Advertisement

ಬಿಜೆಪಿಗೆ ಸಂಸದೆ ಫ‌ುಲೆ ರಾಜೀನಾಮೆ

06:00 AM Dec 07, 2018 | Team Udayavani |

ಲಕ್ನೋ: ಇತ್ತೀಚೆಗಷ್ಟೇ ಪಕ್ಷದ ವಿರುದ್ಧ ಮಾತನಾಡಿ ಇರುಸು ಮುರುಸು ಉಂಟುಮಾಡಿದ್ದ ಉತ್ತರಪ್ರದೇಶದ ಬಹ್ರೈಚ್‌ನ ಬಿಜೆಪಿ ಸಂಸದೆ ಸಾವಿತ್ರಿ ಬಾಯಿ ಫ‌ುಲೆ ಅವರು ಗುರುವಾರ ಪಕ್ಷಕ್ಕೆ ಏಕಾಏಕಿ ರಾಜೀನಾಮೆ ನೀಡಿದ್ದಾರೆ. ಲಕ್ನೋದಲ್ಲಿ ಅವರು ಈ ಘೋಷಣೆ ಮಾಡಿದ್ದು, ಪಕ್ಷಕ್ಕೆ ಮಾತ್ರ ರಾಜೀನಾಮೆ ನೀಡುತ್ತಿದ್ದೇನೆ. ಅವಧಿ ಪೂರ್ಣಗೊಳ್ಳುವವರೆಗೆ ಲೋಕಸಭೆ ಸದಸ್ಯೆಯಾಗಿ ಮುಂದುವರಿಯುತ್ತೇನೆ ಎಂದಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಫ‌ುಲೆ ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದು, ಸಂವಿಧಾನ ಶಿಲ್ಪಿ ಅಂಬೇಡ್ಕರ್‌ರ ಪರಿ ನಿರ್ವಾಣ ದಿನದಂದೇ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಬಿಜೆಪಿಯು ಸಮಾಜವನ್ನು ವಿಭಜಿಸುವ ಕೆಲಸ ಮಾಡುತ್ತಿದೆ. ಪ್ರತಿಮೆ, ಮಂದಿರ ನಿರ್ಮಾಣಕ್ಕಾಗಿ ಸುಖಾ ಸುಮ್ಮನೆ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ದೇಶದ ಚೌಕಿದಾರನ ಕಣ್ಣ ಮುಂದೆಯೇ ಸಂಪನ್ಮೂಲಗಳನ್ನು ಲೂಟಿ ಮಾಡಲಾಗುತ್ತಿದೆ. ಹಿಂದೂ- ಮುಸ್ಲಿಂ, ಭಾರತ – ಪಾಕಿಸ್ತಾನದ ಹೆಸರಲ್ಲಿ ದ್ವೇಷ ಹರಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಪಕ್ಷದ ನಾಯಕರು ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಬಿಜೆಪಿಯು ಸಂವಿಧಾನದ ಬದಲಿಗೆ ಮನುಸ್ಮತಿ ಆಧಾರದಲ್ಲಿ ದೇಶ ವನ್ನು ಮುನ್ನಡೆಸಲು ಚಿಂತಿಸಿದಂತಿದೆ ಎಂದಿದ್ದಾರೆ ಫ‌ುಲೆ. ಇದೇ ವೇಳೆ, ಡಿ.23ರಿಂದ ದಲಿತರ ಹಕ್ಕುಗಳಿಗಾಗಿ ಹೋರಾಟ ಆರಂಭಿಸುತ್ತೇನೆ ಎಂದಿದ್ದಾರೆ.

ಫ‌ುಲೆ ಅವರ ರಾಜೀನಾಮೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಹರಿಶ್ಚಂದ್ರ ಶ್ರೀ ವಾಸ್ತವ, ಫ‌ುಲೆ ಅವರು ಬಹ್ರೈಚ್‌ನ ಜನರ ಆಶೋತ್ತರಗಳನ್ನು ಈಡೇರಿಸಿಲ್ಲ, ತಮ್ಮ ವೈಫ‌ಲ್ಯಗಳನ್ನು ಮುಚ್ಚಿಡುವ ಸಲುವಾಗಿ ಪಕ್ಷದ ವಿರುದ್ಧ ರೇಗಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next