Advertisement
ವಿಜಯನಗರ ಜಿಲ್ಲೆ ಹೊಸಪೇಟೆ, ಹಗರಿಬೊಮ್ಮನ ಹಳ್ಳಿ, ಹೂವಿನಹಡಗಲಿ, ಕೊಟ್ಟೂರು, ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಬಿಜೆಪಿ ಮುಖಂಡರು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಸರಕಾರದ ವಿರುದ್ಧ ಹರಿಹಾಯ್ದರು. ಬೆಳಗಾವಿಯಲ್ಲಿ ಬಿಜೆಪಿಯ ಗ್ರಾಮಾಂತರ, ನಗರ ಘಟಕದ ಮುಖಂಡರು ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮೆರ ವಣಿಗೆ ನಡೆಸಿದರು.
ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ನಡೆದ ಪ್ರತಿಭಟನೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಾಥ್ ನೀಡಿದರು. ಈ ವೇಳೆ ಮಾತನಾಡಿ, ರೈತರ ಜಮೀನು ಮುಟ್ಟಿದ ಯಾವ ನಾಯಕನೂ ಅಧಿಕಾರದಲ್ಲಿ ಉಳಿದಿಲ್ಲ. ರಾಜ್ಯದಲ್ಲಿ ಮತ್ತೂಂದು ನರಗುಂದ ಮಾದರಿ ರೈತ ಬಂಡಾಯ ಆಗಲಿದೆ ಎಂದು ಎಚ್ಚರಿಕೆ ನೀಡಿದರು. ಚಿಕ್ಕಮಗಳೂರಿನಲ್ಲಿ ಹನುಮಪ್ಪ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು. ಗದಗದಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಸಚಿವ ಜಮೀರ್ ಅಹ್ಮದ್ ಹಾಗೂ ಕಾಂಗ್ರೆಸ್ ಸರಕಾರದ ಕುಮ್ಮಕ್ಕಿನಿಂದ ವಕ್ಫ್ ಮಂಡಳಿ ಸಾರ್ವಜನಿಕರ ಆಸ್ತಿ ಕಬಳಿಕೆಗೆ ಮುಂದಾಗಿದೆ ಎಂದು ಆರೋಪಿಸಿದರು.
Related Articles
Advertisement
ಬಂಧನ, ಬಿಡುಗಡೆಬಿಜೆಪಿ ಕಾರ್ಯಕರ್ತರು, ಮುಖಂಡರು ದಾವಣಗೆರೆ ಜಿಲ್ಲಾ ಕಚೇರಿಯಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಪ್ರತಿಭಟನ ಮೆರವಣಿಗೆ ನಡೆಸಿ ಎಸಿ ಕಚೇರಿ ವೃತ್ತದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದರು. ಅನಂತರ ಉಪ ವಿಭಾಗಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗುತ್ತಿದ್ದಂತೆಯೇ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಗಾಯತ್ರಿ ಸಿದ್ದೇಶ್ವರ, ಜಿಲ್ಲಾಧ್ಯಕ್ಷ ಎನ್. ರಾಜಶೇಖರ ನಾಗಪ್ಪ ಒಳಗೊಂಡಂತೆ 35 ಜನರನ್ನು ಮುಂಜಾಗ್ರತೆ ಕ್ರಮವಾಗಿ ಪೊಲೀಸರು ವಶಕ್ಕೆ ಪಡೆದು ಅನಂತರ ಬಿಡುಗಡೆ ಮಾಡಿದರು. ಈ ವೇಳೆ ಮಾತಿನ ಚಕಮಕಿಯೂ ನಡೆಯಿತು. ಕೋಲಾರದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್, ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಹಾಸನದಲ್ಲಿ ಸ್ಥಳೀಯ ಮುಖಂಡರು, ತುಮಕೂರಿನಲ್ಲಿ ಗ್ರಾಮಾಂತರ ಶಾಸಕ ಬಿ. ಸುರೇಶ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮೈಸೂರಿನಲ್ಲಿ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆಯಲ್ಲಿ ಸಾಗಿದ ನೂರಾರು ಬಿಜೆಪಿ ಕಾರ್ಯಕರ್ತರು ಸಮಾವೇಶಗೊಂಡು ರಾಜ್ಯ ಸರಕಾರದ ವಿರುದ್ಧ ಪ್ರತಿಭಟಿಸಿದರು. ಚಾಮರಾಜನಗರ, ರಾಮನಗರ ಸೇರಿ ಹಲವು ಜಿಲ್ಲೆಗಳಲ್ಲಿ ಪ್ರತಿಭಟಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹಮದ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ನಗರದ ಮಿನಿ ವಿಧಾನಸೌಧ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಬೇಡಿಕೆಗಳೇನು?
