Advertisement

ದಾನದ ಕೈ ಭ್ರಷ್ಟಾಚಾರ ಮಾಡದಿದ್ದರೆ ಇನ್ನೂ ಚೆಂದ: ಡಿಕೆಶಿಗೆ ಟಾಂಗ್‌

01:35 PM Apr 18, 2023 | Team Udayavani |

ಕನಕಪುರ: ವಿಧಾನಸಭಾ ಚುನಾವಣೆಯಲ್ಲಿ ಆರ್‌. ಅಶೋಕ್‌ ಸ್ಪರ್ಧಿಸುತ್ತಿರುವ ಕನಕಪುರ ಕ್ಷೇತ್ರವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣಗೌಡ ತಿಳಿಸಿದರು.

Advertisement

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕನಕಪುರ ಕ್ಷೇತ್ರದಲ್ಲಿ ಡಿಕೆಶಿ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಕಣಕ್ಕಿಳಿದಿರುವ ಆರ್‌.ಅಶೋಕ್‌ ಅವರು ಮಂಗಳವಾರ ನಾಮಪತ್ರ ಸಲ್ಲಿಕೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆರ್‌.ಅಶೋಕ್‌ ಅವರು ಎಲ್ಲಿಂದಲೂ ಬಂದು ಚುನಾವಣೆಗೆ ನಿಲ್ಲುತ್ತಿದ್ದಾರೆ ಎಂಬ ಸಹಜವಾದ ಪ್ರಶ್ನೆ ಮತದಾರರಲ್ಲಿ ಇದ್ದು ಕನಕಪುರವನ್ನು ಆಯ್ಕೆ ಮಾಡಿಕೊಳ್ಳಲು ಬಲವಾದ ಕಾರಣವಿದೆ ಎಂದರು.

ಸವಲತ್ತು ಇಲ್ಲ: ಇಲ್ಲಿ ಅಭಿವೃದ್ಧಿ ಮರೀಚಿಕೆ ಯಾಗಿದೆ. ಲಂಬಾಣಿ ತಾಂಡಾ ಹಿಂದುಳಿದ ಪ್ರದೇಶ ವಿಶೇಷವಾಗಿ ಕನಕಪುರ ಕ್ಷೇತ್ರದಲ್ಲಿ ಗ್ರಾಮೀಣ ಭಾಗದಲ್ಲಿ ಕೃಷಿಯನ್ನೇ ನಂಬಿದ್ದು ಸರ್ಕಾರದ ಸವಲತ್ತು ತಲುಪುತ್ತಿಲ್ಲ. ಸವಲತ್ತುಗಳು ಕೆಲವೇ ವ್ಯಕ್ತಿಗಳಿಗೆ ಸೀಮಿತವಾಗಿವೆ ಎಂದು ದೂರಿದರು.

ಬಿಜೆಪಿ ಅಭಿವೃದ್ಧಿ ಎಂದರೆ ಏನು ಎನ್ನುವುದನ್ನು ಈ ಜಿಲ್ಲೆಗೆ ತೋರಿಸಬೇಕು ಎಂದು ಪ್ರಬಲವಾದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಒಂದು ಬದಲಾವಣೆ ತರಲು ಹೊರಟಿದೆ ಎಂದರು.

ಹೆಜ್ಜೆ ಇಟ್ಟಿದೆ: ಈ ಹಿಂದೆ ರಿಪಬ್ಲಿಕ್‌ ಆಫ್ ಬಳ್ಳಾರಿ ಎಂಬ ಮಾತಿತ್ತು. ಆ ಕ್ಷೇತ್ರದಲ್ಲೇ ಬಿಜೆಪಿ ಪ್ರಬಲ ವಾಗಿ ಬೆಳೆದು ನಿಂತಿದೆ. ಅದೇ ಮಾದರಿಯಲ್ಲಿ ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆ ಹಾಗೂ ಕನಕಪುರದಲ್ಲೂ ಪ್ರಬಲವಾದ ಅಭ್ಯರ್ಥಿಯನ್ನು ಹಾಕಿ ಸರ್ಕಾರದ ಸಾಧನೆಗಳ ಸಂದೇಶ ತಿಳಿಸಬೇಕು ಎಂಬ ನಿಟ್ಟಿನಲ್ಲಿ ಬಿಜೆಪಿ ಹೆಜ್ಜೆ ಇಟ್ಟಿದೆ ಎಂದು ತಿಳಿಸಿದರು.

