Advertisement

ಮಹಾರಾಷ್ಟ್ರ: ಬಿಜೆಪಿ ಮೈತ್ರಿ

12:30 AM Feb 19, 2019 | Team Udayavani |

ಮುಂಬಯಿ: ಮಹಾರಾಷ್ಟ್ರಕ್ಕೆ ಸಂಬಂಧಿಸಿದಂತೆ ಲೋಕಸಭೆ ಚುನಾವಣೆ ಅಖಾಡ ಬದಲಾಗಿದೆ. ಮೂರು ವರ್ಷಗಳಿಂದ ಪ್ರತ್ಯೇಕವಾಗಿ ಸ್ಪರ್ಧಿಸುವ ಬಗ್ಗೆ ಮಾತನಾಡಿದ್ದ ಶಿವಸೇನೆ-ಬಿಜೆಪಿ ಮುನಿಸು ಮರೆತು ಮುಂದಿನ ಲೋಕಸಭೆ ಮತ್ತು ಅಕ್ಟೋಬರ್‌ ವೇಳೆಗೆ ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಜತೆಯಾಗಿ ಸ್ಪರ್ಧಿಸುವ ನಿರ್ಧಾರ ಘೋಷಣೆ ಮಾಡಿವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ- ಶಿವಸೇನೆ ಕಾರ್ಯಾಧ್ಯಕ್ಷ ಉದ್ಧವ್‌ ಠಾಕ್ರೆ ಉಪಸ್ಥಿತಿಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಸೋಮವಾರ ಮುಂಬಯಿಯಲ್ಲಿ ಈ ಘೋಷಣೆ ಮಾಡಿದ್ದಾರೆ. 

Advertisement

ಒಟ್ಟು 48 ಕ್ಷೇತ್ರಗಳ ಪೈಕಿ ಬಿಜೆಪಿ 25, ಶಿವಸೇನೆ 23 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ. ಇನ್ನು 288 ಸ್ಥಾನಗಳಿರುವ ವಿಧಾನ ಸಭೆಗೆ ಎರಡೂ ಪಕ್ಷಗಳು ತಲಾ144 ಸ್ಥಾನಗಳಲ್ಲಿ ಕಣಕ್ಕಿಳಿಯಲು ಒಪ್ಪಿಕೊಂಡಿವೆ ಎಂದಿದ್ದಾರೆ ಮಹಾರಾಷ್ಟ್ರ ಮುಖ್ಯಮಂತ್ರಿ. ರಾಷ್ಟ್ರದ ಹಿತಾಸಕ್ತಿ ದೃಷ್ಟಿಯಿಂದ ಮತ್ತು ಲೋಕಸಭೆ ಚುನಾವಣೆಯಲ್ಲಿ ಮತ್ತೆ ಎನ್‌ಡಿಎ ಗೆಲ್ಲಲಿದೆ ಎಂಬ ವಿಶ್ವಾಸದಿಂದ ಮೈತ್ರಿಗೆ ನಿರ್ಧರಿಸಲಾಯಿತು ಎಂದು ದೇವೇಂದ್ರ ಫ‌ಡ್ನವೀಸ್‌ ಹೇಳಿದ್ದಾರೆ. ಬಿಜೆಪಿ-ಶಿವಸೇನೆ ನಡುವೆ ಕೆಲವೊಂದು ವಿಚಾರಗಳ ಬಗ್ಗೆ ಭಿನ್ನಾಭಿಪ್ರಾಯ ಇತ್ತು ಎಂಬ ಅಂಶವನ್ನು ಫ‌ಡ್ನವೀಸ್‌ ಒಪ್ಪಿಕೊಂಡಿದ್ದಾರೆ. ಆದರೆ ಎರಡೂ ಪಕ್ಷಗಳು ಹೊಂದಿರುವ ಸಿದ್ಧಾಂತದಿಂದಾಗಿ ಮತ್ತೆ ಒಟ್ಟಾಗಿ ಚುನಾವಣೆಯಲ್ಲಿ ಸ್ಪರ್ಧಿಸುವಂತಾಗಿದೆ ಎಂದು ಅವರು ಹೇಳಿದ್ದಾರೆ. 

ಬಿಜೆಪಿ ಅಧ್ಯಕ್ಷರ ಜತೆಗಿನ ಮಾತುಕತೆ ವೇಳೆ ಶಿವಸೇನಾ ನಾಯಕ ಉದ್ಧವ್‌ ಠಾಕ್ರೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಚಾರ ಪ್ರಸ್ತಾವವಾಗಿದೆ. ಅದರ ಬಗ್ಗೆಯೂ ಅಮಿತ್‌ ಶಾ ಸಮ್ಮತಿ ಸೂಚಿಸಿದ್ದಾರೆ. ಅಯೋಧ್ಯೆಯಲ್ಲಿ ಶೀಘ್ರವೇ ಭವ್ಯವೂ, ದಿವ್ಯವೂ ಆದ ಮಂದಿರ ನಿರ್ಮಾಣವಾಗಲಿದೆ ಎಂದಿದ್ದಾರೆ. ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಮಾತನಾಡಿ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಬೇಕು ಎನ್ನುವುದು ಬಿಜೆಪಿ-ಶಿವಸೇನಾದ ಸಮಾನ ಹಿತಾಸಕ್ತಿ. ಶೀಘ್ರದಲ್ಲಿಯೇ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣವಾಗಬೇಕು ಎಂದಿದ್ದಾರೆ. 

45 ಸ್ಥಾನ ಗೆಲ್ಲುತ್ತೇವೆ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮಾತನಾಡಿ, ಬಿಜೆಪಿ-ಶಿವಸೇನೆ ಒಳಗೊಂಡ ಎನ್‌ಡಿಎ ಮೈತ್ರಿಕೂಟ 48 ಸ್ಥಾನಗಳ ಪೈಕಿ 45ರಲ್ಲಿ  ಜಯ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ಮೂವತ್ತು ವರ್ಷಗಳಿಂದ ಎರಡೂ ಪಕ್ಷಗಳ ನಡುವೆ ಮೈತ್ರಿ ಇದೆ. ಬಿಜೆಪಿ-ಶಿವಸೇನೆ ಕಾರ್ಯಕರ್ತರು ಮೈತ್ರಿ ಮುಂದುವರಿಯಬೇಕು ಎಂದು ಬಯಸಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next