ಬೆಂಗಳೂರು: ತಪ್ಪು ಮಾಡಿದವರಿಗೆ ಈ ನೆಲದ ಕಾನೂನು ಪ್ರಕಾರ ಕಠಿಣ ಶಿಕ್ಷೆ ಆಗಬೇಕು ಎಂಬುದು ಬಿಜೆಪಿಯ ಸ್ಪಷ್ಟ ನಿಲುವು. ಆದರೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಡುವಿನ ವೈಯಕ್ತಿಕ ಕೌಟುಂಬಿಕ ಜಗಳ ಎಲ್ಲಿಗೆ ಹೋಗಿ ನಿಲ್ಲುತ್ತದೆಯೋ ಗೊತ್ತಿಲ್ಲ.
ಬಿಜೆಪಿಯಂತೂ ಇದರಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಸ್ಪಷ್ಟಪಡಿಸಿದರು.
ಲೋಕದ ಡೊಂಕ ನೀವೇಕೆ ತಿದ್ದುವಿರಿ ಎಂಬ ಡಿಸಿಎಂ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ವೈಯಕ್ತಿಕ ಗಲಾಟೆಯನ್ನು ಜನರ ಸಮಸ್ಯೆ ಎನ್ನುವಂತೆ ಬಿಂಬಿಸಲು ಹೊರಟಿದ್ದಾರೆ. ಇದು ರಾಜಕಾರಣಕ್ಕೆ ಒಳ್ಳೆಯದಲ್ಲ ಎಂದರು.
ಇಬ್ಬರ ನಡುವಿನ ಈ ವಾಕ್ಸಮರ ಎಲ್ಲಿಗೆ ಹೋಗಿ ಮುಟ್ಟುತ್ತದೋ? ಏನೇನಾಗುತ್ತದೋ ಗೊತ್ತಿಲ್ಲ. ಆದರೆ ಇದರಿಂದಾಗಿ ಜನರ, ನಾಡಿನ ಅಭಿವೃದ್ಧಿ ಬಗ್ಗೆ ಚರ್ಚೆ ಆಗುತ್ತಿಲ್ಲ. ಬರಗಾಲ ನಿರ್ವಹಣೆ ವಿಚಾರದಲ್ಲಿ ಏನೇನು ನಡೆಯುತ್ತಿದೆ ಎಂಬುದು ಜನರಿಗೂ ತಿಳಿಯುತ್ತಿಲ್ಲ. ಪರಿಸ್ಥಿತಿ ಹೀಗೇ ಮುಂದುವರಿಯಬೇಕು ಎಂಬುದು ಕಾಂಗ್ರೆಸ್ ಆಶಯ ಇದ್ದಂತಿದೆ. ಇಲ್ಲದಿದ್ದರೆ ಎಷ್ಟು ಪರಿಹಾರ ಕೊಟ್ಟಿರಿ? ಎಷ್ಟು ಗೋಶಾಲೆ ತೆರೆದಿರಿ ಎಂದೆಲ್ಲ ಜನರು ಪ್ರಶ್ನಿಸಲಾರಂಭಿಸುತ್ತಾರೆ. ಹೀಗಾಗಿ ಈ ವಿಷಯವನ್ನು ಚರ್ಚೆಯ ಮುನ್ನೆಲೆಯಲ್ಲಿ ಇಡಲು ಕಾಂಗ್ರೆಸ್ ಇದನ್ನೆಲ್ಲ ಮಾಡುತ್ತಿದೆ ಎಂದು ಆರೋಪಿಸಿದರು.
ಬಸವೇಶ್ವರರ ಪ್ರತಿಮೆ ಸ್ಥಾಪಿಸದ ಕಾಂಗ್ರೆಸ್:
ಕಳೆದ 70 ವರ್ಷ ದೇಶವನ್ನಾಳಿದ ಕಾಂಗ್ರೆಸ್‌ಗೆ ವಿಧಾನಸೌಧ ಆವರಣದಲ್ಲಿ ಜಗಜ್ಯೋತಿ ಬಸವೇಶ್ವರರ ಪ್ರತಿಮೆ ಸ್ಥಾಪಿಸಬೇಕೆಂಬ ನೆನಪೇ ಆಗಿರಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದಾಗ ನಾವು ವಿಧಾನಸೌಧ ಆವರಣದಲ್ಲಿ ಬಸವೇಶ್ವರರ ಪ್ರತಿಮೆ ಸ್ಥಾಪಿಸಿದೆವು. ಕಾಂಗ್ರೆಸ್ ಏನಿದ್ದರೂ ಮುಂದಿನ 40 ವರ್ಷದಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ಜಾಸ್ತಿ ಮಾಡುವುದು ಹೇಗೆ ಎಂಬ ತಂತ್ರ ಮಾಡುತ್ತದೆಯೇ ಹೊರತು ಇಂಥದ್ದರ ಕಡೆಯೆಲ್ಲ ಗಮನ ಹರಿಸುವುದಿಲ್ಲ ಎಂದು ಟೀಕಿಸಿದರು.