Advertisement
ಹಾಲಿ ವಿಧಾನ ಪರಿಷತ್ ಬಲಾಬಲದಲ್ಲಿ ಬಿಜೆಪಿಗೆ ಬಹುಮತಕ್ಕೆ ಒಂದು ಸ್ಥಾನ ಬೇಕಾಗಿದ್ದು, ಅದೂ ಬೆಳಗಾವಿ ಸ್ಥಳೀಯ ಕ್ಷೇತ್ರಗಳಿಂದ ಆಯ್ಕೆಯಾಗಿರುವ ಲಖನ್ ಜಾರಕಿಹೊಳಿ ಸದ್ಯ ಬಿಜೆಪಿ ಪರವಾಗಿದ್ದು, ಈಗಲೇ ಬಿಜೆಪಿಗೆ ಬಹುಮತವಿದ್ದು, ಮುಂಬರುವ ಜಂಟಿ ಅಧಿವೇಶನ ಹಾಗೂ ಬಜೆಟ್ ಅಧಿವೇಶನದ ಸಂದರ್ಭ ಬಿಜೆಪಿಯ ಸಭಾಪತಿ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಸಭಾಪತಿ ಸ್ಥಾನದ ಆಕಾಂಕ್ಷಿಗಳು ಚಾತಕ ಪಕ್ಷಿಗಳಂತೆ ಕುರ್ಚಿ ಮೇಲೆ ಕಣ್ಣಿಟ್ಟುಕೊಂಡು ಕಾಯುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹಾಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ (ವಿಧಾನ ಪರಿಷತ್‌ಗೆ ಮಾತ್ರ ಸಂಬಂಧಿಸಿದಂತೆ) ಲೆಕ್ಕಾಚಾರದಲ್ಲಿ ಸಭಾಪತಿಯಾಗಿ ಆಯ್ಕೆಯಾಗಿದ್ದಾರೆ. ಬಸರಾಜ ಹೊರಟ್ಟಿ ಅವರ ಅವಧಿ 2022ರ ಜು. 4ರ ವರೆಗೂ ಇದೆ. ಅವರು ಈ ಬಾರಿ ಜೆಡಿಎಸ್‌ನಿಂದಲೇ ಸ್ಪರ್ಧಿಸುತ್ತಾರಾ ಅಥವಾ ಬಿಜೆಪಿಗೆ ಸೇರ್ಪಡೆಯಾಗುತ್ತಾರಾ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಅವರ ನಡೆಯ ಆಧಾರದಲ್ಲಿ ರಾಜ್ಯ ಬಿಜೆಪಿ ನಾಯಕರು ಸಭಾಪತಿ ಸ್ಥಾನದ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬ ಮಾಹಿತಿ ಬಿಜೆಪಿ ಮೂಲಗಳಿಂದ ಸಿಕ್ಕಿದೆ. ಇದನ್ನೂ ಓದಿ:ಸುಪ್ರಸಿದ್ಧ ಯಕ್ಷಗಾನ ಸ್ತ್ರೀವೇಷಧಾರಿ ಮಾರ್ಗೋಳಿ ಗೋವಿಂದ ಶೇರಿಗಾರ್ ನಿಧನ
Related Articles
ಪರಿಷತ್‌ನಲ್ಲಿ ಬಿಜೆಪಿಗೆ ಬಹುಮತ ಇಲ್ಲದ ಸಂದರ್ಭ ಜೆಡಿಎಸ್ ಸಂಖ್ಯಾಬಲದಲ್ಲಿ ಕಡಿಮೆ ಇದ್ದರೂ, ಜೆಡಿಎಸ್‌ಗೆ ಸಭಾಪತಿ ಸ್ಥಾನ ಬಿಟ್ಟು ಕೊಡಲಾಗಿತ್ತು. ಈಗ ಬಿಜೆಪಿಗೆ ಬಹುತೇಕ ಬಹುಮತ ಇದ್ದರೂ, ಜೆಡಿಎಸ್‌ಗೆ ಸಭಾಪತಿ ಸ್ಥಾನ ಬಿಟ್ಟು ಕೊಡುವುದರಿಂದ ಬಿಜೆಪಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ ಎಂಬ ಅಭಿಪ್ರಾಯವನ್ನು ಸಭಾಪತಿ ಸ್ಥಾನದ ಆಕಾಂಕ್ಷಿಗಳು ವ್ಯಕ್ತಪಡಿಸುತ್ತಿದ್ದಾರೆ.
Advertisement
ಜೂ. 15ಕ್ಕೆ ವಿಧಾನಸಭೆಯಿಂದ ಪರಿಷತ್‌ಗೆ ಮತ್ತಷ್ಟು ಜನ ಸದಸ್ಯರು ಆಯ್ಕೆಯಾಗಿ ಬರಲಿದ್ದಾರೆ. ಪರಿಷತ್‌ಗೆ ಆಯ್ಕೆಯಾಗಿರುವ ಏಳು ಸದಸ್ಯರ ಅವಧಿ ಮುಕ್ತಾಯವಾಗಲಿದ್ದು, ಆ ಸಂದರ್ಭದಲ್ಲಿ ವಿಧಾನಸಭೆ ಸದಸ್ಯರ ಸಂಖ್ಯಾಬಲದ ಲೆಕ್ಕಾಚಾರದಲ್ಲಿ ಬಿಜೆಪಿಗೆ ಕನಿಷ್ಠ 4 ಸದಸ್ಯರನ್ನು ಆಯ್ಕೆ ಮಾಡಲು ಅವಕಾಶ ದೊರೆಯಲಿದೆ.
ಆಕಾಂಕ್ಷಿತರಿಂದ ಪ್ರಬಲ ಪ್ರಯತ್ನಸಭಾಪತಿ ಸ್ಥಾನಕ್ಕಾಗಿ ಹಿರಿಯ ಸದಸ್ಯರಾಗಿರುವ ಆಯನೂರು ಮಂಜುನಾಥ, ಶಶಿಲ್ ನಮೋಶಿ, ರಘುನಾಥರಾವ್ ಮಲ್ಕಾಪುರೆ, ವೈ.ಎ. ನಾರಾಯಣಸ್ವಾಮಿ, ತೇಜಸ್ವಿನಿ ಗೌಡ, ಪುಟ್ಟಣ್ಣ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿವೆ. ಅಲ್ಲದೇ ಸಭಾಪತಿ ಸ್ಥಾನದ ಆಕಾಂಕ್ಷಿಗಳು ತಮ್ಮದೇ ರೀತಿಯಲ್ಲಿ ರಾಜ್ಯ ನಾಯಕರ ಮೂಲಕ ಸಭಾಪತಿ ಸ್ಥಾನಕ್ಕೇರಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇವರಲ್ಲಿ ಕೆಲವರು ಸಚಿವ ಸ್ಥಾನಕ್ಕೂ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದ್ದು, ಕೆಲವರು ಸಭಾಪತಿ ಸ್ಥಾನ ದೊರೆಯದಿದ್ದರೆ ಸರಕಾರದ ಮುಖ್ಯ ಸಚೇತಕ ಅಥವಾ ಉಪ ಸಭಾಪತಿ ಹುದ್ದೆಯಾದರೂ ದೊರೆಯುವ ನಿರೀಕ್ಷೆಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.