Advertisement

ಬಿಜೆಪಿಯಲ್ಲಿ ತ್ರಿಪಲ್‌ ತಲಾಶ್‌; ಪ್ರತಿ ಕ್ಷೇತ್ರಕ್ಕೂ ತಲಾ ಮೂವರು ಆಕಾಂಕ್ಷಿಗಳ ಪಟ್ಟಿ ತಯಾರು

11:11 PM Apr 04, 2023 | Team Udayavani |

ಬೆಂಗಳೂರು:ವಿಧಾನಸಭಾ ಚುನಾವಣೆ ಟಿಕೆಟ್‌ ಆಯ್ಕೆ ಕಸರತ್ತು ಬಿಜೆಪಿಗೆ ಸವಾಲಾಗಿಯೇ ಪರಿಣಮಿಸುತ್ತಿದ್ದು, ಈ ಬಾರಿ ಎಲ್ಲ ವಿಧಾನಸಭಾ ಕ್ಷೇತ್ರಗಳಿಂದಲೂ ಅರ್ಹ ಮೂವರು ಆಕಾಂಕ್ಷಿಗಳ ಹೆಸರನ್ನು ವರಿಷ್ಠರಿಗೆ ಕಳುಹಿಸಿಕೊಡಲು ಪಟ್ಟಿ ತಯಾರಿಸಲಾಗುತ್ತಿದೆ. ಹಾಲಿ ಶಾಸಕರು ಹಾಗೂ ಸಿಂಗಲ್‌ ನೇಮ್‌ ಇರುವ ಕ್ಷೇತ್ರಗಳಿಂದಲೂ ಮೂವರು ಆಕಾಂಕ್ಷಿಗಳ ಹೆಸರು ಸಂಗ್ರಹಿಸಲಾಗಿದೆ.

Advertisement

ಬೆಂಗಳೂರು ಹೊರ ವಲಯದಲ್ಲಿರುವ ರೆಸಾರ್ಟ್‌ನಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ , ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್‌ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದ ಕೋರ್‌ ಕಮಿಟಿ ಸಭೆಯ ಮೊದಲ ದಿನ 102 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ತಲಾ ಮೂವರು ಆಕಾಂಕ್ಷಿಗಳ ಪಟ್ಟಿಯನ್ನು ತಯಾರಿಸಲಾಗಿದೆ.

ಇದೇ ಮೊದಲ ಬಾರಿಗೆ ಅಭ್ಯರ್ಥಿಗಳಿಗಾಗಿ ಬಿಜೆಪಿ “ತ್ರಿಪಲ್‌ ತಲಾಶ್‌’ ನಡೆಸಿದ್ದು, ಬುಧವಾರ ಎಲ್ಲ ಕ್ಷೇತ್ರಗಳ ಪಟ್ಟಿ ಸಿದ್ಧಪಡಿಸಿ ಗುರುವಾರ ವರಿಷ್ಠರಿಗೆ ಕಳುಹಿಸಿಕೊಡಲಾಗುತ್ತದೆ.

ಜಿಲ್ಲಾ ಕೋರ್‌ ಕಮಿಟಿ ಸಭೆ, ಜಿಲ್ಲಾವಾರು ಪ್ರಮುಖರ ಸಭೆಯಲ್ಲಿ ವ್ಯಕ್ತವಾದ ಎಲ್ಲ ಹೆಸರುಗಳ ಬಲಾಬಲಗಳನ್ನು ಈ ಸಭೆಯಲ್ಲಿ ಚರ್ಚೆಗೆ ಒಳಪಡಿಸಲಾಗಿದೆ. ಹಾಲಿ ಶಾಸಕರು ಹಾಗೂ ಪರಾಜಿತ ಕ್ಷೇತ್ರಗಳಿಂದ ತಲಾ ಮೂವರು ಆಕಾಂಕ್ಷಿಗಳ ಹೆಸರನ್ನು ರಾಜ್ಯ ನಾಯಕರು ಅಂತಿಮಗೊಳಿಸಿದ್ದಾರೆ. ಇಂದಿನ ಸಭೆಯಲ್ಲಿ ಬೆಳಗಾವಿ, ಬೀದರ್‌, ರಾಯಚೂರು, ವಿಜಯಪುರ, ಬಾಗಲಕೋಟೆ, ಕಲಬುರಗಿ, ಹುಬ್ಬಳ್ಳಿ-ಧಾರವಾಡ, ಗದಗ, ಹಾವೇರಿ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳ ಆಕಾಂಕ್ಷಿಗಳ ಪಟ್ಟಿ ಸಂಸ್ಕರಿಸಲಾಗಿದೆ. ಒಟ್ಟು 102 ಕ್ಷೇತ್ರಗಳಿಂದ ಹೆಸರು ಸಂಗ್ರಹಿಸಲಾಗಿದ್ದು, ಬುಧವಾರ ಮಧ್ಯರಾತ್ರಿಯವರೆಗೂ ಈ ಪ್ರಕ್ರಿಯೆ ಮುಂದುವರಿಯಲಿದೆ.

ದಿಲ್ಲಿಗೆ ಶಿಫ್ಟ್:
ಎಲ್ಲ ಕ್ಷೇತ್ರಗಳಿಂದ ಆಕಾಂಕ್ಷಿಗಳ ಪಟ್ಟಿ ಸಿದ್ಧವಾದ ಬಳಿಕ ಗುರುವಾರ ಈ ವರದಿಯನ್ನು ದೆಹಲಿಗೆ ಕಳುಹಿಸಿಕೊಡಲಾಗುತ್ತದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಏ.7 ಅಥವಾ 8ರಂದು ಕೇಂದ್ರ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, 9ರಂದು ಮೊದಲ ಪಟ್ಟಿ ಪ್ರಕಟಗೊಳ್ಳುತ್ತದೆ ಎಂದು ತಿಳಿದು ಬಂದಿದೆ. ಈ ಪೈಕಿ 85 ಕಡೆಗಳಲ್ಲಿ ಒಂದೇ ಹೆಸರು ಹಾಕುವುದಕ್ಕೆ ಸಲಹೆ ಬಂದಿತ್ತಾದರೂ ಎಲ್ಲ ಕ್ಷೇತ್ರಕ್ಕೂ ಒಂದೇ ನಿಯಮ ಅನ್ವಯಿಸಬೇಕೆಂದು ಮೂವರು ಸಂಭಾವ್ಯರ ಹೆಸರನ್ನು ಕಳುಹಿಸಲಾಗಿದೆ. ಈ ಮೂಲಕ ಟಿಕೆಟ್‌ ಆಯ್ಕೆ ಪ್ರಕ್ರಿಯೆಯಲ್ಲಿ ರಾಜ್ಯಮಟ್ಟದಲ್ಲಿ ಯಾವುದೇ ಗೊಂದಲವಾಗದಂತೆ ನೋಡಿಕೊಳ್ಳುವ ಮೂಲಕ ಅಂತಿಮ ಜವಾಬ್ದಾರಿಯನ್ನು ವರಿಷ್ಠರ ಹೆಗಲಿಗೇರಿಸಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next