ಮಂಗಳೂರು: ರಾಜ್ಯ ಬಿಜೆಪಿಯ 24 ಪ್ರಕೋಷ್ಠಗಳ ರಾಜ್ಯ ಸಮಾವೇಶ “ಶಕ್ತಿ ಸಂಗಮ’ ಡಿ. 18ರಂದು ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯಲಿದೆ ಎಂದು ವಿಧಾನ ಪರಿಷತ್ ಸದಸ್ಯ, ರಾಜ್ಯ ಹಿರಿಯ ನಾಗರಿಕರ ಪ್ರಕೋಷ್ಠದ ಸಂಚಾಲಕ ಕೆ.ಪ್ರತಾಪಸಿಂಹ ನಾಯಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಮಾವೇಶದಲ್ಲಿ ಮಂಡಲ, ಜಿಲ್ಲೆ ಮತ್ತು ರಾಜ್ಯ ಸಮಿತಿಯ ಸಂಚಾಲಕರು, ಸಹ ಸಂಚಾಲಕರು, ಜಿಲ್ಲಾ ಸಂಯೋಜಕರು, ಸಂಕುಲ ಪ್ರಮುಖರು ಸೇರಿದಂತೆ 18,000 ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ 1,500 ಮಂದಿ ಭಾಗವಹಿಸುವರು ಎಂದರು.
ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲು ಅಧ್ಯಕ್ಷತೆ ವಹಿಸುವರು. ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉಪಸ್ಥಿತರಿರುತ್ತಾರೆ. ಪಕ್ಷದ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸಮಾರೋಪ ಭಾಷಣ ಮಾಡುವರು ಎಂದರು.
ಸಂಸ್ಕೃತಿ ರಕ್ಷಣೆಯೊಂದಿಗೆ ಅಭಿವೃದ್ಧಿ
ಸಂಸ್ಕೃತಿ ರಕ್ಷಣೆಯೊಂದಿಗೆ ಅಭಿವೃದ್ಧಿಯನ್ನು ಸಾ ಧಿಸಿದ ವಿಶ್ವಾಸದೊಂದಿದೆ ಕರ್ನಾಟಕದಲ್ಲಿ ಬಿಜೆಪಿ ಚುನಾವಣೆಯನ್ನು ಎದುರಿಸಲಿದೆ. 150ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗಳಿಸಿ ಸತತ ಎರಡನೇ ಬಾರಿ ರಾಜ್ಯದಲ್ಲಿ ಕಾಂಗ್ರೇಸೇತರ ಸರಕಾರ ರಚಿಸುವಲ್ಲಿ ಬಿಜೆಪಿ ದಿಟ್ಟ ಹೆಜ್ಜೆಯನ್ನು ಇಟ್ಟಿದೆ ಎಂದು ಪ್ರತಾಪಸಿಂಹ ನಾಯಕ್ ತಿಳಿಸಿದರು.
ರಾಜ್ಯ-ರಾಷ್ಟ್ರದಲ್ಲಿ ಒಂದೇ ಪಕ್ಷ ಆಡಳಿತದಲ್ಲಿದ್ದರೆ ಸ್ಥಿರತೆ ಮತ್ತು ನಿರಂತರತೆ ಸಾಧ್ಯ ಎಂಬುದು ಜನತೆಗೆ ಮನವರಿಕೆ ಆಗಿದೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿ, ಜಿಲ್ಲೆಗಳಲ್ಲಿ ಗೋಶಾಲೆಗಳನ್ನು ಸ್ಥಾಪಿಸುವ ನಿರ್ಧಾರ ಅನುಷ್ಠಾನದ ಹಂತದಲ್ಲಿದೆ. ಮತಾಂತರ ನಿಷೇಧ ಕಾನೂನು ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಅಂಗೀಕರಿಸಲ್ಪಟ್ಟಿದೆ. ಜಿಲ್ಲೆಗಳಲ್ಲಿ ಶ್ರದ್ದಾ ಕೇಂದ್ರಗಳ ಅಭಿವೃದ್ಧಿಗೆ ತಲಾ 2 ಕೋಟಿ ರೂ. ಅನುದಾನವನ್ನು ರಾಜ್ಯ ಸರಕಾರ ಬಿಡುಗಡೆ ಮಾಡಿದೆ. ಇದೆಲ್ಲವೂ ಸರಕಾರ ನುಡಿದಂತೆ ನಡೆದಿರುವುದಕ್ಕೆ ಸಾಕ್ಷಿಗಳಾಗಿವೆ ಎಂದು ಪ್ರತಾಪಸಿಂಹ ಹೇಳಿದರು.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ ಮಿಜಾರು, ಹಿರಿಯರ ಪ್ರಕೋಷ್ಠದ ದ.ಕ. ಜಿಲ್ಲಾ ಸಂಚಾಲಕ ನಾರಾಯಣ ಗಟ್ಟಿ, ಜಿಲ್ಲೆಯ ವಿವಿಧ ಪ್ರಕೋಷ್ಠಗಳ ಸಂಯೋಜಕ ಸಂದೇಶ ಶೆಟ್ಟಿ ಮತ್ತು ಜಿಲ್ಲಾ ಬಿಜೆಪಿ ವಕ್ತಾರ ಜಗದೀಶ ಶೇಣವ ಉಪಸ್ಥಿತರಿದ್ದರು.