Advertisement

ಅಪಪ್ರಚಾರ: ಸರ್ಕಾರದ ಯೋಜನೆಗಳ ಬಗ್ಗೆ ಸ್ವಲ್ಪವೂ ಕಾನೂನಿನ ಅರಿವಿಲ್ಲದೆ ಡಿ.ಕೆ.ಶಿವಕು ಮಾರ್‌ ಮತ್ತು ಸಿದ್ದರಾಮಯ್ಯ ಅಪಪ್ರಚಾರ ಮಾಡುತ್ತಿದ್ದಾರೆ. 6 ಬಾರಿ ಶಾಸಕರಾಗಿ, ಮಂತ್ರಿ ಗಳಾಗಿ ಕೆಲಸ ಮಾಡಿರುವ ಡಿಕೆಶಿ ಮತ್ತು ಸಿದ್ದರಾ ಮಯ್ಯ ನವರು ವ್ಯವಹಾರಿಕವಾಗಿ ಸಾಮಾನ್ಯ ಜ್ಞಾನ ಇಲ್ಲದೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.

ಸಾಮಾನ್ಯ ಜ್ಞಾನವಿಲ್ಲ: ಬಮೂಲ್‌, ಕೆಎಂಎಫ್, ನಂದಿನಿ, ಸಹಕಾರ ಸಂಘದ ನಿಯಮದಡಿ 22 ಸಾವಿರ ಕೋಟಿ ವ್ಯವಹಾರ ನಡೆಯುತ್ತಿದೆ. ಯಾವುದೇ ಒಂದು ಉತ್ಪನ್ನ ವಿಲೀನ ಮಾಡಿಕೊಳ್ಳ ಬೇಕಾದರೆ ಆ ಸಂಸ್ಥೆಯ ಸರ್ವ ಸದಸ್ಯರ ಸಭೆ ಕರೆದು ಕೆಎಂಎಫ್ ನ ಬೋರ್ಡ್‌ ಆಫ್ ಡೈರೆಕ್ಟರ್‌ ಸಭೆಯಲ್ಲಿ ಅನುಮೋದನೆ ಪಡೆದು ಸರ್ಕಾರದ ಕ್ಯಾಬಿನೆಟ್‌ನಲ್ಲಿ ಸಾಧಕ-ಬಾಧಕಗಳನ್ನು ಚರ್ಚೆ ಮಾಡಿ ಅಂತಿಮ ತೀರ್ಮಾನ ಕೈಗೊಳ್ಳಬೇಕು. ಅದ್ಯಾವುದೂ ಇಲ್ಲಿ ನಡೆದೇ ಇಲ್ಲ. ಆದರೂ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್‌ ಹಾಗೂ ಸಿದ್ದರಾಮಯ್ಯನವರು ರಾಜ್ಯದಲ್ಲಿ ನಂದಿನಿ ಡೇರಿ ಮುಚ್ಚಿ ಹಾಕುತ್ತಾರೆ ಎಂದು ಮಾತನಾಡುತ್ತಿದ್ದಾರೆ. ಈ ಇಬ್ಬರು ನಾಯಕರು ಮೊದಲು ಸಾಮಾನ್ಯ ಜ್ಞಾನ ತಿಳಿದು ಮಾತನಾಡಬೇಕು ಎಂದರು.

ಲಾಭದ ಹುನ್ನಾರ: ಇಡಿ ಸಿಬಿಐ ಮೂಲಕ ನಮ್ಮನ್ನು ಜೈಲಿಗೆ ಕಳುಹಿಸಿದ್ದಾರೆ ಎಂದು ಆರೋಪಿಸುತ್ತಾರೆ. ಅದಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಯಾವುದೇ ಸಂಸ್ಥೆಗಳು ಖಚಿತ ಮಾಹಿತಿ ಸರ್ವೆ ನಡೆಸದೆ ಮುಂದಿನ ಹೆಜ್ಜೆ ಇಡುವುದಿಲ್ಲ. ಅದನ್ನು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಬಿಜೆಪಿ ಮೇಲೆ ಹಾಕಿ ಭಾವನಾತ್ಮಕವಾಗಿ ಮಾತನಾಡಿ ಚುನಾವಣಾ ಲಾಭ ಪಡೆಯಲು ಹೊರಟಿದ್ದಾರೆ ಎಂದರು.

