Advertisement

ದಂಗೆ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

01:15 PM Sep 22, 2018 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರ “ದಂಗೆ’ ಹೇಳಿಕೆ ಖಂಡಿಸಿ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ, ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದೆ.

Advertisement

ನಗರದ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಕಾಂಗ್ರೆಸ್‌, ಜೆಡಿಎಸ್‌ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜತೆಗೆ ಕುಮಾರಸ್ವಾಮಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಮಾತನಾಡಿ, ರಾಜ್ಯದ ಮುಖ್ಯಮಂತ್ರಿಯೊಬ್ಬರು ದಂಗೆ ಏಳುವಂತೆ ಜನತೆಗೆ ಕರೆ ನೀಡಿದ್ದನ್ನು ಹಿಂದೆಂದೂ ಕಂಡಿಲ್ಲ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುತ್ತೇನೆ ಎಂಬುದಾಗಿ ಪ್ರಮಾಣ ವಚನ ಸ್ವೀಕರಿಸಿದ ಕುಮಾರಸ್ವಾಮಿ ಅವರು, ಇದೀಗ ಗೂಂಡಾಗಿರಿಗೆ ಪ್ರಚೋದನೆ ನೀಡುತ್ತಿದ್ದಾರೆ.

ಒಬ್ಬ ಮುಖ್ಯಮಂತ್ರಿಯಾಗಿ ಈ ರೀತಿ ಮಾತನಾಡುವುದು ಸರಿಯಲ್ಲ. ಸರ್ಕಾರಕ್ಕೆ ದಿಕ್ಕು ದಿಸೆಯೇ ಇಲ್ಲದಂತಾಗಿದೆ. ಸಚಿವರು, ಶಾಸಕರ ಮೇಲೆ ನಿಯಂತ್ರಣವೇ ಇಲ್ಲದಂತಾಗಿದೆ ಎಂದು ಹೇಳಿದರು.

ಪಾಪದ ಕೊಡ ತುಂಬಿದೆ: ಈ ಸರ್ಕಾರವನ್ನು ತೊಲಗಿಸಲು ಪಣ ತೊಟ್ಟು ಕೆಲಸ ಮಾಡುತ್ತಿದ್ದೇವೆ. ಹಾಗೆಂದು ಸರ್ಕಾರವನ್ನು ಉರುಳಿಸುವ ಕೆಲಸ ಮಾಡುತ್ತಿಲ್ಲ. ಸರ್ಕಾರ ರಚನೆಯಾದ 100 ದಿನದಲ್ಲಿ 100 ತಪ್ಪುಗಳನ್ನು ಮಾಡಿದೆ.

Advertisement

ಕಾಂಗ್ರೆಸ್‌ ಶಾಸಕರು ಸಹ ಸರ್ಕಾರ ತೊಲಗಲಿ ಎನ್ನುತ್ತಿದ್ದಾರೆ. ಜನ ಕೂಡ ಈ ಸರ್ಕಾರ ಹೋಗಲಿ ಎಂದು ಬಯಸುತ್ತಿದ್ದಾರೆ. ಸರ್ಕಾರದ ಪಾಪದ ಕೊಡ ತುಂಬಿದೆ. ಈ ಸರ್ಕಾರ ಎಷ್ಟು ದಿನ ಇರುವುದೋ ಗೊತ್ತಿಲ್ಲ. ಹಾಗಾಗಿ ಕುಮಾರಸ್ವಾಮಿ, ದಂಗೆ ಏಳುವಂತೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಕೇವಲ 37 ಶಾಸಕರಿದ್ದರೂ ಮುಖ್ಯಮಂತ್ರಿಯಾಗಿಕುಮಾರಸ್ವಾಮಿ ಮೈತ್ರಿ ಸರ್ಕಾರ ರಚಿಸಿದಾಗ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಯಡಿಯೂರಪ್ಪ ಅವರು ಸಲಹೆ ನೀಡುತ್ತಿದ್ದರು. ಆದರೆ ಈಗ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ.

ಇಂದು ಅಪವಿತ್ರ ಮೈತ್ರಿ ಬಗ್ಗೆ ಜನರೇ ಮಾತಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ ಶಾಸಕರಿಗೂ ಈ ಸರ್ಕಾರ ಬೇಡವಾಗಿದೆ. ಕಾಂಗ್ರೆಸ್‌ ಶಾಸಕ ಎಂ.ಟಿ.ಬಿ.ನಾಗರಾಜ್‌ ಈ ಮೈತ್ರಿ ಸರ್ಕಾರದಲ್ಲಿ ವಿಶ್ವಾಸವಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ ಎಂದು ಹೇಳಿದರು.

