Advertisement
ಶುಕ್ರವಾರ ರಾತ್ರಿ ದಿಲ್ಲಿಗೆ ಬಂದಿಳಿದ ವಿಜಯೇಂದ್ರ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಗೆ ಪ್ರಯತ್ನ ನಡೆಸಿ ದರು. ಆದರೆ ಸಮಯಾವಕಾಶ ಲಭಿಸದೆ ರಾಧಾ ಮೋಹನ್ ದಾಸ್ ಅವರ ಬಳಿ ದೂರಿತ್ತು ಶನಿವಾರ ಸಂಜೆ ಬೆಂಗಳೂರಿಗೆ ವಾಪಸ್ ಆದರು.
ಈ ಮಧ್ಯೆ ವಕ್ಫ್ ಹೋರಾಟ ತೀವ್ರಗೊಳಿಸಿರುವ ಯತ್ನಾಳ್ ಬಣವು ತೇರದಾಳದಲ್ಲಿ ಶನಿವಾರ ಬೃಹತ್ ಸಭೆ ನಡೆಸಿದೆ. ಬೆಳಗಾವಿಯಲ್ಲಿ ರವಿವಾರ ಸಮಾವೇಶ ಆಯೋಜಿಸಲಾಗಿದ್ದು, ಡಿ. 3ರಂದು ತಂಡ ದಿಲ್ಲಿಗೆ ತೆರಳಲಿದೆ. ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಪ್ರತಾಪ್ ಸಿಂಹ ಅವರನ್ನು ಒಳಗೊಂಡ ತಂಡ ವಕ್ಫ್ ಕುರಿತಾದ ಸಂಸತ್ತಿನ ಜಂಟಿ ಸಮಿತಿ (ಜೆಪಿಸಿ) ಅಧ್ಯಕ್ಷ ಜಗದಂಬಿಕಾ ಪಾಲ್ ಅವರನ್ನು ಭೇಟಿ ಮಾಡಿ ಇದುವರೆಗಿನ ಹೋರಾಟದ ವಿವರಣೆ, ವಕ್ಫ್ ಸಂಬಂಧ ಕುಮಾರ್ ಬಂಗಾರಪ್ಪ ಸಮಿತಿ ನೀಡಿದ್ದ ವರದಿಯನ್ನು ಸಲ್ಲಿಸಲಿದೆ.
Related Articles
Advertisement
ನಮ್ಮನ್ನು ಉಚ್ಚಾಟಿಸಿ ಎನ್ನುವ ಹಾಗೂ ದಾರಿ ಮೇಲೆ ಹೋಗುವವರಿಗೆ ನಾನು ಉತ್ತರಿಸುವುದಿಲ್ಲ. ವಕ್ಫ್ ವಿರುದ್ಧ ಹೋರಾಟ ನಡೆದಿದೆ. ಪಕ್ಷ ಅಥವಾ ಪಕ್ಷದ ಯಾವುದೇ ವ್ಯಕ್ತಿಗಳ ಬಗ್ಗೆ ನಾನು ಮಾತಾಡುವುದಿಲ್ಲ. ಸಾವಿರಾರು ಕೋ.ರೂ. ಇರುವವರು ಸಮಾವೇಶ ನಡೆಸುತ್ತಾರೆ. ನಮ್ಮ ಬಳಿ ಹಣ ಇಲ್ಲ. ಹೀಗಾಗಿ ನಾವು ರಾಜ್ಯಾದ್ಯಂತ ತಿರುಗಾಡಿ ವಕ್ಫ್ ಸಮಸ್ಯೆ ಆಲಿಸುತ್ತೇವೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವರಿಷ್ಠರ ನಿಲುವೇನು?