Advertisement

ಲೋಕಸಭೆ ಚುನಾವಣೆಗೆ ಎನ್‌ಆರ್‌ಸಿಯೇ ಅಸ್ತ್ರ: ಶಾ

06:00 AM Aug 12, 2018 | Team Udayavani |

ಕೋಲ್ಕತಾ: ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯಾದ ಪಶ್ಚಿಮ ಬಂಗಾಲದಿಂದಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಲೋಕಸಭೆ ಚುನಾವಣೆಯ ರಣಕಹಳೆ ಊದಿದ್ದಾರೆ. ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮತ್ತು ಬಾಂಗ್ಲಾದೇಶೀಯರ ಅಕ್ರಮ ಒಳ ನುಸುಳುವಿಕೆಯನ್ನೇ ಟಿಎಂಸಿ ವಿರುದ್ಧದ ಚುನಾ ವಣಾ ಅಸ್ತ್ರವನ್ನಾಗಿ ಬಳಸಲು ಬಿಜೆಪಿ ಚಾಣಕ್ಯ ಅಮಿತ್‌ ಶಾ ನಿರ್ಧರಿಸಿದ್ದಾರೆ.

Advertisement

ಶನಿವಾರ ಕೋಲ್ಕತಾದಲ್ಲಿ ನಡೆಸಿದ ಬೃಹತ್‌ ರ್ಯಾಲಿಯಲ್ಲಿ ಶಾ ಈ ಕುರಿತು ಘೋಷಿಸಿದ್ದು, ಎನ್‌ಆರ್‌ಸಿ ಮತ್ತು ಅಕ್ರಮ ಒಳನುಸುಳುವಿಕೆ ವಿಚಾರವನ್ನು ಮುಂದಿಟ್ಟುಕೊಂಡೇ ಪ. ಬಂಗಾಲದಲ್ಲಿ ನಾವು ಲೋಕಸಭೆ ಚುನಾವಣೆ  ಎದುರಿಸು ತ್ತೇವೆ ಎಂದಿದ್ದಾರೆ. ಪ. ಬಂಗಾಲದಲ್ಲಿ ದೊಡ್ಡ ಸಮಸ್ಯೆಯಾಗಿರುವ ಬಾಂಗ್ಲಾದೇಶಿ ಅಕ್ರಮ ವಲಸಿಗರ ಪರ ನಿಂತಿರುವ ಮುಖ್ಯಮಂತ್ರಿ ಮಮತಾ ಅವರನ್ನು ಅಮಿತ್‌ ಶಾ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅಕ್ರಮ ವಲಸಿಗರು ದೇಶಕ್ಕೆ ಮಾರಕ ಎಂಬ ಸತ್ಯ ಗೊತ್ತಿದ್ದರೂ ಮಮತಾ ಹಾಗೂ ರಾಹುಲ್‌ ಗಾಂಧಿ ಅವರ ಪರ ನಿಂತಿದ್ದಾರೆ. ಈ ವಲಸಿಗರ ಜತೆಗೆ ರೋಹಿಂಗ್ಯಾ ಮುಸ್ಲಿಮರಿಗೂ ಮಣೆ ಹಾಕಲಾಗುತ್ತಿದೆ. ಈ ಮೂಲಕ ಈ ಇಬ್ಬರೂ ವೋಟ್‌ ಬ್ಯಾಂಕ್‌ ರಾಜ ಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಅಭಿವೃದ್ಧಿ ಮಂತ್ರ
ಅಕ್ರಮ ವಲಸಿಗರಿಂದಾಗಿ ಪ. ಬಂಗಾಲದ ಮೂಲ ಹಿಂದೂಗಳು, ಮುಸ್ಲಿಮರು ನಿರುದ್ಯೋಗಿ ಗಳಾಗಿದ್ದು, ಅಕ್ರಮ ವಲಸಿಗರನ್ನು ಹೊರಹಾಕದೆ ಹೋದರೆ ರಾಜ್ಯ ಪ್ರಗತಿ ಸಾಧಿಸುವುದು ಹೇಗೆ ಎಂದು ಪ್ರಶ್ನಿಸಿದ ಶಾ, ಬಿಜೆಪಿಗೆ ರಾಷ್ಟ್ರೀಯ ಸುರಕ್ಷತೆಯೇ ಮೊದಲು, ರಾಜಕೀಯ ಅನಂತರದ ವಿಚಾರ ಎಂದು ಸ್ಪಷ್ಟಪಡಿಸಿದರು.