1. ರೈತರ, ಸಂಘ-ಸಂಸ್ಥೆಗಳ, ಮಠ ಮಾನ್ಯಗಳ ಜಮೀನು, ಸರಕಾರಿ ಜಮೀನು, ಇತ್ಯಾದಿ ಆಸ್ತಿಗಳ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ಸೇರ್ಪಡೆ ಮಾಡಿರುವುದನ್ನು ತತ್‌ಕ್ಷಣ ತೆಗೆದು ಹಾಕಬೇಕು.
2. ಈಗಾಗಲೇ ನೋಟಿಸ್ ಕೊಟ್ಟು ಅಥವಾ ಕೊಡದೆ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ಸೇರ್ಪಡೆ ಮಾಡಿರುವುದನ್ನು ತೆಗೆದು ಹಾಕಬೇಕು.
3.ಪಹಣಿಯ ಯಾವುದೇ ಕಾಲಂನಲ್ಲೂ ವಕ್ಫ್ ಎಂದು ಇರಬಾರದು, ಕೇವಲ ರೈತರ ಹೆಸರು ಮಾತ್ರ ಇರಬೇಕು.
4. ಯಾವುದೇ ಆಸ್ತಿಗಳಿಗೆ ಸಂಬಂಧಿಸಿದ ತಕರಾರು ಸಾಮಾನ್ಯ ಕೋರ್ಟ್‌ಗಳಲ್ಲೇ ಇತ್ಯರ್ಥ ಆಗಬೇಕು, ವಕ್ಫ್ ನ್ಯಾಯಾಲಯಕ್ಕೆ ಅವಕಾಶ ಕಲ್ಪಿಸಬಾರದು.
5 ವಕ್ಫ್ ಅದಾಲತ್‌ನಿಂದ ಸರಕಾರಿ ನ್ಯಾಯಾಲಯದ ಮಹತ್ವ ಕಡಿಮೆ ಆಗಲಿದೆ. ಹೀಗಾಗಿ ಎಲ್ಲಿಯೂ ವಕ್ಫ್ ಅದಾಲತ್ ನಡೆಸಬಾರದು.
6. ನೋಟಿಸ್‌ಗಳನ್ನು ಹಿಂಪಡೆಯುವುದರ ಜತೆಗೆ ಮುಂದೆ ನೋಟಿಸ್ ನೀಡದಂತೆ ಜಿಲ್ಲಾಧಿಕಾರಿ ಗಳಿಗೆ ಲಿಖೀತ ಆದೇಶ ಹೊರಡಿಸಬೇಕು
7. ವಕ್ಫ್ ಕಾಯ್ದೆ ರದ್ದುಪಡಿಸಬೇಕು. ಜಮೀರ್ ಅಹ್ಮದ್ ರಾಜೀನಾಮೆ ಪಡೆಯಬೇಕು. ಜಿಲ್ಲಾ ಪ್ರವಾಸ ಮಾಡುತ್ತಿರುವ ಸಚಿವ ಜಮೀರ್ ಅವರು ಡಿ.ಸಿ.ಗಳನ್ನು ಬೆದರಿಸಿ, ವಕ್ಫ್ ಆಸ್ತಿ ಎಂದು ರೈತರು, ದೇಗುಲ, ಮಠಕ್ಕೆ ನೋಟಿಸ್ ಕೊಡಿಸುತ್ತಿದ್ದಾರೆ. ರಾಜ್ಯದಲ್ಲಿ 15 ಸಾವಿರಕ್ಕೂ ಹೆಚ್ಚು ಎಕರೆ ಜಮೀನು ಕಬಳಿಸಲು ಯತ್ನಿಸಲಾಗುತ್ತಿದೆ.
-ಬಿ.ವೈ. ವಿಜಯೇಂದ್ರ,
ಬಿಜೆಪಿ ರಾಜ್ಯಾಧ್ಯಕ್ಷ ಕರ್ನಾಟಕವನ್ನು ಸಿದ್ದರಾಮಯ್ಯ ಉಗ್ರರ “ಸ್ಲಿಪಿಂಗ್ ಸೆಲ್’ ಮಾಡಿದ್ದಾರೆ. ಲವ್ ಜೆಹಾದ್ ಬಳಿಕ ಸಿದ್ದರಾಮಯ್ಯ ಮತ್ತು ತಂಡದವರು ಲ್ಯಾಂಡ್ ಜೆಹಾದ್ ನಡೆಸುತ್ತಿದ್ದಾರೆ. ಮತಾಂಧರನ್ನು ಓಲೈಕೆ ಮಾಡುವ ಹುನ್ನಾರ ನಡೆಯುತ್ತಿದೆ.
-ಆರ್. ಅಶೋಕ್,
ವಿಪಕ್ಷ ನಾಯಕ