Advertisement

ಕಾಂಗ್ರೆಸ್‌, ತೆನೆ ಶಾಸಕರಿಗೆ ಗಾಳ; ನೇರ ಆಹ್ವಾನ ಕೊಟ್ಟ ಬಿಎಸ್‌ವೈ

06:00 AM Jun 30, 2018 | Team Udayavani |

ಬೆಂಗಳೂರು:  ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ಶಾಸಕರು ಬಿಜೆಪಿಗೆ ಬರಲು ಸಿದ್ಧರಿದ್ದು ನಮ್ಮ ನಾಯಕರು ಅವರನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಂಡು ಪಕ್ಷ ಬಲವರ್ದನೆಗೆ ಸಹಕರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಕರೆ ನೀಡಿದ್ದಾರೆ. 

Advertisement

ಈ ಮೂಲಕ ಸಮ್ಮಿಶ್ರ ಸರ್ಕಾರ ರಚನೆಯಿಂದ ಬೇಸರಗೊಂಡಿರುವರಿಗೆ ಪಕ್ಷಕ್ಕೆ ಸ್ವಾಗತವಿದೆ ಎಂದು ಬಹಿರಂಗವಾಗಿ ಹೇಳಿರುವ ಅವರು, ರಾಜ್ಯದಲ್ಲಿ ಅವಕಾಶ ಸಿಕ್ಕಿರೆ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂಬ ಸಂದೇಶವನ್ನೂ ರವಾನಿಸಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ದೇಶದ ಹಿತದೃಷ್ಟಿಯಿಂದ ನಮ್ಮ ಪಕ್ಷಕ್ಕೆ ಸಾಕಷ್ಟು ಮಂದಿ ಬರುವವರಿದ್ದಾರೆ. ನಮ್ಮ ಕುರ್ಚಿ ಅತಂತ್ರ ಎಂಬ ಚಿಂತೆ ಬಿಟ್ಟು ಪಕ್ಷ ಬಲಪಡಿಸಲು ನಾವು ಮುಂದಾಗಬೇಕು ಎಂದು ಪರೋಕ್ಷವಾಗಿ ಆಪರೇಷನ್‌ ಕಮಲದ ಮುನ್ಸೂಚನೆ ಸಹ ನೀಡಿದರು.

ಅತಂತ್ರ ವಿಧಾನಸಭೆ ಹಿನ್ನೆಲೆಯಲ್ಲಿ ಅತಿ ದೊಡ್ಡ ಪಕ್ಷವಾದ ಬಿಜೆಪಿಗೆ ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ಹದಿನೈದು ದಿನ ಕಾಲಾವಕಾಶ ಕೊಟ್ಟಿದ್ದರು. ಅಷ್ಟು ಅವಧಿ ಸಿಕ್ಕಿದ್ದರೆ ಖಂಡಿತವಾಗಿಯೂ ಹಲವಾರು ಶಾಸಕರು ಬಿಜೆಪಿಗೆ ಬರುವವರಿದ್ದರು. ಆದರೆ, ರಾತ್ರೋರಾತ್ರಿ ಸುಪ್ರೀಂಕೋರ್ಟ್‌ವರೆಗೆ ಹೋಗಿ 24 ಗಂಟೆಗಳಲ್ಲಿ ಬಹುಮತ ಸಾಬೀತು ಪಡಿಸಲು ಆದೇಶ ಕೊಡಿಸಲಾಯಿತು. ನನಗೆ ಗೊತ್ತಿದ್ದಂತೆ ಇಂತಹ ಪ್ರಕರಣ ದೇಶದಲ್ಲಿ ಇದೇ ಮೊದಲು ಎಂದು ಹೇಳಿದರು.

ರಾಜ್ಯದಲ್ಲಿ ಎಲ್ಲೇ ಹೋದರೂ ಬಿಜೆಪಿಗೆ ಯಾಕೆ ಹಿನ್ನೆಡೆಯಾಯಿತು ಎಂಬುದೇ ಮಾತು. ಈಗಲೂ ಕಾಲ ಮಿಂಚಿಲ್ಲ. ಬಿಜೆಪಿ ಅಧಿಕಾರ ಹಿಡಿಯಬೇಕು ಎಂಬುದು ಬಹುತೇಕ ಜನರ ಅಭಿಪ್ರಾಯವಾಗಿದೆ ಎಂದು ತಿಳಿಸಿದರು.