ಅಭಿವೃದ್ಧಿ ದೃಷ್ಟಿ ಇಟ್ಟುಕೊಂಡು ತಾಲೂಕಿನ ಸರ್ವಾಂಗಿಣ ಅಭಿವೃದ್ಧಿ ಮಾಡಲು ರಿಪಬ್ಲಿಕ್‌ ಆಫ್ ಕನಕಪುರ ಆಗದಂತೆ ಚುನಾವಣೆಗೆ ಸ್ಪರ್ಧೆ ಮಾಡಲು ಆರ್‌.ಅಶೋಕ್‌ ಮಂಗಳವಾರ ಕಲ್ಲಹಳ್ಳಿಯ ವೆಂಕಟರಮಣ ಸ್ವಾಮಿಗೆ ಪೂಜಿ ಸಲ್ಲಿಸಿ ನಾಮಪತ್ರ ಸಲ್ಲಿಸಲಿದ್ದಾರೆ. ಪಕ್ಷಾತೀತವಾಗಿ ತಾಲೂಕಿನ ಮತದಾರರು ಬೆಂಬಲ ಕೊಡಬೇಕು ಎಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಚುನಾವಣಾ ವೀಕ್ಷಕ ಆಜಾದ್‌ ಸಿಂಗ್‌, ನಗರ ಘಟಕದ ಅಧ್ಯಕ್ಷ ಮುತ್ತಣ್ಣ, ಗ್ರಾಮಾಂತರ ಮಂಡಲದ ಅಧ್ಯಕ್ಷ ವೆಂಕಟೇಶ್‌, ನಗರಸಭಾ ಸದಸ್ಯ ಮಾಲತಿ ಆನಂದ್‌ ಪೈ, ನಗರ ಘಟಕದ ಮಾಜಿ ಅಧ್ಯಕ್ಷ ನಾಗಾನಂದ್‌, ಕೋಟೆ ಮಂಜು, ಮಹಿಳಾ ಘಟಕದ ಪವಿತ್ರಾ, ವರಲಕ್ಷ್ಮೀ, ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು.

ಗಾದೆ ಕೇಳಲು ಮಾತ್ರ ಚೆಂದ: ನಾಮಪತ್ರ ಸಲ್ಲಿಸಲು ಬಂದಿದ್ದ ಡಿ.ಕೆ.ಶಿವಕುಮಾರ್‌ ಅವರು ಕಮಲ ಕೆರೆಯಲ್ಲಿದ್ದರೆ ಚಂದ, ತೆನೆ ಗದ್ದೆಯಲ್ಲಿದ್ದರೆ ಚಂದ, ದಾನ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ ಎಂದು ವ್ಯಾಟ್ಸಪ್‌ನಲ್ಲಿ ಬಂದಿದ್ದ ವಿಷಯದ ಬಗ್ಗೆ ಚರ್ಚೆ ಮಾಡಿದ್ದಾರೆ. ಆದರೆ, ದಾನ- ಧರ್ಮ ಮಾಡುವ ಕೈ ಭ್ರಷ್ಟಾಚಾರ ಮಾಡದಿದ್ದರೆ ಇನ್ನೂ ಚಂದ ಎಂಬುದನ್ನು ಮರೆತಿದ್ದಾರೆ. ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರ ಮಾಡಿ ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚಂದ ಎಂದು ಯಾವ ಆಧಾರದ ಮೇಲೆ ಹೇಳಿದ್ದಾರೆಯೋ ಗೊತ್ತಿಲ್ಲ. ಗಾದೆ ಹೇಳಲು ಚೆಂದ ಕೇಳಲು ಚಂದ, ಆದರೆ ಅದರಂತೆ ನಡೆದುಕೊಳ್ಳುವುದು ಕಷ್ಟ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣಗೌಡ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next