Advertisement

ಪರಿವರ್ತನಾ ಯಾತ್ರೆ ಸಮಾರೋಪಕ್ಕೆ ಬಿಜೆಪಿ ಸಿದ್ಧತೆ

09:21 AM Jan 24, 2018 | Team Udayavani |

ಬೆಂಗಳೂರು: ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಫೆ. 4ರಂದು ಕನ್ನಡಪರ ಸಂಘಟನೆಗಳು ಬೆಂಗಳೂರು ಬಂದ್‌ ಕರೆ
ನೀಡಿರುವ ಮಧ್ಯೆಯೂ ಅಂದು ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ನಗರದ ಅರಮನೆ ಮೈದಾನದಲ್ಲಿ ನಡೆಯಲಿರುವ ಪರಿವರ್ತನಾ ರ್ಯಾಲಿಯನ್ನು ಯಶಸ್ವಿಗೊಳಿಸಲು ಬಿಜೆಪಿ ಭಾರಿ ಸಿದ್ಧತೆ ಮಾಡಿಕೊಳ್ಳುತ್ತಿದೆ.

Advertisement

ಯಾತ್ರೆಯ ಸಮಾರೋಪ ಸಮಾರಂಭವನ್ನು ಮುಂಬರುವ ವಿಧಾನಸಭಾ ಚುನಾವಣಾ ಪ್ರಚಾರ ಕಾರ್ಯದ ಉದ್ಘಾಟನೆ ಕಾರ್ಯಕ್ರಮ ಎಂದೂ ಘೋಷಿಸಿರುವ ಬಿಜೆಪಿ, ಅದಕ್ಕಾಗಿ ಪೂರಕ ಸಿದ್ಧತೆ ತೀವ್ರಗೊಳಿಸುತ್ತಿದೆ. ಈ ಕಾರ್ಯಕ್ರಮಕ್ಕೆ ಕನಿಷ್ಠ 2 ಲಕ್ಷ ಜನರನ್ನು ಸೇರಿಸಿ ರಾಜ್ಯ ಸರ್ಕಾರದ ವಿರುದ್ಧ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಸಿದ್ಧತಾ ಕಾರ್ಯಕ್ರಮಗಳ ಕುರಿತು ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಜಂಟಿ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌, ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌, ಮುಖಂಡರಾದ ಅರವಿಂದ ಲಿಂಬಾವಳಿ, ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಸುಬ್ಬನರಸಿಂಹ, ನಾರಾಯಣ ಸ್ವಾಮಿ, ಕಟ್ಟಾ ಸುಬ್ರಹ್ಮಣ್ಯನಾಯ್ಡು ಮತ್ತಿತರರು ಸಭೆ ನಡೆಸಿದ್ದಾರೆ.

ಇದೇ ವೇಳೆ ಸಿದ್ಧತಾ ಕಾರ್ಯದಲ್ಲಿ ತೊಡಗಿರುವ ಕಾರ್ಯಕರ್ತರನ್ನು ಹುರಿದುಂಬಿಸಿದ ಮುಖಂಡರು, ಮುಂದೆ ಎದುರಾಗಬಹುದಾದ ಸವಾಲುಗಳ ಬಗ್ಗೆ ಎಚ್ಚರಿಸಿದರು. ಅಲ್ಲದೆ, ಇದು ಪ್ರಧಾನಿ ಪಾಲ್ಗೊಳ್ಳುವ ಕಾರ್ಯಕ್ರಮ ವಾಗಿದ್ದು, ಸ್ವಲ್ಪವೂ ಲೋಪವಾಗದಂತೆ ನೋಡಿಕೊಳ್ಳೋಣ. ಆ ನಿಟ್ಟಿನಲ್ಲಿ ಎಲ್ಲರೂ ತಮ್ಮ ಜವಾಬ್ದಾರಿ ನಿರ್ವಹಿಸಬೇಕು ಎಂದು ಸೂಚಿಸಿದರು. ಸಭೆಯಲ್ಲಿ ಮಾತನಾಡಿದ ಆರ್‌.ಅಶೋಕ್‌, ಸಿಎಂ ಸಿದ್ದರಾಮಯ್ಯ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನಮ್ಮ ಕಾರ್ಯಕ್ರಮ ಯಶಸ್ವಿಯಾಗದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಪರಿವರ್ತನಾ ರ್ಯಾಲಿ ಉದ್ಘಾಟನೆ ವೇಳೆ ನಮ್ಮ ಅರಿವಿಗೆ ಬರದಂತೆ ಷಡ್ಯಂತ್ರ ನಡೆಸಿ ಜನ ಸೇರದಂತೆ ಮಾಡಿದರು. ಅದಕ್ಕೆ ಅವಕಾಶವಾಗದಂತೆ ಈ ಬಾರಿ ಎಚ್ಚರಿಕೆಯಿಂದ ಇರಬೇಕು ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು. 

