ಶಹಾಬಾದ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಾಜಿ ಸಚಿವ ರೇವುನಾಯಕ ಬೆಳಮಗಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು. ನಂತರ ಮಾತನಾಡಿದ ರೇವುನಾಯಕ ಬೆಳಮಗಿ, ನಗರದ ಬಹುತೇಕ ವಾರ್ಡ್‌ಗಳಲ್ಲಿ ಕಸ ತುಂಬಿ ತುಳುಕುತ್ತಿದೆ. ಇದರಿಂದ ಅನೇಕ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ.
ಈ ಬಗ್ಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನಗರಸಭೆ ಅಧಿಧಿಕಾರಿಗಳ ನಿರ್ಲಕ್ಷತನದಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಗೆ ಒಳಗಾಗುತ್ತಿದ್ದಾರೆ. ಅಲ್ಲದೇ ನಗರಸಭೆಗೆ ಬಂದ ಯೋಜನೆ ಹಾಗೂ ಅನುದಾನದ ಬಗ್ಗೆ ಯಾವುದೇ ಮಾಹಿತಿಯೂ ನೀಡುತ್ತಿಲ್ಲ.
ನಗರಸಭೆ ಆಡಳಿತ ಹದಗೆಟ್ಟಿರುವುದಕ್ಕೆ ಸಾಕ್ಷಿ ಮತ್ತೂಂದಿಲ್ಲ. ಹಲವಾರು ಸಮಸ್ಯೆಗಳಿದ್ದರೂ ನಗರಸಭೆ ಅಧ್ಯಕ್ಷೆ, ಪೌರಾಯುಕ್ತೆ ಹಾಗೂ ಎಇಇ ಕಣ್ಣು ಮುಚ್ಚಿ ಕುಳಿತ್ತಿದ್ದಾರೆ. ಅಲ್ಲದೇ ನಗರಸಭೆಯಿಂದ ನೂತನವಾಗಿ ನಿರ್ಮಾಣ ಮಾಡಿದ ಮಳಿಗೆಗಳಲ್ಲಿ ಶೌಚಾಲಯ ಹಾಗೂ ಮೂತ್ರಾಲಯ ನಿರ್ಮಾಣ ಮಾಡಬೇಕು.
ನಂತರ ಸಾರ್ವಜನಿಕರ ಸಮ್ಮುಖದಲ್ಲಿ ಹರಾಜು ಮಾಡಬೇಕು. ನಗರದಲ್ಲಿ ನೈರ್ಮಲ್ಯ ವ್ಯವಸ್ಥೆ ತುಂಬಾ ಹದಗೆಟ್ಟು ಹೋಗಿದೆ. ಕೂಡಲೇ ಎಲ್ಲ ಸಮಸ್ಯೆಗಳನ್ನು ಒಂದು ವಾರದಲ್ಲಿ ಬಗೆಹರಿಸದಿದಲ್ಲಿ ಮುಂದೆ ಉಗ್ರವಾದ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ನಂತರ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಬಿಜೆಪಿ ಅಧ್ಯಕ್ಷ ಸುಭಾಷ ಜಾಪೂರ, ಉಪಾಧ್ಯಕ್ಷ ಅನೀಲ ಬೋರಗಾಂವಕರ್, ಅರುಣ ಪಟ್ಟಣಕರ್, ಚಂದ್ರಕಾಂತ ದಸ್ತಾಪುರ, ಬಸವರಾಜ ಮದ್ರಿಕಿ, ಬಸವರಾಜ ಬಿರಾದಾರ, ಪ್ರಕಾಶ ಮೇಲಗಿರಿ, ಸಾಯಿಬಣ್ಣ ಬೆಳಗುಂಪಿ, ಶಂಕರ ಕುಂಬಾರ,ಅಣ್ಣಪ್ಪ ದಸ್ತಾಪುರ, ಸಂಜು ಕೋರೆ, ರಾಜು ದಂಡಗುಲಕರ್ ಇದ್ದರು.