Advertisement

‘ಬಹುಷಃ ಆವತ್ತು ನೀವು ವಿಡಿಯೋ ಗೇಮ್‌ ಆಡೋದ್ರಲ್ಲಿ ಬ್ಯುಸಿಯಾಗಿದ್ರಿ!’

10:58 AM Mar 10, 2019 | Team Udayavani |

ನವದೆಹಲಿ: ನಮ್ಮ ಸಿ.ಆರ್‌.ಪಿ.ಎಫ್. ಯೋಧರ ವಾಹನಗಳ ಮೇಲೆ ಆತ್ಮಾಹುತಿ ಉಗ್ರದಾಳಿಯಾಗಿ ತಿಂಗಳಾಗುತ್ತಾ ಬಂದಿದೆ. ಈ ನಡುವೆ ಜೈಶ್‌ ಉಗ್ರ ಅಝರ್‌ ಮಸೂದ್‌ ಮತ್ತು ಆತನ ಸಹಚರರನ್ನು ಕಂದಹಾರ್‌ ವಿಮಾನ ಅಪಹರಣ ಪ್ರಕರಣದಲ್ಲಿ ಬಿಡುಗಡೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿ.ಜೆ.ಪಿ. ಮತ್ತು ಕಾಂಗ್ರೆಸ್‌ ನಡುವೆ ಕೆಸರೆರಚಾಟ ಇನ್ನೂ ನಿಂತಿಲ್ಲ.

Advertisement

ಎ.ಐ.ಸಿ.ಸಿ. ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಇಂದು ಟ್ವೀಟ್‌ ಒಂದನ್ನು ಮಾಡಿ, ‘ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ 40 ಯೋಧರ ಕುಟುಂಬ ಸದಸ್ಯರಿಗೆ ಅವರ ಕೊಲೆಗಾರನನ್ನು ಅಂದು ಬಿಟ್ಟು ಕಳುಹಿಸಿದವರು ಯಾರೆಂದು ದಯವಿಟ್ಟು ಹೇಳಿ ಪ್ರಧಾನಿ ಮೋದಿಯವರೇ! ಮತ್ತು ಇಂದಿನ ನಿಮ್ಮ ಭದ್ರತಾ ಸಲಹೆಗಾರರೇ ಆವತ್ತಿನ ‘ಉಗ್ರ ಬಿಡುಗಡೆ’ ಪ್ರಕರಣದ ರೂವಾರಿ ಎಂಬುದನ್ನೂ ಆ 40 ಕುಟುಂಬದ ಸದಸ್ಯರಿಗೆ ನೀವು ಹೇಳಿ’ ಎಂದು ಬರೆದುಕೊಂಡಿದ್ದರು. ಮತ್ತು ತಮ್ಮ ಈ ಟ್ವೀಟ್‌ ನಲ್ಲಿ 1999ರಲ್ಲಿ ಉಗ್ರ ಮಸೂದ್‌ ಅಝರ್‌ ನನ್ನು ಕಂದಹಾರ್‌ ನಲ್ಲಿ ಬಿಟ್ಟುಬರುತ್ತಿರುವ ಅಜಿತ್‌ ಧೋವಲ್‌ ಅವರ ಫೊಟೋವನ್ನೂ ಹಾಕುವ ಮೂಲಕ ಮೋದಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನವನ್ನು ಮಾಡಿದ್ದರು.
 

ರಾಹುಲ್‌ ಗಾಂಧಿ ಅವರ ಈ ಟ್ವೀಟ್‌ ಗೆ ಸೂಕ್ತ ತಿರುಗೇಟನ್ನು ನೀಡಿರುವ ಭಾರತೀಯ ಜನತಾ ಪಕ್ಷವು, ‘ಅಂದು ಅಪಹರಣಗೊಂಡಿದ್ದ ವಿಮಾನ ಪ್ರಯಾಣಿಕರ ಸುರಕ್ಷಿತ ವಾಪಸಾತಿಗೆ ದೇಶಕ್ಕೆ ದೇಶವೇ ಪ್ರಾರ್ಥಿಸುತ್ತಿದ್ದ ಸಂದರ್ಭದಲ್ಲಿ ಬಹುಷಃ ನೀವು ವಿಡಿಯೋ ಗೇಮ್‌ ಆಡುತ್ತಾ ಬ್ಯುಸಿಯಾಗಿದ್ದಿರೆಂದು ಕಾಣಿಸುತ್ತದೆ. ಮಾತ್ರವಲ್ಲದೇ ವಿಮಾನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳನ್ನೂ ಅಂದು ಸರ್ವಪಕ್ಷಗಳ ಸಭೆಯಲ್ಲೇ ಕೈಗೊಳ್ಳಲಾಗಿತ್ತು ಎಂಬ ವಿಚಾರ ನಿಮಗೆ ಗೊತ್ತಿದೆಯೇ’ ಎಂದು ಪಕ್ಷ ತನ್ನ ಅಧಿಕೃತ ಟ್ವಿಟರ್‌ ಅಕೌಂಟ್‌ ನಲ್ಲಿ ಬರೆದುಕೊಂಡಿದೆ. ಇನ್ನೂ ಒಂದು ಹೆಜ್ಜೆ ಮುಂದುವರೆದು, ‘ಪಠಾಣ್‌ ಕೋಠ್ ದಾಳಿಯ ರೂವಾರಿ ಲತೀಫ್ ನನ್ನು ಯು.ಪಿ.ಎ. ಸರಕಾರವು ‘ಸದ್ಭಾವನಾ’ ಕ್ರಮವಾಗಿ ಬಿಡುಗಡೆ ಮಾಡಿದ್ದನ್ನು ಒಮ್ಮೆ ನೆನಪಿಸಿಕೊಳ್ಳಿ’ ಎಂದೂ ಸಹ ರಾಹುಲ್‌ ಗಾಂಧಿ ಅವರಿಗೆ ಕೇಸರಿ ಪಕ್ಷವು ಪ್ರತ್ಯುತ್ತರವನ್ನು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next