ನವದೆಹಲಿ: ಆಮ್ ಆದ್ಮಿ ಪಕ್ಷದ ನೇತೃತ್ವದ ದೆಹಲಿ ಸರ್ಕಾರದ ನೂತನ ಅಬಕಾರಿ ನೀತಿ ಅನುಸಾರ ಅಬಕಾರಿ ಪರವಾನಗಿ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನಲಾದ ಎರಡು ಸ್ಟಿಂಗ್ ಅಪರೇಷನ್ ವಿಡಿಯೋಗಳನ್ನು ಗುರುವಾರ ಬಿಜೆಪಿ ಬಿಡುಗಡೆಗೊಳಿಸಿದೆ.
ಈ ವೇಳೆ ಮಾತನಾಡಿದ ಬಿಜೆಪಿ ದೆಹಲಿ ಘಟಕದ ಮುಖ್ಯಸ್ಥ ಆದೇಶ್ ಗುಪ್ತಾ, “ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ತುಂಬ ಸುಳ್ಳು ಹೇಳುತ್ತಾರೆ. ಆದರೆ ಅವರಿಂದ ಸತ್ಯ ಮುಚ್ಚಿಡಲು ಆಗುವುದಿಲ್ಲ. ಇದೀಗ ಆಪ್‌ನ ಅಬಕಾರಿ ಹಗರಣ ಬಯಲಾಗಿದೆ,’ ಎಂದಿದ್ದಾರೆ.
“ವಿಡಿಯೋದಲ್ಲಿ, ಅಬಕಾರಿ ಹಗರಣದ ಆರೋಪಿಯ ತಂದೆ ಮಾತನಾಡಿದ್ದು, “150 ಕೋಟಿ ರೂಪಾಯಿಗೂ ಅಧಿಕ ವಹಿವಾಟು ಇರುವವರಿಗೆ ಮಾತ್ರ ಅಬಕಾರಿ ಲೈಸನ್ಸ್ ನೀಡಲಾಗುತ್ತದೆ. ಇದರಿಂದ ಶೇ.90ರಷ್ಟು ಆಕಾಂಕ್ಷಿಗಳು ಹೊರಗೆ ಉಳಿಯುತ್ತಾರೆ’ ಎಂದಿದ್ದಾರೆ.
“ಮತ್ತೂಂದು ವಿಡಿಯೋದಲ್ಲಿ ಹಗರಣದ ಆರೋಪಿ ಅಮಿತ್ ಅರೋರಾ, ಲೈಸನ್ಸ್‌ಗಳಿಗೆ ದೆಹಲಿ ಸರ್ಕಾರ ನಿಗದಿಪಡಿಸಿರುವ ಕಮಿಷನ್ ಹಾಗೂ ಈ ಹಣವನ್ನು ಗೋವಾ ಮತ್ತು ಪಂಜಾಬ್ ಚುನಾವಣೆಗೆ ಬಳಸಿಕೊಳ್ಳುವ ಬಗ್ಗೆ ಮಾತನಾಡಿದ್ದಾನೆ,’ ಎಂದು ಆರೋಪಿಸಿದರು.
ಈ ಎರಡೂ ವಿಡಿಯೋಗಳ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ, “ಈ ವಿಡಿಯೋಗಳ ಅಸಲಿಯತ್ತು ಬಯಲಾಗಲು ಇದನ್ನು ಸಿಬಿಐ ತನಿಖೆಗೆ ವಹಿಸಬೇಕು. ನಾನು ತಪ್ಪು ಮಾಡಿದ್ದರೆ ಸಿಬಿಐ ನನ್ನನ್ನು ಬಂಧಿಸಲಿ,’ ಎಂದು ಸವಾಲು ಎಸೆದಿದ್ದಾರೆ.