ಪಣಜಿ: ಗೋವಾ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪಾರೀಕರ್ ನಿಧನದ ಬೆನ್ನಲ್ಲೇ ಮೈತ್ರಿ ಸರಕಾರದಲ್ಲಿ ಭುಗಿಲೆದ್ದಿದ್ದ ಮುಖ್ಯಮಂತ್ರಿ ಗಾದಿಯ ಪೈಪೋಟಿಗೆ ಕೊನೆಗೂ ತೆರೆಬಿದ್ದಿದೆ. ಬಿಜೆಪಿಯ ಹಿರಿಯ ನಾಯಕ ಪ್ರಮೋದ್ ಸಾವಂತ್ ಅವರನ್ನು ನೂತನ ಮುಖ್ಯಮಂತ್ರಿಯಾಗಿ ಆರಿಸಲಾಗಿದ್ದು, ಸರಕಾರದಲ್ಲಿ ಪಾಲುದಾರರಾಗಿರುವ ಮಹಾ ರಾಷ್ಟ್ರವಾದಿ ಗೋಮಂತಕ್ ಪಾರ್ಟಿಯ (ಎಂಜಿಪಿ) ಸುಧಿನ್ ಧವಾಲಿಕರ್ ಹಾಗೂ ಗೋವಾ ಫಾರ್ವರ್ಡ್ ಪಾರ್ಟಿಯ (ಜಿಎಫ್ಪಿ) ನಾಯಕ ವಿಜಯ್ ಸರ್ದೇಸಾಯಿಗೆ ಡಿಸಿಎಂ ಪಟ್ಟ ನೀಡಲಾಗಿದೆ. ಸೋಮವಾರ ರಾತ್ರಿಯೇ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಈ ಮೂವರೂ ಅಧಿಕಾರ ಸ್ವೀಕರಿಸಿ ದರು. ನೂತನ ಸಿಎಂ ಸಾವಂತ್ ಬಿಎಎಎಂಸ್ ಮತ್ತು ಸಮಾಜಕಾರ್ಯದಲ್ಲಿ ಸ್ನಾತ ಕೋತ್ತರ ಪದವಿ ಪಡೆದಿದ್ದಾರೆ.
ಸುಖಾಂತ್ಯ
ಒಟ್ಟು 40 ಸ್ಥಾನ ಗಳುಳ್ಳ ಗೋವಾ ವಿಧಾನಸಭೆಯಲ್ಲಿ ಬಿಜೆಪಿ 21 ಸ್ಥಾನ ಹೊಂದಿದ್ದು, ಎಂಜಿಪಿ, ಜಿಎಫ್ಪಿಯಿಂದ ತಲಾ ಮೂವರು ಹಾಗೂ ಮೂವರು ಪಕ್ಷೇತರರ ಬೆಂಬಲ ದೊಂದಿಗೆ ಸರಕಾರರಚಿಸಿದೆ. ಹಾಗಾಗಿ, ಪಾರೀಕರ್ ನಿಧನದ ಬೆನ್ನಲ್ಲೇ ಮುಖ್ಯಮಂತ್ರಿ ಗಾದಿಗೆ ನಡೆದ ಹಗ್ಗಜಗ್ಗಾಟದಿಂದಾಗಿ ಸರಕಾರ ಅತಂತ್ರ ಸ್ಥಿತಿಗೆ ತಲುಪುವ ಸಾಧ್ಯತೆ ದಟ್ಟವಾಗಿ ಗೋಚರಿಸಿತ್ತು.
ಒಂದೆಡೆ ನೆಚ್ಚಿನ ನಾಯಕನನ್ನು ಕಳೆದುಕೊಂಡ ದುಃಖದಲ್ಲಿದ್ದ ಬಿಜೆಪಿ, ಸಣ್ಣಗೆ ಭುಗಿಲೆದ್ದಿದ್ದ ಈ ಜ್ವಾಲಾಮುಖಿಯನ್ನು ಆರಂಭದಲ್ಲೇ ಶಮನ ಮಾಡಲೇಬೇಕಿತ್ತು. ಹಾಗಾಗಿ, ರವಿವಾರ ರಾತ್ರಿಯೇ ಪಣಜಿಗೆ ಆಗಮಿಸಿದ್ದ ನಿತಿನ್ ಗಡ್ಕರಿ, ಮಿತ್ರ ಪಕ್ಷಗಳ ನಾಯಕರ ಜತೆಗೆ ಹಲವಾರು ಸುತ್ತುಗಳಲ್ಲಿ ಪ್ರತ್ಯೇಕ ಮಾತುಕತೆ ನಡೆಸಿದ್ದರು. ಆದರೆ, ಅಂತ್ಯ ಸಂಸ್ಕಾರಕ್ಕೆ ಆಗಮಿಸಿದ ಅಮಿತ್ ಶಾ ಅವರ ಮಧ್ಯಪ್ರವೇಶದಿಂದಾಗಿ ಸಂಧಾನ ಮಾತುಕತೆ ಸಫಲವಾಯಿತು. ಇದೇ ವೇಳೆ ಕಾಂಗ್ರೆಸ್‌ನ ನಿಯೋಗ ರಾಜ್ಯಪಾಲೆ ಮೃದುಲಾ ಸಿನ್ಹಾರನ್ನು ಭೇಟಿಯಾಗಿ ಸರಕಾರ ರಚನೆಯ ಹಕ್ಕು ಮಂಡಿಸಿತ್ತು.