ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ಓಲೈಕೆ, ತುಷ್ಟೀಕರಣದ ರಾಜಕೀಯ ನಡೆಸುತ್ತಿದ್ದು, ಕಾನೂನು-ಸುವ್ಯವಸ್ಥೆ ಸಂಪೂರ್ಣ ಕುಸಿದುಹೋಗಿದೆ ಎಂದು ಮಾಜಿ ಡಿಸಿಎಂ ಡಾ| ಸಿ.ಎನ್. ಅಶ್ವತ್ಥನಾರಾಯಣ್ ಆರೋಪಿಸಿದರು.
ಬಿಜೆಪಿ ಚುನಾವಣ ಮಾಧ್ಯಮ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರದ ವಿರುದ್ಧ ಪೋಸ್ಟರ್ ಹಾಗೂ ಕ್ಯೂಆರ್ ಕೋಡ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಓಲೈಕೆ ಜತೆಗೆ ಭಯೋತ್ಪಾದಕರ ವಿಚಾರದಲ್ಲಿ ಈ ಸರ್ಕಾರ ಮೃದು ಧೋರಣೆ ತಾಳಿದೆ. ಕಾಂಗ್ರೆಸ್ ಡೇಂಜರ್ ಕ್ಯೂಆರ್ ಕೋಡ್ ಕೂಡ ಬಿಡುಗಡೆ ಮಾಡಿದ್ದು, ಕಾಂಗ್ರೆಸ್ ಸರಕಾರದ ಅಕ್ರಮಗಳ ಘಟನಾವಳಿಗಳನ್ನು ವೀಕ್ಷಿಸಬಹುದು ಎಂದರು.
ನೇಹಾ ಹಿರೇಮಠ ಹತ್ಯೆ ಹಿಂದೆ ಲವ್ ಜಿಹಾದ್ ಇದೆ. ಆದರೆ ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ನೀಡಿದ ಹೇಳಿಕೆ, ಗೃಹ ಇಲಾಖೆ, ಕಮಿಷನರ್ ನಡವಳಿಕೆಯು ನೇಹಾ ಪೋಷಕರಿಗೆ ನೋವನ್ನುಂಟು ಮಾಡಿದೆ. ಶಾಲಾ-ಕಾಲೇಜಿಗೆ ಹೋಗಲು ಹೆಣ್ಣುಮಕ್ಕಳು ಭಯಪಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಗೃಹ ಸಚಿವ ಡಾ| ಜಿ. ಪರಮೇಶ್ವರ್ ಅವರು ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣವನ್ನು ವೈಯಕ್ತಿಕ ಎಂದಿದ್ದರು. ಕೊನೆಗೆ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ಕುಕ್ಕರ್ ಬಾಂಬ್ ವಿಚಾರದಲ್ಲಿ ಭಯೋತ್ಪಾದಕರನ್ನು ಸೆರೆ ಹಿಡಿದಾಗ, ಅವರನ್ನು ಭಯೋತ್ಪಾದಕರೆಂದು ಕರೆಯದಂತೆ ಡಿ.ಕೆ. ಶಿವಕುಮಾರ್ ಹೇಳಿದ್ದರು. ಜೈಶ್ರೀರಾಮ್ ಎಂದವರ ಮೇಲೆ ಹಲ್ಲೆ , ಹನುಮಾನ ಚಾಲೀಸ ಹಾಕಿದವರ ಮೇಲೆ ಹಲ್ಲೆ , ಮೋದಿಯವರ ಕುರಿತ ಹಾಡು ಬರೆದವರ ಮೇಲೆ ಹಲ್ಲೆ ನಡೆದಿದೆ. ಇದೆಲ್ಲಕ್ಕೂ ಕಾಂಗ್ರೆಸ್ ಸರಕಾರವೇ ಕಾರಣ ಎಂದು ಆರೋಪಿಸಿದರು.
ಡಿ.ಕೆ. ಸುರೇಶ್ ಹತಾಶ
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ.ಸೋದರರು ಗ್ಯಾರಂಟಿ ಕಾರ್ಡ್ ಚಲಾವಣೆಗೆ ತಂದಿ ದ್ದಾರೆ. ಈ ಹಿಂದೆ ಕೊಟ್ಟ ಕಾರ್ಡಿಗೆ ಹಣ ಹಾಕಿಲ್ಲ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಗೋಡೆಗಳ ಮೇಲೆ ಡಾ| ಮಂಜುನಾಥ್ ಗೆದ್ದಿದ್ದಾರೆ’ ಎಂದು ಸಾರ್ವಜನಿಕರು ಬರೆಯುತ್ತಿದ್ದಾರೆ. ಇದರಿಂದ ಡಿ.ಕೆ. ಸುರೇಶ್ ಹತಾಶರಾಗಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ನಂಬಿ ಮೋಸ ಹೋಗದೆ, ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.