ಬೆಂಗಳೂರು: ಕರ್ನಾಟಕದ ಅಸ್ಮಿತೆಯನ್ನು ಮುಗಿಸಲು ಬಿಜೆಪಿ ಕೇಂದ್ರದ ನಾಯಕರು ಸಂಚು ರೂಪಿಸಿದ್ದು, ಇದಕ್ಕೆ ರಾಜ್ಯದ ಬಿಜೆಪಿ ಸಂಸದರು ಮೌನಕ್ಕೆ ಶರಣಾಗುವ ಮೂಲಕ ಸಹಕಾರ ನೀಡುತ್ತಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ಪ್ರಿಯಾಂಕ ಖರ್ಗೆ ಆರೋಪಿಸಿದರು.
ಕರ್ನಾಟಕದ ಗಡಿಯಲ್ಲಿರುವ 865 ಹಳ್ಳಿಗಳಿಗೆ ಮಹಾರಾಷ್ಟ್ರ ಸರ್ಕಾರ ಜ್ಯೋತಿಬಾ ಫುಲೆ ಆರೋಗ್ಯ ಯೋಜನೆ ಸೇರಿ ಹಲವು ಯೋಜನೆಗಳನ್ನು ವಿಸ್ತರಿಸಿದೆ. ಈ ಬಗ್ಗೆ ಸರ್ಕಾರ ವಿರೋಧ ವ್ಯಕ್ತಪಡಿಸುತ್ತಿಲ್ಲ. ನಿರಂತರವಾಗಿ ರಾಜ್ಯಕ್ಕೆ ಭೇಟಿ ನೀಡುತ್ತಿರುವ “ರಾಜಕೀಯ ಪ್ರವಾಸಿಗರು’ ಈ ಕುರಿತು ಪ್ರಸ್ತಾಪವನ್ನೂ ಮಾಡುವುದಿಲ್ಲ. ಬಿಜೆಪಿಗೆ ಕನ್ನಡಿಗರ ಮತಗಳು ಬೇಕು. ಆದರೆ, ಅವರ ಅಸ್ಮಿತೆ ವಿಚಾರದಲ್ಲಿ ಯಾಕೆ ಈ ತಾತ್ಸಾರ? ಇದರ ಹಿಂದೆ ಕನ್ನಡಿಗರ ಅಸ್ಮಿತೆ ಮುಗಿಸುವ ಸಂಚಿದೆ. ಇದರಲ್ಲಿ ರಾಜ್ಯದ ಬಿಜೆಪಿಯೂ ಶಾಮೀಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಇದು ಹಲವು ಬಾರಿ ಸಾಬೀತು ಕೂಡ ಆಗಿದೆ. ರಾಯಚೂರಿನ ಉಸ್ತುವಾರಿ ಆಗಿದ್ದ ಪ್ರಭು ಚವ್ಹಾಣ್ ಸಮ್ಮುಖದಲ್ಲೇ ಈ ಸರ್ಕಾರದಲ್ಲಿ ಸಮರ್ಪಕ ಅನುದಾನ ಸಿಗುತ್ತಿಲ್ಲ. ಹೀಗಾಗಿ ರಾಯಚೂರು ಆಂಧ್ರಪ್ರದೇಶ ಅಥವಾ ತೆಲಂಗಾಣಕ್ಕೆ ಸೇರಲಿದೆ ಎಂದು ಶಾಸಕ ಶಿವರಾಜ್ ಪಾಟೀಲ ಎಚ್ಚರಿಸುತ್ತಾರೆ. ಆದರೆ, ಸಚಿವರು ನಕ್ಕು ಸುಮ್ಮನಾಗುತ್ತಾರೆ. ಅದೇ ರೀತಿ, ಸಚಿವ ಆನಂದ್ ಸಿಂಗ್ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಎಂದು ಇಬ್ಭಾಗಿಸುವಂತೆ ಒತ್ತಾಯಿಸುತ್ತಾರೆ. ಅವರಿಗೊಂದು ನೋಟಿಸ್ ನೀಡುವ ಧೈರ್ಯವನ್ನೂ ಸರ್ಕಾರ ತೋರುವುದಿಲ್ಲ. ಇದು ಬಿಜೆಪಿಯ ಬದ್ಧತೆ ಎಂದು ತರಾಟೆಗೆ ತೆಗೆದುಕೊಂಡರು.
“ನಿಲುವು ಸ್ಪಷ್ಟಪಡಿಸಲಿ”: ಈಗ ಮಹಾರಾಷ್ಟ್ರ ಮತ್ತೆ ತಗಾದೆ ತೆಗೆದಿದೆ. ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಬಂದಾಗ ಅನೇಕ ವಿಚಾರ ಮಾತನಾಡುತ್ತಾರೆ. ತಮ್ಮ ಮನದಾಳದ ಮಾತುಗಳನ್ನೂ ಆಡುತ್ತಾರೆ. ಆದರೆ, ಜನರ ಮನದಾಳದ ಮಾತುಗಳನ್ನು ಅವರು ಆಲಿಸುವುದೂ ಇಲ್ಲ. ಅದಕ್ಕೆ ಸ್ಪಂದನೆ ದೂರದ ಮಾತು. ಮಹಾರಾಷ್ಟ್ರ ತೆಗೆಯುತ್ತಿರುವ ತಗಾದೆ ವಿಚಾರದಲ್ಲಿ ಬಿಜೆಪಿ ತನ್ನ ನಿಲುವು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದರು.
ಬಿಜೆಪಿಯು ರಾಜ್ಯವನ್ನು ಒಡೆಯುತ್ತಿದೆ. ಅವರಿಗೆ ಕರ್ನಾಟಕದ ಅಸ್ಮಿತೆ ಬಗ್ಗೆ ಕಾಳಜಿ ಇಲ್ಲ. ರಾಜ್ಯದ ಇತಿಹಾಸ ಹಾಗೂ ಕರ್ನಾಟಕದ ಏಕೀಕರಣಕ್ಕೆ ಅವರ ಕೊಡುಗೆ ಶೂನ್ಯ. ಹೀಗಿರುವಾಗ ಅವರಿಗೆ ಕನ್ನಡದ ವಿಚಾರವಾಗಿ ಪ್ರೀತಿ ಹುಟ್ಟಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಪದೇ ಪದೇ ಕನ್ನಡಿಗರಿಗೆ ಅಪಮಾನ ಮಾಡುತ್ತಿದ್ದಾರೆ. ಆದರೆ, ಬಿಜೆಪಿ ನಾಯಕರು ಮಾತ್ರ ಬಾಯಿಗೆ ಹೊಲಿಗೆ ಹಾಕಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.