Advertisement

ಸಪ್ತ ಜನೋತ್ಸವ: 50 ಕ್ಷೇತ್ರಗಳಲ್ಲಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷರ ಪ್ರವಾಸ

11:12 PM Aug 18, 2022 | Team Udayavani |

ಬೆಂಗಳೂರು: ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗಾಗಿ ಆಡಳಿತಾರೂಢ ಬಿಜೆಪಿ ಸಿದ್ಧತೆಗಳನ್ನು ಆರಂಭಿಸಿದೆ. ಮುಂದಿನ ತಿಂಗಳ ಮೊದಲ ವಾರದಿಂದ ಅಕ್ಟೋಬರ್‌ ಮಧ್ಯಭಾಗದ ವರೆಗೆ ರಾಜ್ಯದ 7 ಕಡೆ ಬೃಹತ್‌ ಜನೋತ್ಸವ ಸಮಾವೇಶ ಹಮ್ಮಿಕೊಳ್ಳಲು ಪಕ್ಷ ನಿರ್ಧರಿಸಿದೆ.

Advertisement

ಗುರುವಾರ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್‌ ಸಿಂಗ್‌ ನೇತೃತ್ವದಲ್ಲಿ ನಡೆದ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ರಾಜ್ಯ ಬಿಜೆಪಿ ಸರಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲು ರಾಜ್ಯದ ಏಳು ಕಡೆ ಜನೋತ್ಸವ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ದೊಡ್ಡಬಳ್ಳಾಪುರದಲ್ಲಿ ಸೆಪ್ಟಂಬರ್‌ನಲ್ಲಿ ಮೊದಲ ಸಮಾವೇಶ ನಡೆಯಲಿದೆ ಎಂದು ಸಭೆಯಲ್ಲಿ ತೆಗೆದುಕೊಂಡ ನಿರ್ಣಯದ ಕುರಿತು ಬಿಜೆಪಿ ಮುಖ್ಯ ವಕ್ತಾರ ಎಂ.ಜಿ. ಮಹೇಶ್‌ ಮಾಧ್ಯಮಗಳಿಗೆ ತಿಳಿಸಿದರು.

ಮುಂದಿನ ಒಂದು ತಿಂಗಳು ಅವಧಿಯಲ್ಲಿ ನಡೆಸಬೇಕಾಗಿರುವ ರಾಜ್ಯ ಪ್ರವಾಸಗಳ ಕುರಿತು ನಿರ್ಧರಿಸಲಾಯಿತು. ಮುಖ್ಯಮಂತ್ರಿ ಮತ್ತು ರಾಜ್ಯಾಧ್ಯಕ್ಷರು ತಲಾ 50 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಬೇಕು ಎಂಬುದಾಗಿ ಸಭೆ ನಿರ್ಧರಿಸಿದೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಕಾರ್ಯಕಾರಿಣಿ:

Advertisement

ಮುಂದಿನ ರಾಜ್ಯ ಕಾರ್ಯಕಾರಿಣಿಯನ್ನು ಸೆ. 10 ಮತ್ತು 11ರಂದು ಬೆಂಗಳೂರಿನಲ್ಲಿ ನಡೆಸಲು ನಿರ್ಧರಿಸಲಾಗಿದೆ. 3 ತಿಂಗಳಿಗೊಮ್ಮೆ ಈ ಕಾರ್ಯಕಾರಿಣಿ ನಡೆಯುತ್ತಿದೆ. ರಾಜ್ಯದಲ್ಲಿ 145ಕ್ಕೂ ಹೆಚ್ಚು ಸ್ಥಾನ ಗೆಲ್ಲಲು ಪ್ರಧಾನಿ ಮೋದಿಯವರ ಪಂಚ ಸಂಕಲ್ಪಗಳು ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪಂಚ ಯೋಜನೆಗಳನ್ನು ಬಳಸಿಕೊಳ್ಳಬೇಕು. ಈ ಯೋಜನೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದು ತಿಳಿಸಲಾಗಿದೆ ಎಂದರು.

ಪಕ್ಷಕ್ಕೆ ಆನೆಬಲ:

ಕೇಂದ್ರದ ಸಂಸದೀಯ ಮಂಡಳಿ ಮತ್ತು ಚುನಾವಣ ಸಮಿತಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರ ನೇಮಕವನ್ನು ಸಭೆಯು ಒಕ್ಕೊರಲಿನಿಂದ ಸ್ವಾಗತಿಸಿದೆ. ಇದರಿಂದ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಆನೆ ಬಲ ಬಂದಂತಾಗಿದೆ. ರಾಜ್ಯ ರಾಜಕೀಯದಲ್ಲಿ ಮಹತ್ತರ ಸಾಧನೆ ಮಾಡುವ ಅವಕಾಶ ಇದರಿಂದ ಒದಗಿದೆ ಎಂಬುದಾಗಿ ಅರುಣ್‌ ಸಿಂಗ್‌ ತಿಳಿಸಿದರು ಎಂದು ಅವರು ವಿವರಿಸಿದರು.

