ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂಗು ಹಿಡಿದಾದರೂ ರೈತರ ಸಾಲ ಮನ್ನಾ ಮಾಡಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗುಡುಗಿದ್ದಾರೆ.
ಗುರುವಾರ ಕಲಬುರಗಿಯಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ಅವರು ಹಠವಾದಿತನ ತೋರುತ್ತಿದ್ದು, ರಾಜ್ಯಕ್ಕೆ ಯಾವುದು ಬೇಡವೋ ಅದನ್ನೇ ಮಾಡುತ್ತಾರೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಅವರಿಗೆ ಯಡಿಯೂರಪ್ಪ ಬಗ್ಗೆ ಮಾತನಾಡದಿದ್ರೆ ನಿದ್ರೆಯೇ ಬರುವುದಿಲ್ಲ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಡಿಸೆಂಬರ್ನಲ್ಲೇ ವಿಧಾನಸಭಾ ಚುನಾವಣೆ ನಡೆದರೆ ಅಚ್ಚರಿಯಿಲ್ಲ. ಅವಧಿಗೆ ಮುನ್ನ ಚುನಾವಣೆ ನಡೆಸಲು ಕಾಂಗ್ರೆಸ್ ತಯಾರಿ ಮಾಡುತ್ತಿದ್ದು, ಕಾಂಗ್ರೆಸ್ನ ಆಂತರಿಕ ವಿಚಾರಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.
ಆನೇಕಲ್ನಲ್ಲಿ ಕಳೆದ 6 ತಿಂಗಳ ಒಳಗೆ ರಾಜಕೀಯ ವೈಷಮ್ಯ ಹಿನ್ನಲೆ 3 ಕೊಲೆ ಆಗಿವೆ. ನಿನ್ನೆಯೂ ಬಿಜೆಪಿ ಕಾರ್ಯಕರ್ತನ ಹತ್ಯೆಯಾಗಿದ್ದು, ತನಿಖೆ ವಿಳಂಬ ಮಾಡಿ ಕೇಸ್ ಮುಚ್ಚಿ ಹಾಕಲು ಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದರು.