Advertisement

ಜೆಡಿಎಸ್‌ ಮುಕ್ತ ಹಾಸನ ಜಿಲ್ಲೆಗೆ ಬಿಜೆಪಿ ಸಂಕಲ್ಪ: ನಳೀನ್‌ ಕುಮಾರ್‌ ಕಟೀಲ್‌

06:16 PM Nov 04, 2022 | Team Udayavani |

ಹಾಸನ: ರಾವಣ ರಾಜ್ಯವಾಗಿರುವ ಹಾಸನ ಜಿಲ್ಲೆಯನ್ನು ರಾಮರಾಜ್ಯವನ್ನಾಗಿ ಮಾಡುವ ಮೂಲಕ ಜೆಡಿಎಸ್‌ ಮುಕ್ತ ಜಿಲ್ಲೆಯಾಗಲು ಬಿಜೆಪಿ ಸಜ್ಜಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಅವರು ಹೇಳಿದರು.

Advertisement

ನಗರದ ಹಾಸನಾಂಬೆ ಕಲಾಕ್ಷೇತ್ರದಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಬಿಜೆಪಿ ಬೂತ್‌ ಅಧ್ಯಕ್ಷರು ಹಾಗೂ ಬಿಎಲ್‌ಎ-2 ಸಂಕಲ್ಪ ಸಭೆಯಲ್ಲಿ ಮಾತನಾಡಿ ದ ಅವರು, ಹಾಸನ ಜಿಲ್ಲೆಯನ್ನು ಜೆಡಿಎಸ್‌ ಮುಕ್ತ ಮಾಡಿ ರಾಮರಾಜ್ಯ ಮಾಡುತ್ತೇವೆ. ಈ ರಾಜ್ಯದಲ್ಲಿ ಮೂವರು ನಾಯಕರಿದ್ದಾರೆ. ಜನನಾಯಕ ಎಂದರೆ ಬಿ.ಎಸ್‌.ಯಡಿಯೂರಪ್ಪ, ಖಳನಾಯಕ ಸಿದ್ದರಾಮ ಯ್ಯ, ಇನ್ನೂ ಕಣ್ಣೀರ ನಾಯಕ ಎಚ್‌.ಡಿ. ಕುಮಾರಸ್ವಾಮಿ. ಈ ವಿಷಯವನ್ನು ಭವಾನಿ ಅಕ್ಕನಿಗೆ ಕೇಳಿಸುವ ಹಾಗೆ ಬಿಜೆಪಿ ಕಾರ್ಯಕರ್ತರು ಹೇಳಿದರೆ ಭವಾನಿ ಅಕ್ಕನಿಗೆ ಖುಷಿಯಾಗುತ್ತದೆ ಎಂದು ವ್ಯಂಗ್ಯವಾಡಿದರು.

ಓವರ್‌ ಟೇಕ್‌ ವ್ಯಾಖ್ಯಾನ: ದೇವೇಗೌಡರ ಗರಡಿಯಲ್ಲಿ ಬೆಳೆದ ಸಿದ್ದರಾಮಯ್ಯ ದೇವೇಗೌಡರನ್ನು ತುಳಿದು ಖಳನಾಯಕನಾದರು. ಕಾಂಗ್ರೆಸ್‌ ಪಕ್ಷಕ್ಕೆ ಹೋದ ಸಿದ್ದರಾಮಯ್ಯ ಅಲ್ಲಿಯೂ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್‌, ಡಿ.ಕೆ.ಶಿವಕುಮಾರ್‌ ಅವರನ್ನು ಮುಗಿಸಿದರು. ಇನ್ನು ಕಣ್ಣಿರ ಕಥೆಯ ನಾಯಕ ಎಚ್‌ .ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದರೂ ಸಿದ್ದರಾಮಯ್ಯ ಆಡಳಿತ ಮಾಡಲು ಬಿಡಲಿಲ್ಲ ಎಂದು ಕಣ್ಣಿರು ಹಾಕಿದರು.