ರಾಜ್ಯದ ಪ್ರತೀ ಬೂತನ್ನು ಕನಿಷ್ಠ 50ಕ್ಕೂ ಹೆಚ್ಚು ಮತ ಪಡೆಯುವ ಬೂತ್‌ ಆಗಿ ಪರಿವರ್ತಿಸಬೇಕು. ಅದಕ್ಕಾಗಿ ರಾಜ್ಯ- ಜಿಲ್ಲಾ  ಪದಾಧಿಕಾರಿಗಳು ತಿಂಗಳಿಗೆ 15 ದಿನ ಪ್ರವಾಸ ಮಾಡಲು ಅರುಣ್‌ ಸಿಂಗ್‌ ಸೂಚಿಸಿರುವುದಾಗಿ ಹೇಳಿದರು.

ಸಭೆಯಲ್ಲಿ ಪ್ರಸ್ತುತ ವಿದ್ಯಮಾನಗಳ ಕುರಿತು ವಿವರಿಸಿದ್ದಾ ಗಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

ಕಾಂಗ್ರೆಸ್‌ ಮತಬ್ಯಾಂಕ್‌ ರಾಜಕೀಯಕ್ಕಾಗಿ ವೀರ ಸಾವರ್ಕರ್‌ ಅವರನ್ನು ಅವಹೇಳನ ಮಾಡುವುದು ಖಂಡನೀಯ ಕಾಂಗ್ರೆಸ್‌ ವೀರ ಸಾವರ್ಕರ್‌ ಅವರ ಬಗ್ಗೆ ಅನುಸರಿಸುತ್ತಿರುವ ನಿಲುವನ್ನು ಸಭೆ ಅತ್ಯುಗ್ರವಾಗಿ ಖಂಡಿಸಿತು ಎಂದರು.

ಬಿಎಸ್‌ವೈ ಮಾರ್ಗದರ್ಶನದಲ್ಲಿ ಚುನಾವಣೆ:

ಯಡಿಯೂರಪ್ಪ ಅವರನ್ನು ಸಂಸದೀಯ ಮಂಡಳಿಗೆ ಸೇರ್ಪಡೆ ಮಾಡಿರುವುದರಿಂದ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ಅವರ ಮಾರ್ಗದರ್ಶನದಲ್ಲಿ ವಿಧಾನಸಭೆ ಚುನಾವಣೆ ಎದುರಿಸುತ್ತೇವೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಹೇಳಿದ್ದಾರೆ.

ಯಡಿಯೂರಪ್ಪ ನಾಲ್ಕು ಬಾರಿ ಮುಖ್ಯಮಂತ್ರಿಯಾದವರು. ಮೂರು ಬಾರಿ ವಿಪಕ್ಷ ನಾಯಕರಾಗಿದ್ದರು. ಪಕ್ಷದ ಉನ್ನತ ಮಟ್ಟದ ಸಮಿತಿಯ ಸದಸ್ಯರಾಗಿರುವುದರಿಂದ ಪಕ್ಷಕ್ಕೆ ದೊಡ್ಡ ಮಟ್ಟದ ಶಕ್ತಿ ಮತ್ತು ಲಾಭ ಒದಗಿದೆ. ಅವರಿಂದ ಕರ್ನಾಟಕವಲ್ಲದೆ ಇಡೀ ದಕ್ಷಿಣ ಭಾರತದಲ್ಲಿ ಬಿಜೆಪಿಯ ಯಶಸ್ಸಿಗೆ ನೆರವು ಸಿಗಲಿದೆ. ಅವರ ಮಾರ್ಗದರ್ಶನದಲ್ಲಿ ನಾವು ಸಾಗುತ್ತೇವೆ ಎಂದು ತಿಳಿಸಿದರು. 2023ರ ಚುನಾವಣೆಯಲ್ಲಿ ಪಕ್ಷಕ್ಕೆ ಯಡಿಯೂರಪ್ಪ ಅನಿವಾರ್ಯ ಎನ್ನುವುದು ಗೊತ್ತಿರುವ ವಿಷಯ. ಅವರಿಂದ ಸಾಕಷ್ಟು ಮಾರ್ಗದರ್ಶನ ಪಡೆಯುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next