ಮಂಗಳೂರು: ಪರೇಶ್ ಮೇಸ್ತಾ ಸಾವು ಪ್ರಕರಣದಲ್ಲಿ ತನಿಖೆ ನಡೆಸಿದ ಸಿಬಿಐ ಕೋರ್ಟ್‌ಗೆ “ಬಿ’ ವರದಿ ಸಲ್ಲಿಸಿದೆ. ಇದು ಸಾವಿನ ಮನೆಯಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿರುವುದಕ್ಕೆ ಸಾಕ್ಷಿ ಎಂದು ವಿಧಾನಸಭೆ ವಿಪಕ್ಷ ಉಪ ನಾಯಕ ಯು.ಟಿ. ಖಾದರ್ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದ್ದಾರೆ.
ಬಡ ಕುಟುಂಬದ ಮನೆಯ ಸಂಕಷ್ಟವನ್ನು ಬೀದಿಗೆ ತಂದು ರಾಜಕೀಯ ಮಾಡುವುದು ಬಿಜೆಪಿಯ ಚಿಂತನೆ. ಈ ಬಗ್ಗೆ ಭಾರೀ ಮಾತನಾಡುತ್ತಿದ್ದ ಸಂಸದ ಅನಂತ ಕುಮಾರ್ ಹೆಗಡೆ ಈಗ ಎಲ್ಲಿದ್ದಾರೆ? ಎಂದು ಪ್ರಶ್ನಿಸಿದರು.
ಪರೇಶ್ ಪ್ರಕರಣವನ್ನು ಸಿಬಿಐಗೆ ವಹಿಸಿದ್ದು ಕಾಂಗ್ರೆಸ್ ಸರಕಾರ. ಆಗ ಬಿಜೆಪಿ ಮುಖಂಡರು ಇಲ್ಲಸಲ್ಲದ ಅರೋಪ ಮಾಡಿದ್ದರು. ಜನರನ್ನು ರೊಚ್ಚಿಗೆಬ್ಬಿಸಿ ಪೊಲೀಸ್ ವಾಹನಗಳಿಗೆ ಬೆಂಕಿ ಇಡುವಂತೆ ಪ್ರೇರೇಪಿಸಿದ್ದರು. ಮೇಸ್ತಾ ಸಾವಿನ ಬಳಿಕ ಬಿಜೆಪಿ ಮುಖಂಡರು ಮೇಸ್ತಾ ಮನೆಯನ್ನು ಪ್ರವಾಸಿ ತಾಣವಾಗಿಸಿದರು.
ಇಲ್ಲಸಲ್ಲದ ಆರೋಪ, ಹೇಳಿಕೆಗಳ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ನಾಯಕರು ಬಳಿಕ ಪರೇಶ್ ಕುಟುಂಬವನ್ನು ಮರೆತರು ಎಂದರು.
ಸಾವಿನಲ್ಲಿ ರಾಜಕೀಯ ನಡೆಸುವ ಬಿಜೆಪಿ ನಾಯಕರ ಬಗ್ಗೆ ಜನರು ಗಂಭೀರವಾಗಿ ಯೋಚಿಸಬೇಕಾಗಿದೆ ಎಂದು ಖಾದರ್ ಹೇಳಿದರು.