ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ “ಕಾಶ್ಮೀರಿ ಫೈಲ್ಸ್’ ಸಿನೆಮಾ ಹಾಗೂ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ವಿಚಾರ ಕೇಂದ್ರಿತ ವಿದ್ಯಮಾನಗಳು ಕಾಂಗ್ರೆಸ್‌ಗೆ ತಲೆನೋವು ಉಂಟು ಮಾಡಿದೆ.
ಉಪ ಚುನಾವಣೆ, ಪರಿಷತ್ ಚುನಾವಣೆಯಲ್ಲಿನ ಫಲಿತಾಂಶ ಹಾಗೂ ಮೇಕೆದಾಟು ಪಾದಯಾತ್ರೆ ಬಳಿಕದ ಹುಮ್ಮಸ್ಸಿನಿಂದ 2023ರಲ್ಲಿ ಅಧಿಕಾರ ಹಿಡಿಯುವ ಕನಸಿನತ್ತ ಹೊರಟಿದ್ದಾಗಲೇ ಹಿಜಾಬ್ ವಿವಾದ ಹಾಗೂ ಅನಂತರದ ಘಟನಾವಳಿಗಳು ಕಾಂಗ್ರೆಸ್ ವಲಯದಲ್ಲಿ ಸ್ವಲ್ಪ ಮಟ್ಟಿಗೆ ಆತಂಕ ಮೂಡಿಸಿದಂತಿವೆ.
ಹಿಜಾಬ್ ವಿಚಾರದಲ್ಲಿ ಮೊದಲಿಗೆ ಅಲ್ಪಸಂಖ್ಯಾಕರ ಪರ ನಿಂತಿದ್ದ ಕಾಂಗ್ರೆಸ್, ಹೈಕೋರ್ಟ್ ತೀರ್ಪು ಪ್ರಕಟವಾದ ಬಳಿಕ ಜಾಣನಡೆ ಅನುಸರಿಸಿತ್ತು. ಇದರ ಬೆನ್ನಲ್ಲೇ ಕಾಶ್ಮೀರಿ ಫೈಲ್ಸ್ ಸಿನೆಮಾ ಪ್ರಚಾರದ ಮೂಲಕ ಪರೋಕ್ಷವಾಗಿ ಬಿಜೆಪಿ ವರ್ಚಸ್ಸು ವೃದ್ಧಿಸಿಕೊಳ್ಳುವ ಪ್ರಯತ್ನ ನಡೆಸಿರುವುದು, ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ಬಹುಚರ್ಚಿತ ವಿಷಯವಾಗಿರುವುದು ಹಿಂದೂ ಮತಬ್ಯಾಂಕ್ ಒಟ್ಟಾಗಲು ಸಹಾಯವಾಗುತ್ತದಾ ಎಂಬ ಚಿಂತೆ ಕಾಂಗ್ರೆಸ್‌ನದ್ದಾಗಿದೆ.
ರಾಜ್ಯ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಇರುವಾಗ ಕಾಂಗ್ರೆಸ್ ನಿರೀಕ್ಷಿಸದ ಕೆಲವು ಘಟನೆಗಳು ಮುನ್ನಲೆಗೆ ಬರುತ್ತಿವೆ. ಕೆಲವು ವಿಚಾರಗಳಲ್ಲಿ ಜೆಡಿಎಸ್‌ನಿಂದಲೂ ಕಾಂಗ್ರೆಸ್‌ಗೆ ಪೂರಕ ಸಹಕಾರ ಸಿಗುತ್ತಿಲ್ಲ. ಹೀಗಾಗಿ, ಬಿಜೆಪಿ ವಿರುದ್ಧ ಏಕಾಂಗಿಯಾಗಿಯೇ ಹೋರಾಟ ಮಾಡಬೇಕಾಗಿದೆ.
ಡಿ.ಕೆ.ಶಿವಕುಮಾರ್ ಅಧ್ಯಕ್ಷರಾದ ಬಳಿಕ ಹಲವು ಹೋರಾಟ, ಡಿಜಿಟಲ್ ಸದಸ್ಯತ್ವ ಸಹಿತ ಸಕ್ರಿಯ ಚಟುವಟಿಕೆಗಳ ಮೂಲಕ ತಳಮಟ್ಟದಲ್ಲಿ ಕಾರ್ಯಕರ್ತರು, ಮುಖಂಡರಲ್ಲಿ ಹೊಸ ಶಕ್ತಿ ತುಂಬಲಾಗುತ್ತಿದೆ. ಮೇಕೆದಾಟು ಪಾದಯಾತ್ರೆ ಬಳಿಕವಂತೂ ಇಡೀ ಪಕ್ಷದಲ್ಲಿ ಚಲನಶೀಲತೆ ಕಂಡು ಬಂದಿತ್ತು. ಆದರೆ, ಹಿಜಾಬ್ ವಿದ್ಯಮಾನಗಳು ಕಾಂಗ್ರೆಸ್ ಪಾಲಿಗೆ ಬೇರೆಯೇ ಮುನ್ಸೂಚನೆ ನೀಡುವಂತಿವೆ. ಹೀಗಾಗಿ, ತನ್ನ ಮತಬ್ಯಾಂಕ್ ಗಟ್ಟಿಗೊಳಿಸುವತ್ತ ಮುಂದಾಗಿದೆ ಎನ್ನಲಾಗುತ್ತಿದೆ.