ಕಾರ್ಯಕರ್ತರಿಗೆ ಸೂಚನೆ
ಫೆ. 4ರ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪಕ್ಷದ ಕಾರ್ಯಕರ್ತರಿಗೆ ಹಲವು ಸೂಚನೆಗಳನ್ನು ನೀಡಲಾಗಿದೆ. ವಿವಿಧ ಜಿಲ್ಲೆಗಳಿಂದ ಕಾರ್ಯಕರ್ತರು ಅಂದು ಬೆಳಗ್ಗೆಯೇ ಬೆಂಗಳೂರು ತಲುಪುವಂತೆ ನೋಡಿಕೊಳ್ಳಬೇಕು. ಬೆಂಗಳೂರಿನಿಂದಲೇ 4 ಸಾವಿರ ಬಸ್‌ ವ್ಯವಸ್ಥೆ
ಮಾಡಲಾಗುತ್ತಿದ್ದು, ಇಲ್ಲಿಂದ ಹೊರಡುವ ಗುಂಪುಗಳಿಗೆ ಸಂಚಾರ ಅಡಚಣೆಯಾಗದಂತೆ ಮಾಹಿತಿ ನೀಡಲು ಪ್ರತ್ಯೇಕ ಕಾರ್ಯಕರ್ತರನ್ನು ನೇಮಕ ಮಾಡಬೇಕು ಎಂದು ಸೂಚಿಸಲಾಗಿದೆ. ಅಲ್ಲದೆ, ಕಾರ್ಯಕ್ರಮದ ಕುರಿತು ಪ್ರತಿ ವಾರ್ಡ್‌ನಲ್ಲಿ ಜನಜಾಗೃತಿಗಾಗಿ ವಿವಿಧ ರೀತಿಯ ಅಭಿಯಾನ ಹಮ್ಮಿಕೊಳ್ಳಬೇಕು. ಸಭೆಗೆ ಬರುವ ಪದಾಧಿಕಾರಿಗಳು, ಕಾರ್ಪೋರೇಟರ್‌ಗಳು
ಜನರೊಂದಿಗೆ ಕುಳಿತುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದೂ ತಿಳಿಸಲಾಗಿದ್ದು, ಕಾರ್ಯಕ್ರಮಕ್ಕೆ ಬರುವವರಿಗೆ ತ್ರಿಪುರ ವಾಸಿನಿಯ 2 ಹಾಲ್‌ನಲ್ಲಿ ಊಟದ ವ್ಯವಸ್ಥೆ ಮಾಡುವಂತೆ ತಿಳಿಸಲಾಗಿದೆ.

ಉಸ್ತುವಾರಿ ಸಂತೋಷ್‌ಗೆ
ಪ್ರಧಾನಿ ಮೋದಿ ನೇತೃತ್ವದಲ್ಲಿ ಫೆ. 4ರಂದು ಬೆಂಗಳೂರಿನಲ್ಲಿ ನಡೆಯಲಿರುವ ರ್ಯಾಲಿಯ ಸಮಾರೋಪ ಸಮಾರಂಭ ಮತ್ತು ವಿಧಾನಸಭೆ ಚುನಾವಣೆ ಪ್ರಚಾರ ಕಾರ್ಯದ ಉದ್ಘಾಟನಾ ಸಮಾರಂಭದ ಸಂಪೂರ್ಣ ಜವಾಬ್ದಾರಿಯನ್ನು ಪಕ್ಷದ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರಿಗೆ ವಹಿಸಲಾಗಿದೆ. ಇತ್ತೀಚೆಗೆ ಕೇರಳದಲ್ಲಿ ಬಿಜೆಪಿ ರ್ಯಾಲಿಗಳನ್ನು 
ಯಶಸ್ವಿಗೊಳಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಂದ ಮೆಚ್ಚುಗೆ ಗಳಿಸಿದ್ದ ಸಂತೋಷ್‌, ಇದೀಗ ರಾಜ್ಯದಲ್ಲೂ ತಮ್ಮ
ಸಾಮರ್ಥ್ಯ ಪ್ರದರ್ಶಿಸಲು ಈ ಮೂಲಕ ಅವಕಾಶ ಮಾಡಿಕೊಡಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next