Advertisement

ನಮ್ಮ ತಪ್ಪುಗಳಿಂದಲೇ ಕಡಿಮೆ ಸ್ಥಾನ
ರಾಜ್ಯದಲ್ಲಿ ಬಿಜೆಪಿ 125 ರಿಂದ 130 ಸ್ಥಾನ ಗಳಿಸುವ ವಿಶ್ವಾಸವಿತ್ತು. ಆ ನಿಟ್ಟಿನಲ್ಲಿ ನೀವು-ನಾವೆಲ್ಲರೂ ಕೆಲಸ ಮಾಡಿದ್ದೆವು. ಆದರೆ, ನಮ್ಮದೇ ಆದ ತಪ್ಪುಗಳು ಹಾಗೂ ಗೊಂದಲಗಳಿಂದ ನಮಗೆ ಕಡಿಮೆ ಸ್ಥಾನ ಬರುವಂತಾಯಿತು. 3 ಸಾವಿರ ಮತಗಳ ಅಂತರದವರೆಗೆ 15 ಸ್ಥಾನಗಳಲ್ಲಿ ನಾವು ಸೋತಿದ್ದೇವೆ. ಬೆಂಗಳೂರಿನಲ್ಲೂ ನಮಗೆ ಹೆಚ್ಚು ಸ್ಥಾನ ಬರಬೇಕಿತ್ತು ಎಂದು ಹೇಳಿದರು.

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕುಟುಕಿದ  ಯಡಿಯೂರಪ್ಪ, ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ದಯನೀಯವಾಗಿ ಸೋತಿದ್ದಾರೆ. ಬಾದಾಮಿಯಲ್ಲಿ 1600 ಮತಗಳಿಂದ ಗೆದ್ದಿದ್ದಾರೆ. ಶ್ರೀರಾಮುಲು ಒಂದು ದಿನ ಹೆಚ್ಚಾಗಿ ಅಲ್ಲಿ ಉಳಿದಿದ್ದರೆ ಅಲ್ಲೂ ಬಿಜೆಪಿ ಗೆಲ್ಲುತ್ತಿತ್ತು ಎಂದರು. 

37 ಶಾಸಕರ ಬಜೆಟ್‌ ಎಂದು ಲೇವಡಿ
ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ 105 ಶಾಸಕರು ಒಪ್ಪಿರುವ ಬಜೆಟ್‌ ಮುಂದುವರಿಸಬೇಕಾ ಎಂದು ಪ್ರಶ್ನಿಸುತ್ತಾರೆ. ಆದರೆ, ಇವರದು 37 ಶಾಸಕರ ಬಜೆಟ್‌. ಏಕೆಂದರೆ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರೇ ಬಜೆಟ್‌ ಬೇಡ  ಎಂದು ಹೇಳಿದ್ದಾರೆ. ಹೀಗಾಗಿ, ಇವರದು ಮೈನಾರಿಟಿ ಬಜೆಟ್‌ ಎಂದು ಬಿಎಸ್‌ವೈ ಲೇವಡಿ ಮಾಡಿದರು. 

ಮೂರು ನಿರ್ಣಯ
1. ಜನಾದೇಶ ಧಿಕ್ಕರಿಸಿ ಅಪವಿತ್ರ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿರುವ ಬಗ್ಗೆ ಖಂಡನೆ. 
2. ಕೇಂದ್ರ ಸರ್ಕಾರದ ನಾಲ್ಕೂವರೆ ವರ್ಷದ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ.
3. ರಾಜ್ಯದಲ್ಲಿನ ರಾಜಕೀಯ ಅಸ್ಥಿರತೆ ವಿರುದ್ಧ ಸದನದ ಒಳಗೆ ಮತ್ತು ಹೊರಗೆ ಹೋರಾಟ ರೂಪಿಸುವುದು.

ಬಿಜೆಪಿಗೆ ಮುಂದಿನ ದಿನಗಳಲ್ಲಿ ಬಹುತೇಕ ಶಾಸಕರು, ಮಾಜಿ ಲೋಕಸಭೆ ಸದಸ್ಯರು, ವಿಧಾನಪರಿಷತ್‌ನ ಮಾಜಿ ಸದಸ್ಯರು ಬರುವವರಿದ್ದಾರೆ. ರಾಜ್ಯದಲ್ಲಿ ಬಜೆಟ್‌ ಮಂಡನೆಯಾಗುವುದೋ ಇಲ್ಲವೋ ಇನ್ನೂ ಖಚಿತಗೊಂಡಿಲ್ಲ. ಬಜೆಟ್‌ ಮಂಡನೆವರೆಗೂ ಇನ್ನೂ ಸಾಕಷ್ಟು ಅದ್ಭುತಗಳನ್ನು ಕಾಣಬೇಕಿದೆ. 37 ಶಾಸಕರ ಮೈನಾರಿಟಿ ಬಜೆಟ್‌ಗೆ ವಿಧಾನಸಭೆಯಲ್ಲಿ ಒಪ್ಪಿಗೆ ಸಿಗುವುದಾ? ಇಲ್ಲವಾ? ಕಾದು ನೋಡಬೇಕಿದೆ. ವಿಧಾನಸಭೆಯಲ್ಲಿ ಬಿಜೆಪಿ ನಿಲುವು ಏನಾಗಿರಬೇಕು ಎಂಬುದು ಮುಂದೆ ತೀರ್ಮಾನಿಸುತ್ತೇವೆ.
– ಅರವಿಂದ ಲಿಂಬಾವಳಿ, ಮಾಜಿ ಸಚಿವ  

Advertisement

Udayavani is now on Telegram. Click here to join our channel and stay updated with the latest news.

Next