ಮಂಗಳೂರು: ಬಿಜೆಪಿ ಇತ್ತೀಚಿಗೆ ಮಂಗಳೂರಿನಲ್ಲಿ ಆಯೋಜಿಸಿದ್ದ ಜನಸುರಕ್ಷಾ ಯಾತ್ರೆಯ ವೇಳೆ ಬ್ಯಾನರ್, ಫ್ಲೆಕ್ಸ್ ಹಾಕಿದ್ದನ್ನು ದ.ಕ. ಜಿಲ್ಲಾಧಿಕಾರಿ ಮನಪಾ ಆಯುಕ್ತರಿಗೆ ನೊಟೀಸ್ ನೀಡಿ ತತ್‌ಕ್ಷಣ ತೆರವುಗೊಳಿಸಿದ್ದರು. ನಗರದಲ್ಲಿ ಫ್ಲೆಕ್ಸ್ -ಬ್ಯಾನರ್ ಕಾನೂನುಬಾಹಿರವಾಗಿ ಅಳವಡಿಸದಂತೆ ಜಿಲ್ಲಾಧಿಕಾರಿ ಆದೇಶ ನೀಡಿದ್ದರು. ಆದರೆ ಈ ಆದೇಶವನ್ನು ಉಲ್ಲಂಘಿಸಿ ನಗರದಲ್ಲಿ ಕಾಂಗ್ರೆಸ್ ಜನಾಶೀರ್ವಾದ ಯಾತ್ರೆಯ ಫ್ಲೆಕ್ಸ್ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ ಎಂದು ದ.ಕ. ಜಿಲ್ಲಾ ಬಿಜೆಪಿ ವಕ್ತಾರ ಜಿತೇಂದ್ರ ಕೊಟ್ಟಾರಿ ಆರೋಪಿಸಿದ್ದಾರೆ.
ಮಂಗಳೂರು ಬಿಜೆಪಿ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಸುರಕ್ಷಾ ಯಾತ್ರೆಯ ಮುನ್ನಾದಿನ ಬಿಜೆಪಿ ಅಳವಡಿಸಿದ್ದ ಬ್ಯಾನರ್, ಫ್ಲೆಕ್ಸ್‌ಗಳನ್ನು ಮಾ. 5ರಂದು ಜಿಲ್ಲಾಧಿಕಾರಿ ಮೂಲಕ ತೆರವುಗೊಳಿಸಲು ಸಚಿವ ರಮಾನಾಥ ರೈ, ಸಚಿವ ಯು.ಟಿ. ಖಾದರ್, ಶಾಸಕ ಜೆ.ಆರ್. ಲೋಬೋ ಅವರ ಒತ್ತಡದ ಮೇರೆಗೆ ಕೆಲಸ ನಡೆದಿದೆ. ಜಿಲ್ಲಾಧಿಕಾರಿಯ ಆದೇಶ ಈಗಲೂ ಊರ್ಜಿತದಲ್ಲಿದೆ. ಆದರೆ ಕಾಂಗ್ರೆಸ್‌ನವರು ಫ್ಲೆಕ್ಸ್, ಬ್ಯಾನರ್ ಅಳವಡಿಸುವ ಮೂಲಕ ಜಿಲ್ಲಾಧಿಕಾರಿ ನೀಡಿರುವ ಆದೇಶ ಉಲ್ಲಂ ಸಿದ್ದಾರೆ ಎಂದು ಆರೋಪಿಸಿದರು.
ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಬಿಜೆಪಿಯ ಸಮಾವೇಶದ ಬ್ಯಾನರ್‌ಗಳನ್ನು ತೆಗೆಸಲು ಯತ್ನಿಸಿದ್ದರು. ಜತೆಗೆ ಮಂಗಳೂರು ವ್ಯಾಪ್ತಿಯ ಧಾರ್ಮಿಕ ಕಾರ್ಯಕ್ರಮಗಳ ಬ್ಯಾನರ್‌ಗಳನ್ನು ತೆಗೆಸಲಾಗಿತ್ತು. ಆದರೆ ಈಗ ಕಾಂಗ್ರೆಸ್‌ನವರೇ ಫ್ಲೆಕ್ಸ್ ಅಳವಡಿಸಿದ್ದು, ಇತರರಿಗೆ ಒಂದು ಕಾನೂನು, ಕಾಂಗ್ರೆಸ್‌ಗೆ ಒಂದು ಕಾನೂನು ಎಂಬುದನ್ನು ಬಹಿರಂಗಪಡಿಸಿದಂತಾಗಿದೆ ಎಂದರು.
ಕ್ರೈಸ್ತರ ಉದ್ಯಮ ಸಂಘಟನೆಯೊಂದರ ವತಿಯಿಂದ ಇತ್ತೀಚೆಗೆ ಮಂಗಳೂರಿನಲ್ಲಿ ಆಯೋಜಿಸಲಾದ ಒಂದು ಕಾರ್ಯಕ್ರಮಕ್ಕೆ ಕೇವಲ ಕಾಂಗ್ರೆಸ್ ನಾಯಕರನ್ನಷ್ಟೇ ಆಹ್ವಾನಿಸಿ, ಬಿಜೆಪಿಯನ್ನು ಟೀಕಿಸಲಾಗಿದೆ. ಸಂಘಟನೆಯಲ್ಲಿರುವ ಬಿಜೆಪಿ ಅಲ್ಪಸಂಖ್ಯಾಕ ಮೋರ್ಚಾದ ಪದಾಧಿಕಾರಿಗಳನ್ನು ಕಡೆಗಣಿಸಲಾಗಿದೆ. ಇಂತಹ ಸಂಘಟನೆಯು ಬಿಜೆಪಿ ಅವಹೇಳನ ಮಾಡುವ ಬದಲು ಜಪ್ಪು ಮಿಷನರಿ ಕಂಪೌಂಡ್‌ನಲ್ಲಿರುವ ಕ್ರೈಸ್ತ ಕುಟುಂಬಗಳಿಗೆ ನ್ಯಾಯ ಒದಗಿಸುವ ಪ್ರಯತ್ನ ನಡೆಸಲಿ ಎಂದು ಅವರು ಒತ್ತಾಯಿಸಿದರು.
ಪಾಲಿಕೆ ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ, ಸದಸ್ಯರಾದ ಗಣೇಶ್ ಹೊಸಬೆಟ್ಟು, ಸುಧೀರ್ ಶೆಟ್ಟಿ ಕಣ್ಣೂರು, ರೂಪಾ ಡಿ. ಬಂಗೇರ, ದಕ್ಷಿಣ ಮಂಡಲ ಬಿಜೆಪಿ ಅಲ್ಪಸಂಖ್ಯಾಕ ಮೋರ್ಚಾದ ಲ್ಯಾಡಿನ್ ಡಿ’ಸಿಲ್ವಾ ಉಪಸ್ಥಿತರಿದ್ದರು.