ಮೈಸೂರು: ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ನಾಯಕರಿಗೆ ಪಾಕಿಸ್ತಾನ, ಮಸೀದಿ, ಹಿಂದೂ ಧರ್ಮ, ಮಂದಿರ ನೆನಪಾಗುತ್ತದೆಯೇ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಮಂಗಳವಾರ ಮೈಸೂರು ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು,ಗೃಹ ಸಚಿವರು ಹಾಗೂ ಗೃಹ ಇಲಾಖೆ ಸಮರ್ಥವಾಗಿದ್ದು, ಎಲ್ಲವನ್ನು ನಿಭಾಯಿಸುತ್ತಿದ್ದಾರೆ.
ಲೋಕಸಭಾ ಚುನಾವಣೆಗೆ ಒಂದು ವರ್ಷ ಇರುವಾಗ ಅನಗತ್ಯವಾಗಿ ಧರ್ಮದ ಹೆಸರಿನಲ್ಲಿ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ. ಹಿಂದೂ ಧರ್ಮವನ್ನು ಬಿಜೆಪಿಯವರು ಗುತ್ತಿಗೆ ಪಡೆದಿದ್ದಾರೆಯೇ? ನಾನು ಕೂಡ ಓರ್ವ ಹಿಂದೂ. ಸುಖಸುಮ್ಮನೆ ಹಿಂದೂಗಳಿಗೆ ರಕ್ಷಣೆ ಇಲ್ಲ ಎಂದು ಹೇಳುವುದು ಸರಿಯಲ್ಲ. ಇಂತಹ ಸಮಯದಲ್ಲಿ ಆಂಜನೇಯ, ಗಣೇಶ, ಪಾಕಿಸ್ತಾನ, ಮಂದಿರ ಹಾಗೂ ಮಸೀದಿ ನೆನಪಾಗುತ್ತದೆಯೇ ಎಂದು ಛೇಡಿಸಿದರು.
ಬಿಜೆಪಿಯವರಿಗೆ ಧರ್ಮದ ವಿಷಯ ಬಿಟ್ಟರೆ ಮಾತನಾಡಲು ಯಾವುದೇ ವಿಚಾರಗಳಿಲ್ಲ. ಬಿಜೆಪಿಯವರದ್ದು, ಚುನಾವಣಾ ಗಿಮಿಕ್. ರಾಜ್ಯದ ಜನತೆ ಬುದ್ಧಿವಂತರಿದ್ದು,ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಆ ಪಕ್ಷಕ್ಕೆ ಪಾಠ ಕಲಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲೂ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಯಾವ ಸಮುದಾಯಕ್ಕೂ ಅನ್ಯಾಯವಾಗಿಲ್ಲ. ಅಧಿಕಾರಿಗಳನ್ನು ಅವರ ಕಾರ್ಯ ವೈಖರಿ ಆಧಾರದ ಮೇಲೆ ನೇಮಕ ಮಾಡಲಾಗುತ್ತದೆ. ಜಾತಿಯ ಆಧಾರದ ಮೇಲೆ ಯಾವ ಅಧಿಕಾರಿಗಳನ್ನು ನೇಮಕ ಮಾಡುವುದಿಲ್ಲ. ಹೀಗಿದ್ದು, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರು ಆ ರೀತಿ ಏಕೆ ಮಾತನಾಡಿದ್ದರೂ ಗೊತ್ತಿಲ್ಲ ಎಂದರು.
ಹಗಲು ಕನಸು: ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರು ಕಾಂಗ್ರೆಸ್ ಸರ್ಕಾರ ಬೀಳುತ್ತದೆ ಎಂದು ಹಗಲು ಕನಸು ಕಾಣುತ್ತಿದ್ದಾರೆ ಎಂದು ಸಚಿವರು ಖಾರವಾಗಿ ಹೇಳಿದ್ದಾರೆ.
ಈ ಹಿಂದೆ ಅಪರೇಷನ್ ಕಮಲ ಮಾಡಿದ್ದಂತೆ ಎಂದು ಸಿ.ಪಿ.ಯೋಗೇಶ್ವರ್ ಭ್ರಮಾಲೋಕದಲ್ಲಿದ್ದಾರೆ.
ಜನ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿದ್ದು, ಯಾರಿಂದಲೂ ಸರ್ಕಾರಕ್ಕೆ ಏನು ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.