ಕಾರ್ಯಕರ್ತರೇ ವಾಹಿನಿಗಳು
ತನ್ನ ಮಾತುಗಳು ಜನರಿಗೆ ತಲುಪದಿರಲಿ ಎಂಬ ಕಾರಣಕ್ಕೆ ರ್ಯಾಲಿಯ ನೇರ ಪ್ರಸಾರ ನೀಡುತ್ತಿದ್ದ ಟಿವಿ ವಾಹಿನಿಗಳನ್ನು ಬ್ಲಾಕ್‌ಔಟ್‌ ಮಾಡಲಾಗಿತ್ತೆಂದು ಶಾ ಆರೋಪಿಸಿದರು. ನನ್ನ ಪ್ರತಿ ಮಾತನ್ನು ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತಲುಪಿಸುತ್ತಾರೆ ಎಂದು ಕುಟುಕಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತಾರೂಢ ಟಿಎಂಸಿ, ವಾಹಿನಿ ಬ್ಲಾಕ್‌ಔಟ್‌ ಬಿಜೆಪಿ ಸಂಸ್ಕೃತಿ. ತಾನು ಅಂಥ ಕೆಲಸ ಮಾಡಿಲ್ಲ ಎಂದಿದೆ. 

ಕಾಂಗ್ರೆಸ್‌ ಉತ್ತರ
ಶಾ ಆರೋಪಗಳಿಗೆ ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ ಪ್ರತಿಕ್ರಿಯಿಸಿ, ಕಾಂಗ್ರೆಸ್‌ ಎನ್‌ಆರ್‌ಸಿ ಯನ್ನು ವಿರೋಧಿಸಿಲ್ಲ. ಆದರೆ ಅದರ  ಜಾರಿ ರೀತಿಯ ಬಗ್ಗೆ ಆಕ್ಷೇಪಿಸಿದೆ. ಎನ್‌ಆರ್‌ಸಿ ವಿಚಾರ ದಲ್ಲಿ ರಾಜಕೀಯ ಅಪಾಯಕಾರಿ ಎಂದಿದ್ದಾರೆ. 

Advertisement

ಯಾವುದು ಬೇಕೆಂದು ತೀರ್ಮಾನಿಸಲಿ 
2005ರಲ್ಲಿ ಅಕ್ರಮ ವಲಸಿಗರು ಎಡಪಕ್ಷಗಳ ವೋಟ್‌ ಬ್ಯಾಂಕ್‌ ಆಗಿದ್ದರು. ಆಗ ಸಂಸದೆಯಾಗಿದ್ದ ಮಮತಾ ಬ್ಯಾನರ್ಜಿ, ಇವರ ವಿರುದ್ಧ ದನಿಯೆತ್ತಿದ್ದರು. ಈಗ ಅದೇ ವಲಸಿಗರು ಮಮತಾ ಅವರ ವೋಟ್‌ ಬ್ಯಾಂಕ್‌ ಆಗಿದ್ದಾರೆ. ಹಾಗಾಗಿ ಮಮತಾ ಈಗ ಅವರ ಪರ. ರಾಷ್ಟ್ರೀಯ ನಾಗರಿಕರ ನೋಂದಣಿ ವಿರುದ್ಧವೂ ಮಾತನಾಡುತ್ತಿದ್ದಾರೆ. ಮಮತಾಗೆ ದೇಶದ ಸುರಕ್ಷೆ ಬೇಕೋ ವೋಟ್‌ ಬ್ಯಾಂಕ್‌ ಬೇಕೋ ಎಂಬುದನ್ನು ಅವರೇ ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದ್ದಾರೆ ಶಾ.

Advertisement

Udayavani is now on Telegram. Click here to join our channel and stay updated with the latest news.

Next