574 ಕೋಟಿ ವೆಚ್ಚದಲ್ಲಿ ಚತುಷ್ಪಥ: 574 ಕೋಟಿ ರೂ. ವೆಚ್ಚದಲ್ಲಿ ಹಾಸನ – ಸಕಲೇಶಪುರ -ಮಾರನಹಳ್ಳಿ ನಡುವೆ ಚತುಷ್ಪಥ ರಸ್ತೆ ನಿರ್ಮಾಣವಾಗುತ್ತಿದೆ. ಒಂದು ಕುಟುಂಬದಿಂದ ಹಾಸನ ಅಭಿವೃದ್ಧಿ ಆಗಿಲ್ಲ. ಆ ಕುಟುಂಬ ಹಾಸನದ ಜನರ ಮತ ಪಡೆದು ಅಭಿವೃದ್ಧಿ ಆಗಿದೆ. ಹಾಸನ ಅಭಿವೃದ್ಧಿ ಆಗಿರುವುದು ಡಬಲ್‌ ಇಂಜಿನ್‌ ಸರ್ಕಾರದಿಂದ. ಹಾಸನ ವಿಮಾನ ನಿಲ್ದಾಣ, ರಿಂಗ್‌ ರಸ್ತೆ, ಪಾರ್ಕ್‌ ನಿರ್ಮಿಸಿ ದ್ದು ಡಬಲ್‌ ಇಂಜಿನ್‌ ಸರ್ಕಾರ ಎಂದರು.

ಕುಟುಂಬ ರಾಜಕಾರಣಕ್ಕೆ ಕಿಡಿ: ಭಾರತ್‌ ಜೋಡೋ ಯಾತ್ರೆ ಶುರು ವಾದ ಕೊಳ್ಳೆಗಾಲದಲ್ಲಿ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದೆ. ರಾಹುಲ್‌ ಗಾಂಧಿ ಹೋದ ಕಡೆ ಕಾಂಗ್ರೆಸ್‌ ಮುಕ್ತವಾಗಿದೆ. ಸಿದ್ದು ಕುಟುಂಬ, ಡಿಕೆಶಿ ಕುಟುಂಬ, ದೇವೇಗೌಡರ ಕುಟುಂಬದವರು ನಿರುದ್ಯೋಗಿಗಳಾಗಲಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಕೆಂಪೇಗೌಡರನ್ನು ಮರೆತು ಟಿಪ್ಪುಗಾಗಿ ಅತ್ತರು ಎಂದು ಕುಟುಕಿದರು.

Advertisement

ಪಿಎಫ್ಐ ನಿಷೇಧ ಮಾಡಿದ ಸರ್ಕಾರ: ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ರಾಜ್ಯದಲ್ಲಿ ಪಿಎಫ್ಐ ಬೆಳೆಸಿದರು. ಕಾಂಗ್ರೆಸ್‌ ಸರ್ಕಾರದಲ್ಲಿ 24 ಹಿಂದೂಗಳ ಹತ್ಯೆ ನಡೆಯಿತು. ಬಂಧನವಾಗಿದ್ದ 2000 ಪಿಎಫ್ಐ ಕಾರ್ಯಕರ್ತರನ್ನು ಜೈಲಿನಿಂದ ಬಿಟ್ಟಿದ್ದರು. ಇವತ್ತು ಪಿಎಫ್ಐ ನಿಷೇಧಿಸಿದ್ದು ಪ್ರಧಾನಿ ಮೋದಿ ಹಾಗೂ ಸಿಎಂ ಬೊಮ್ಮಾಯಿ ಸರ್ಕಾರ ಎಂದು ಸರ್ಕಾರ ವನ್ನು ಸಮರ್ಥಿಸಿಕೊಂಡರು.

ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಎಚ್‌.ಕೆ. ಸುರೇಶ್‌, ಶಾಸಕ ಪ್ರೀತಮ್‌ ಜೆ. ಗೌಡ, ಹುಡಾ ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ, ನಗರಸಭೆ ಅಧ್ಯಕ್ಷ ಆರ್‌. ಮೋಹನ್‌ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಬಿಜೆಪಿಗೆ ದಳ ಶಾಸಕರು?
ಕುಮಾರಸ್ವಾಮಿ ಅವರು ಸಿಎಂ ಆದಾಗ ವಿಧಾನಸೌಧ ಬಿಟ್ಟು ತಾಜ್‌ ಹೊಟೇಲ್‌ನಲ್ಲಿ ಆಡಳಿತ ನಡೆಸಿದರು. ಅಲ್ಲಿ ಶಾಸಕರು, ಮಂತ್ರಿಗಳಿಗೆ ಬಾಗಿಲು ತೆರೆಯಲಿಲ್ಲ. ಹಾಗಾಗಿ 17 ಜನ ಶಾಸಕರು ರಾಜೀನಾಮೆ ನೀಡಿ ಬಿಜೆಪಿಗೆ ಬಂದರು. ಈಗಲೂ ಜೆಡಿಎಸ್‌ನ ಕೆಲವು ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದು, ಮುಂದಿನ ಚುನಾವಣೆಯಲ್ಲಿ ಅವರು ಬಿಜೆಪಿ ಸೇರುತ್ತಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next