ಮಾಜಿ ಸಚಿವ ಬಿ.ಸೋಮಶೇಖರ್‌ ಮಾತನಾಡಿ, ಜನ ದಂಗೆ ಏಳುವಂತೆ ಪ್ರಚೋದನೆ ನೀಡುತ್ತಿರುವ ಎಚ್‌.ಡಿ.ಕುಮಾರಸ್ವಾಮಿ ಅವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಮತ್ತು ಕುಟುಂದವರು ಹೊಂದಾಣಿಕೆ ಮತ್ತು ಜಾತಿ ರಾಜಕಾರಣ ನಡೆಸುತ್ತಾ ತಮ್ಮ ಅಕ್ರಮಗಳನ್ನು ಮುಚ್ಚಿಕೊಳ್ಳುತ್ತಾ ಬಂದಿದ್ದಾರೆ. ಇದು ಅವರ ಕೊನೆಯ ಆಟ ಎಂದು ಹೇಳಿದರು.

ಮಾಜಿ ಶಾಸಕ ಎಸ್‌.ಮುನಿರಾಜು, ಬಿಜೆಪಿ ನಗರ ಘಟಕದ ಅಧ್ಯಕ್ಷ ಪಿ.ಎನ್‌.ಸದಾಶಿವ, ಬಿಬಿಎಂಪಿ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ, ಮಾಜಿ ಮೇಯರ್‌ ಎಸ್‌.ಕೆ.ನಟರಾಜ್‌, ಪಾಲಿಕೆಯ ಹಲವು ಸದಸ್ಯರು ಉಪಸ್ಥಿತರಿದ್ದರು.

ಎಚ್‌ಡಿಕೆಗೆ ರವಿಕುಮಾರ್‌ ಪ್ರಶ್ನೆ: ಎಚ್‌.ಡಿ.ಕುಮಾರಸ್ವಾಮಿಯವರಿಗೆ ಸರ್ಕಾರ ಅಧಿಕೃತ ನಿವಾಸ, ಕಚೇರಿ ನೀಡಿದ್ದರೂ ತಾಜ್‌ ವೆಸ್ಟ್‌ಎಂಡ್‌ ಹೋಟೆಲ್‌ನಲ್ಲಿ ಒಂದು ವರ್ಷದ ಅವಧಿಗೆ 3 ಕೋಟಿ ರೂ. ವೆಚ್ಚದಲ್ಲಿ ರೂಮ್‌ ಕಾಯ್ದಿರಿಸಿದ್ದಾರೆ. ಜನ ನಿಮ್ಮನ್ನು ಸಂಪರ್ಕಿಸಲು ಹೋಟೆಲ್‌ಗೆ ಬರಬೇಕೇ? ಹೋಟೆಲ್‌ನಲ್ಲಿ ನೀವು ಬಿಜಿನೆಸ್‌ ಮಾಡುತ್ತೀರಾ?

ಪುಣ್ಯಭೂಮಿಯಾಗಿದ್ದ ಹಾಸನವನ್ನು ಪಾಪದ ಭೂಮಿಯನ್ನಾಗಿ ಮಾಡಿದ್ದೀರಿ. ಜನ ನಿಮ್ಮ ಬಾಡಿಗೆ ಆಳುಗಳೇ?

ಎಚ್‌.ಡಿ.ದೇವೇಗೌಡರು, ಎಚ್‌.ಡಿ.ಕುಮಾರಸ್ವಾಮಿ, ಎಚ್‌.ಡಿ.ರೇವಣ್ಣ ಇಂದು ಸಾವಿರಾರು ಕೋಟಿ ರೂ. ಆಸ್ತಿ ಗಳಿಸಿದ್ದಾರೆ. ಆ ಬಗ್ಗೆ ಪಾರದರ್ಶಕ ತನಿಖೆಗೆ ಆದೇಶಿಸುವಿರಾ?

ರಾಜ್ಯದ ಜತೆಗೆ ದಂಗೆ ಏಳುವಂತೆ ಕರೆ ನೀಡಿರುವ ನಿಮಗೆ ನೈತಿಕತೆ ಇದೆಯೇ?

Advertisement

Udayavani is now on Telegram. Click here to join our channel and stay updated with the latest news.

Next