ್ಣಾಮಲೈ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆಯೇ ಎನ್ನುವುದಾಗಿತ್ತು. ಲೆಕ್ಕಾಚಾರ ಮಾಡಿ ಬಿಜೆಪಿ ಹೈಕಮಾಂಡ್ ಅಣ್ಣಾಮಲೈ ಅವರನ್ನು ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಕ್ಷೇತ್ರದಲ್ಲಿ ಬಿಜೆಪಿಗೆ ಕಾರ್ಯಕರ್ತರ ಬಲವಿದ್ದು, ಅಣ್ಣಾಮಲೈ ಅವರ ವರ್ಚಸ್ಸು ಪರಿಣಾಮಕಾರಿಯಾಗಿ ಕೆಲಸ ಮಾಡುವ ಭಾರೀ ನಿರೀಕ್ಷೆ ಇರಿಸಿ ಬಿಜೆಪಿ ಅಭ್ಯರ್ಥಿಯನ್ನಾಗಿಸಿದೆ.
ಕೊಯಮತ್ತೂರು ಕ್ಷೇತ್ರದಲ್ಲಿ 1998 ಮತ್ತು 1999 ರ ಸಾರ್ವತ್ರಿಕ ಚುನಾವಣೆಯಲ್ಲಿ ಸಿ.ಪಿ. ರಾಧಾಕೃಷ್ಣನ್ ಅವರು ಜಯ ಸಾಧಿಸಿದ್ದರು. 2004 ರಲ್ಲಿ CPI ನ ಕೆ. ಸುಬ್ಬರಾಯನ್ ಅವರು ಸಿ.ಪಿ. ರಾಧಾಕೃಷ್ಣನ್ ಅವರಿಗೆ ಸೋಲುಣಿಸಿದರು. ಬಳಿಕ ನಡೆದ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಉತ್ತಮ ಮತಗಳನ್ನು ಗಳಿಸಿತ್ತಾದರೂ ಸೋಲಿನ ಸರಣಿ ಮುಂದುವರಿಸಿತ್ತು.
2009 ರಲ್ಲಿ CPI(M) ನ ಪಿ.ಆರ್.ನಟರಾಜನ್ ಜಯ ಸಾಧಿಸಿದ್ದರು. 2014 ರಲ್ಲಿ ಎಐಎಡಿಎಂಕೆಯ ಪಿ.ನಾಗರಾಜನ್ ಅವರು ಸಿ.ಪಿ. ರಾಧಾಕೃಷ್ಣನ್ ಅವರಿಗೆ ಸೋಲುಣಿಸಿದ್ದರು. 2019 ರಲ್ಲಿ ಯುಪಿಎ ಮೈತ್ರಿಕೂಟದ ಅಭ್ಯರ್ಥಿ CPI(M) ನ ಪಿ.ಆರ್.ನಟರಾಜನ್ ಅವರು ಎಐಎಡಿಎಂಕೆ ಬೆಂಬಲಿತ ಎನ್ ಡಿಎ ಮೈತ್ರಿಕೂಟದ ಬಿಜೆಪಿ ಅಭ್ಯರ್ಥಿಯಾಗಿದ್ದ ಸಿ.ಪಿ. ರಾಧಾಕೃಷ್ಣನ್ ಅವರ ಎದುರು ಜಯ ಸಾಧಿಸಿದ್ದರು. ಬಿಜೆಪಿ 3,92,007 ಮತಗಳನ್ನು ಪಡೆದಿತ್ತು. CPI(M) 571,150 ಮತಗಳನ್ನು ಪಡೆದು ಜಯಭೇರಿ ಬಾರಿಸಿತ್ತು.
ಈ ಬಾರಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಗಳಿವೆ. ಡಿಎಂಕೆ ಗಣಪತಿ ಪಿ.ರಾಜ್ ಕುಮಾರ್ ಅವರನ್ನು ಇಂಡಿ ಮೈತ್ರಿಕೂಟದಿಂದ ಕಣಕ್ಕಿಳಿಸಿದೆ. ಎಐಎಡಿಎಂಕೆಯಿಂದ ಯಾರು ಕಣಕ್ಕಿಳಿಯಲಿದ್ದಾರೆ ಎನ್ನುವ ಕುತೂಹಲವೂ ಇದೆ. ಒಟ್ಟಿನಲ್ಲಿ ಕ್ಷೇತ್ರ ಈ ಬಾರಿ ಹೈವೋಲ್ಟೇಜ್ ಕ್ಷೇತ್ರ ಎನ್ನುವುದರಲ್ಲಿ ಅನುಮಾನವಿಲ್ಲ.
ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಅಣ್ಣಾಮಲೈ ಅಭ್ಯರ್ಥಿಯಾಗಿರುವ ಕಾರಣ ಹೆಚ್ಚಿನ ಉತ್ಸಾಹ ತೋರುತ್ತಿದ್ದಾರೆ. ವಿಧಾನಸಭಾವಾರು ಬಲಾ ಬಲ ನೋಡಿದರೆ 7 ಕ್ಷೇತ್ರಗಳ ಪೈಕಿ 6 ಮಂದಿ ಎಐಎಡಿಎಂಕೆ ಶಾಸಕರಿದ್ದಾರೆ. ವನತಿ ಶ್ರೀನಿವಾಸನ್ ಅವರು ಓರ್ವ ಮಾತ್ರ ಬಿಜೆಪಿ ಶಾಸಕಿಯಾಗಿದ್ದಾರೆ.