Advertisement
ರಾಜ್ಯದ ಈಗಿನ ಪರಿಸ್ಥಿತಿಯಲ್ಲಿ ಬಿಜೆಪಿ ಮೂರಂಕಿ ಮುಟ್ಟುವುದು ಕಷ್ಟ ಎಂಬ ಮಾಹಿತಿ ಪಕ್ಷದ ವರಿಷ್ಠರಿಗೆ ಲಭ್ಯವಾಗಿದ್ದು, 150 ಸ್ಥಾನಗಳ ಗುರಿ ಮುಟ್ಟಲು ಉತ್ತರ ಪ್ರದೇಶ ಮಾದರಿ ಅನುಸರಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
Related Articles
Advertisement
ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ಇವುಗಳನ್ನು ಅರ್ಹರಿಗೆ ಸುಲಭವಾಗಿ ತಲುಪಿಸಲಾಗಿದೆ. ಇದಕ್ಕಾಗಿ ಯಾರಿಗೂ ಲಂಚ ನೀಡಿಲ್ಲ ಹಾಗೂ ಫಲಾನುಭವಿಗಳು ಸರಕಾರಿ ಕಚೇರಿಗಳಿಗೆ ಅಲೆದಿಲ್ಲ. ಯೋಜನೆಗಳು ನೇರವಾಗಿ ಫಲಾನುಭವಿಗಳ ಮನೆಗೇ ತಲುಪಿದೆ. ಈ ಯೋಜನೆಗಳ ಫಲಾನುಭವಿಗಳು ಪ್ರತಿಯೊಂದು ಮನೆಯಲ್ಲೂ ಇದ್ದಾರೆ ಎನ್ನುವುದು ಬಿಜೆಪಿ ಲೆಕ್ಕಾಚಾರ.
ಪ್ರಮುಖವಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಹಣವು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗುತ್ತಿದೆ. ಉಜ್ವಲ ಯೋಜನೆ ಮೂಲಕ ಉಚಿತ ಅಡುಗೆ ಅನಿಲ ವಿತರಣೆ, ಕೊರೊನಾ ಸಂದರ್ಭದಲ್ಲಿ ಉಚಿತ ಆಹಾರ ಪದಾರ್ಥ ವಿತರಣೆ, ವೃದ್ಧಾಪ್ಯ, ವಿಧವಾ ವೇತನ ಹೆಚ್ಚಳ, ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ, ವಿವಿಧ ಯೋಜನೆಗಳಡಿಯಲ್ಲಿ ಮನೆ ನಿರ್ಮಾಣ ಮುಂತಾದ ಯೋಜನೆಗಳ ಫಲಾನುಭವಿಗಳನ್ನು ನೇರವಾಗಿ ಭೇಟಿ ಮಾಡುವ ಕಾರ್ಯ ಆರಂಭವಾಗಿದೆ.
ಸರಕಾರದ ಯೋಜನೆಗಳು ಎಷ್ಟು ಜನರಿಗೆ ತಲುಪಿವೆ? ಅರ್ಹ ಫಲಾನುಭವಿಗಳಿದ್ದರೂ, ಯೋಜನೆಗಳು ತಲುಪುವಲ್ಲಿ ಆಗಿರುವ ಲೋಪಗಳೇನು ಎನ್ನುವುದನ್ನು ತಿಳಿದುಕೊಳ್ಳಲು ಬಿಜೆಪಿಯ ಪ್ರತಿ ಬೂತ್ ಮಟ್ಟದಲ್ಲಿರುವ ಪಕ್ಷದ ಪೇಜ್ ಪ್ರಮುಖರು ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ. ಒಂದು ಪೇಜ್‌ಗೆ ಆರು ಪ್ರಮುಖರು ಫಲಾನುಭವಿಗಳಿಗೆ ತಲುಪಿರುವ ಯೋಜನೆಗಳ ಮಾಹಿತಿ ಪಡೆಯುವುದರ ಜತೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಕೊಡುಗೆಗಳನ್ನು ಮನವರಿಕೆ ಮಾಡಿಕೊಡುವ ಕೆಲಸ ಆರಂಭಿಸಿದ್ದಾರೆ. ಜತೆಗೆ ಅವರ ಬೇಡಿಕೆಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಶೇ. 25ರಷ್ಟು ಪೇಜ್ ಪ್ರಮುಖರು ಫಲಾನುಭವಿಗಳ ಮನೆಗಳನ್ನು ತಲುಪಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಕೇಂದ್ರ ಹಾಗೂ ರಾಜ್ಯ ಡಬಲ್ ಎಂಜಿನ್ ಸರಕಾರದ ಪ್ರಯೋಜನ ಪಡೆದಿರುವವರು ದೊಡ್ಡ ಪ್ರಮಾಣದಲ್ಲಿದ್ದಾರೆ. ಅವರೆಲ್ಲ ಸೈಲೆಂಟ್ ಓಟರ್ಸ್. ಅವರು ಯಾವುದೇ ಸಮೀಕ್ಷೆಗಳ ವ್ಯಾಪ್ತಿಗೆ ಬರುವುದಿಲ್ಲ. ಅವರನ್ನು ಹುಡುಕಿ ಅವರಿಗೆ ಬೇರೆ ಏನು ಬೇಕು ಎನ್ನುವುದನ್ನು ಕೇಳಿ ಒದಗಿಸುವ ಕೆಲಸ ಮಾಡಲಾಗುತ್ತಿದೆ. -ಎಂ.ಜಿ. ಮಹೇಶ್, ಬಿಜೆಪಿ ಮುಖ್ಯ ವಕ್ತಾರ