ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರ, ದುರಾಡಳಿತದ ಜತೆಗೆ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿರುವ ಬಿಜೆಪಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಎರಡನೇ “ಚಾರ್ಜ್‌ಶೀಟ್’ಸೋಮವಾರ ಬಿಡುಗಡೆ ಮಾಡಿದೆ.
ನಗರದಲ್ಲಿ ಸೋಮವಾರ “ಕಾಂಗ್ರೆಸ್ ದುರಾಡಳಿತ ಅಧಿಕಾರದ ದುರುಪಯೋಗ’ ಹಾಗೂ “ಕಾಂಗ್ರೆಸ್ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರ!’ ಹೆಸರಿನಡಿ ಚಾರ್ಜ್‌ಶೀಟ್ ಬಿಡುಗಡೆ ಮಾಡಿದ ಪ್ರಕಾಶ್ ಜಾವಡೇಕರ್, ಮುಖ್ಯಮಂತ್ರಿಗಳ ಸ್ವಜನ ಪಕ್ಷಪಾತ, ಸಚಿವ ಡಿ.ಕೆ.ಶಿವಕುಮಾರ್ ಅಕ್ರಮ ಆಸ್ತಿ ಗಳಿಕೆ, ಹಾಸಿಗೆ- ದಿಂಬು ಹಗರಣ, ವಕ್ಫ್ ಆಸ್ತಿ ಕಬಳಿಕೆ, ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಡೈರಿ ಹಗರಣ ಸೇರಿದಂತೆ ಸಾಕಷ್ಟು ಹಗರಣ ನಡೆದಿವೆ. ಯುಪಿಎ ಸರ್ಕಾರ 10 ವರ್ಷದಲ್ಲಿ ನಡೆಸಿದ ಸರಣಿ ಹಗರಣಗಳ ಮಾದರಿಯಲ್ಲೇ ರಾಜ್ಯ ಕಾಂಗ್ರೆಸ್ ಸರ್ಕಾರವೂ ಭಾರಿ ಭ್ರಷ್ಟಾಚಾರ, ಅಕ್ರಮದಲ್ಲಿ ತೊಡಗಿದೆ. ಕಾಂಗ್ರೆಸ್ ಸರ್ಕಾರವನ್ನು ಕಿತ್ತೂಗೆಯಲು ಬಿಜೆಪಿ ಹೋರಾಟ ತೀವ್ರಗೊಳಿಸಲಿದೆ ಎಂದು ಹೇಳಿದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 2,500 ಕೋಟಿ ರೂ. ಮೊತ್ತದ ಕಾಮಗಾರಿಯನ್ನು ಕಪ್ಪುಪಟ್ಟಿಯಲ್ಲಿದ್ದ ಸಂಸ್ಥೆಗೆ ಅಕ್ರಮವಾಗಿ ನೀಡಿರುವ ಬಗ್ಗೆ ಆರೋಪ ಕೇಳಿಬರುತ್ತಿದ್ದಂತೆ ಟೆಂಡರ್ ರದ್ದುಪಡಿಸಲಾಯಿತು. ನಾಲಾ ನಿರ್ಮಾಣ, ಅಭಿವೃದ್ಧಿ ಸಂಬಂಧ 157 ಕೋಟಿ ರೂ. ಮೊತ್ತದ ಕಾಮಗಾರಿಯ ಟೆಂಡರ್‌ನಲ್ಲಿ ಅಕ್ರಮದ ಬಗ್ಗೆ ಬಿ.ಎಸ್.ಯಡಿಯೂರಪ್ಪ ಅವರು ಪತ್ರಿಕಾಗೋಷ್ಠಿ ನಡೆಸುವ ಬಗ್ಗೆ ಮಾಹಿತಿ ಪಡೆದು ಎರಡು ದಿನ ಮೊದಲೇ ಟೆಂಡರ್ ರದ್ದುಪಡಿಸಲಾಗಿದೆ. ಬಿಜೆಪಿ ಆರೋಪ ಮಾಡುತ್ತಿದ್ದಂತೆ ಟೆಂಡರ್ ರದ್ದುಪಡಿಸುತ್ತಿರುವುದನ್ನು ಗಮನಿಸಿದರೆ ಅಕ್ರಮ ನಡೆದಿತ್ತು ಎಂಬುದು ಸಾಬೀತಾಗುತ್ತಿದೆ ಎಂದು ತಿಳಿಸಿದರು.
ದಕ್ಷತೆಯಿಂದ ಕಾನೂನು ಪಾಲನೆ ಮೂಲಕ ಕಾರ್ಯ ನಿರ್ವಹಿಸುವ ಪ್ರಾಮಾಣಿಕ ಅಧಿಕಾರಿಗಳನ್ನು ಗೌರವಿಸಿ ಉತ್ತೇಜಿಸುವ ಬದಲು ಕಿರುಕುಳ ನೀಡಿ ವರ್ಗಾವಣೆ ಮಾಡಲಾಗುತ್ತಿದೆ. ದಲಿತರ ದೌರ್ಜನ್ಯ ತಡೆ ಕಾಯ್ದೆ ದುರ್ಬಲಗೊಳಿಸಲಾಗುತ್ತಿದೆ ಎಂದು ಉಯಿಲೆಬ್ಬಿಸುವ ಕಾಂಗ್ರೆಸ್ ಮೈಸೂರಿನಲ್ಲಿ ದಲಿತ ಅಧಿಕಾರಿ ಸಿ.ಶಿಖಾ ಕಾನೂನು ಪಾಲಿಸಿದ್ದಕ್ಕೆ ಅವಮಾನಿಸಿ ವರ್ಗಾವಣೆ ಮಾಡಲಾಗಿತ್ತು. ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅಸಹಜ ಸಾವು, ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಾಕಷ್ಟು ಹೋರಾಟದ ಬಳಿಕ ಸಿಬಿಐ ತನಿಖೆಗೆ ವಹಿಸಲಾಗಿದೆ. ಸಿಬಿಐಗೆ ತನಿಖೆಗೆ ವಹಿಸಲಾಗಿದೆ ಎಂದರೆ ಅಕ್ರಮ ನಡೆದಿದೆ ಎಂದೇ ಅರ್ಥ ಎಂದು ಹೇಳಿದರು.
ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಲಾಗಿದೆ. ಲೋಕಾಯುಕ್ತರ ಕೊಲೆ ಯತ್ನ ನಡೆದಿರುವಾಗ ಲೋಕಾಯುಕ್ತ ತನಿಖೆಯನ್ನು ನಿರೀಕ್ಷಿಸುವುದಾದರೂ ಹೇಗೆ. ಒಟ್ಟಾರೆ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, “ಸರ್ಕಾರ ಬದಲಿಸಿ ಬಿಜೆಪಿ ಗೆಲ್ಲಿಸಿ’ ಎಂಬ ಘೋಷವಾಕ್ಯದೊಂದಿಗೆ ಜನರಿಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು. ಸಂಸದೆ ಶೋಭಾ ಕರಂದ್ಲಾಜೆ, ಬಿಜೆಪಿ ವಕ್ತಾರ ಅಶ್ವತ್ಥ ನಾರಾಯಣ ಇತರರು ಉಪಸ್ಥಿತರಿದ್ದರು.