ಬೇರೆ ಅಸ್ತ್ರ ಪ್ರಯೋಗಕ್ಕೆ ಚಿಂತನೆ :
ಬಿಜೆಪಿಯ ತಂತ್ರಗಳಿಗೆ ಪ್ರತಿತಂತ್ರವಾಗಿ ಸರಕಾರದ ಇಲಾಖೆಗಳಲ್ಲಿನ ಅವ್ಯವಹಾರ, ಅಕ್ರಮಗಳನ್ನು ಪತ್ತೆ ಹಚ್ಚಿ ಅದನ್ನೇ ಹೋರಾಟದ ಅಸ್ತ್ರವಾಗಿಸಿಕೊಳ್ಳಲು ಹಿರಿಯ ನಾಯಕರು ಸಲಹೆ ನೀಡಿದ್ದಾರೆ. ಅಧಿವೇಶನದಲ್ಲೂ ಇಲಾಖಾವಾರು ಬೇಡಿಕೆಗಳ ಚರ್ಚೆ ಸಂದರ್ಭ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸುವ ಬಗ್ಗೆ ತಂತ್ರಗಾರಿಕೆ ರೂಪಿಸಿದೆ. ಸೋಮವಾರದ ಶಾಸಕಾಂಗ ಪಕ್ಷದ ಸಭೆಯಲ್ಲೂ ಇದು ಚರ್ಚೆಯಾಗಲಿದೆ ಎಂದು ಹೇಳಲಾಗಿದೆ.
ರಾಜ್ಯ ವಿಧಾನಮಂಡಲ ಅಧಿವೇಶನ ಹಾಗೂ ಯುಗಾದಿ ಬಳಿಕ ಇದೇ ವಿಚಾರದಲ್ಲಿ ಪಕ್ಷದ ಎಲ್ಲ ನಾಯಕರ ವಿಶೇಷ ಸಭೆ ನಡೆಯಲಿದೆ. ಸಭೆಯಲ್ಲಿ ಒಂದು ವರ್ಷ ಕಾಲ ನಿರಂತರವಾಗಿ ನಡೆಸಬೇಕಾದ ಹೋರಾಟದ ರೂಪು-ರೇಷೆ ನಿಗದಿಯಾಗಲಿದೆ ಎಂದು ತಿಳಿದು ಬಂದಿದೆ.
ಲೆಕ್ಕಾಚಾರ ಬದಲು :
ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಒಟ್ಟಾರೆ ರಾಜಕೀಯ ಲೆಕ್ಕಾಚಾರವನ್ನೇ ಬದಲಾಗುವಂತೆ ಮಾಡಿದೆ. ಬಿಜೆಪಿ ತನ್ನ ನಿಲುವು ಸ್ಪಷ್ಟ ಎಂದು ನೇರವಾಗಿಯೇ ಹೇಳುತ್ತಿದ್ದು, ಮುಂದಿನ ಪರಿಣಾಮ ಅರಿತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರತಿ ವಿಚಾರದಲ್ಲಿಯೂ ಅಳೆದು ತೂಗಿ ಮಾತನಾಡುವಂತಾಗಿದೆ.
ಬಿಜೆಪಿಗೆ ಪ್ಲಸ್; ಕಾಂಗ್ರೆಸ್‌ಗೆ ಮೈನಸ್ ಆದ ಅಂಶಗಳು :
- ಹಿಜಾಬ್ ಗಲಾಟೆ ಹಾಗೂ ಹೈಕೋರ್ಟ್ ತೀರ್ಪು
- ಶಿವಮೊಗ್ಗದಲ್ಲಿ ಹರ್ಷ ಕೊಲೆ ಪ್ರಕರಣ; ಹಿಂಸಾಚಾರ
- ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ಸೇರ್ಪಡೆ ವಿಚಾರ
- ಕಾಶ್ಮೀರಿ ಪಂಡಿತರ ನರಮೇಧ ಕುರಿತಾದ “ಕಾಶ್ಮೀರ ಫೈಲ್ಸ್’ ಸಿನೆಮಾ
ಚುನಾವಣ ವರ್ಷವಾದ್ದರಿಂದ ಬಿಜೆಪಿ ತನ್ನೆಲ್ಲ ಅಜೆಂಡಾವನ್ನು ಒಂದೊಂದಾಗಿಯೇ ಜಾರಿಗೊಳಿಸಲು ಮುಂದಾಗಿದೆ. ಆದರೆ, ಅಭಿವೃದ್ಧಿ ಎಷ್ಟಾಗಿದೆ ಎಂಬುದು ನಾವು ಜನರ ಮುಂದಿಡಬೇಕಾದ ಪ್ರಶ್ನೆ. ಭಾವನಾತ್ಮಕ ವಿಚಾರ, ಜಾತಿ, ಧರ್ಮದ ಮೇಲೆ ಹೋಗಬಾರದು. ಅಧಿವೇಶನ ಮುಗಿದ ಬಳಿಕ ನೇರವಾಗಿ ಜನರ ಮುಂದೆ ಹೋಗಿ ಸತ್ಯಾಂಶ ತಿಳಿಸುತ್ತೇವೆ.
– ಈಶ್ವರ್ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ
–ಎಸ್. ಲಕ್ಷ್ಮೀನಾರಾಯಣ