ರಾಜ್ಯ ಬಿಜೆಪಿಯ ಈ ಬಣ ಬಡಿದಾಟದ ವಿಚಾರದಲ್ಲಿ ವರಿಷ್ಠರ ನಿಲುವೇನೆಂಬುದು ಮಾತ್ರ ನಿಗೂಢವಾಗಿಯೇ ಉಳಿದಿದೆ. ಬಿಜೆಪಿ ಮೂಲಗಳ ಪ್ರಕಾರ ಯತ್ನಾಳ್ ಅವರನ್ನು ಅಮಾನತು ಮಾಡುವ ಯಾವುದೇ ಭರವಸೆಯನ್ನು ವರಿಷ್ಠರು ಇದುವರೆಗೆ ನೀಡಿಲ್ಲ. ಆದರೆ ಎಲ್ಲ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ರಾಷ್ಟ್ರಾದ್ಯಂತ ಸಂಘಟನ ಪರ್ವ ನಡೆಯುತ್ತಿರುವುದರಿಂದ ಈ ಹಂತದಲ್ಲಿ ಯಾರ ಪರವಾದ ನಿಲುವು ತೆಗೆದುಕೊಳ್ಳುವ ಸಾಧ್ಯತೆಯಿಲ್ಲ. ಹೀಗಾಗಿ ಜನವರಿ ಬಳಿಕ ಸಂಧಾನ ಚಟುವಟಿಕೆ ನಡೆಯಬಹುದು ಎನ್ನಲಾಗುತ್ತಿದೆ. ಮತ್ತೆ ದಿಲ್ಲಿಗೆ
ಇವೆಲ್ಲವುಗಳ ಮಧ್ಯೆ ನಡ್ಡಾ ಹಾಗೂ ಅಮಿತ್ ಶಾ ಅವರ ಭೇಟಿಗೆ ಅವಕಾಶ ಸಿಕ್ಕಿದರೆ ವಿಜಯೇಂದ್ರ ಅವರ ಸೋಮವಾರ ಮತ್ತೆ ದಿಲ್ಲಿಗೆ ತೆರಳುವ ಸಾಧ್ಯತೆ ಇದೆ. ಡಿ. 9ರಿಂದ ಬೆಳಗಾವಿಯಲ್ಲಿ ನಡೆಯುವ ಅಧಿವೇಶನಕ್ಕೆ ಮುಂಚಿತವಾಗಿ ಯತ್ನಾಳ್ ಬಣದ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ವರಿಷ್ಠರ ಮನವೊಲಿಸಲು ಅವರ ಪ್ರಯತ್ನ ನಡೆಸಿದ್ದಾರೆ. ಈ ತಿಂಗಳಲ್ಲಿ ಎರಡು ಬಾರಿ ಅವರು ದಿಲ್ಲಿಗೆ ತೆರಳಿ ವರಿಷ್ಠರ ಭೇಟಿಗೆ ಪ್ರಯತ್ನ ನಡೆಸಿದರೂ ಪೂರ್ಣ ಯಶಸ್ಸು ಸಿಕ್ಕಿಲ್ಲ. ರಾಜ್ಯ ಸೇವೆಗೆ ಶೋಭಾ, ಸೋಮಣ್ಣ?
ಬಿಜೆಪಿ ಬಣ ರಾಜಕೀಯದ ನಡುವೆಯೇ ಬಿಜೆಪಿಯ ತಟಸ್ಥ ಗುಂಪೊಂದು ಎಲ್ಲ ಗೊಂದಲಗಳಿಗೂ ಪೂರ್ಣ ವಿರಾಮ ಹಾಕುವಂತೆ ವರಿಷ್ಠರ ಮೇಲೆ ಒತ್ತಡ ಹೇರುತ್ತಿದೆ. ಈ ಬೆಳವಣಿಗೆಯ ಮಧ್ಯೆಯೇ ಕೇಂದ್ರ ಸಚಿವರಾದ ವಿ. ಸೋಮಣ್ಣ ಅಥವಾ ಶೋಭಾ ಕರಂದ್ಲಾಜೆ ಅವರನ್ನು ಕರ್ನಾಟಕಕ್ಕೆ ನಿಯೋಜನೆ ಮಾಡಬೇಕೆಂಬ ಚರ್ಚೆ ದಿಲ್ಲಿ ಮಟ್ಟದಲ್ಲಿ ಪ್ರಾರಂಭವಾಗಿದೆ.