Advertisement

ಚಿಂಚೋಳಿ ಕೈ ಅಭ್ಯರ್ಥಿ ನಾಮಪತ್ರ ಅಸಿಂಧುಗೊಳಿಸಿ: ಬಿಜೆಪಿ ಮನವಿ

06:41 AM May 02, 2019 | Lakshmi GovindaRaj |

ಬೆಂಗಳೂರು: ಚಿಂಚೋಳಿ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸುಭಾಷ್‌ ರಾಥೋಡ್‌ ಅವರಿಂದ ನೀತಿ ಸಂಹಿತೆ ಹಾಗೂ ಕಾನೂನು ಉಲ್ಲಂಘನೆಯಾಗಿದ್ದು, ಕೂಡಲೇ ಅವರ ನಾಮಪತ್ರವನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಬಿಜೆಪಿ ನಿಯೋಗ ರಾಜ್ಯ ಚುನಾವಣಾ ಆಯೋಗಕ್ಕೆ ಬುಧವಾರ ದೂರು ನೀಡಿದೆ.

Advertisement

ರಾಜ್ಯ ಬಿಜೆಪಿ ವಕ್ತಾರ ಅಶ್ವತ್ಥ ನಾರಾಯಣ ನೇತೃತ್ವದಲ್ಲಿ ಬಿಜೆಪಿ ಚುನಾವಣಾ ಆಯೋಗ ಸಮಿತಿ ರಾಜ್ಯ ಸಂಚಾಲಕ ದತ್ತಗುರು ಹೆಗಡೆ, ಸಹ ವಕ್ತಾರರಾದ ಎ.ಎಚ್‌.ಆನಂದ್‌, ಎಸ್‌.ಪ್ರಕಾಶ್‌ ಇತರರ ನಿಯೋಗ ಬುಧವಾರ ಜಂಟಿ ಮುಖ್ಯ ಚುನಾವಣಾಧಿಕಾರಿ ಎ.ವಿ.ಸೂರ್ಯ ಸೇನ್‌ ಅವರಿಗೆ ದೂರು ನೀಡಿತು.

ಕಲಬುರಗಿ ದಕ್ಷಿಣದಲ್ಲಿ ಎರಡು ಮತಗಟ್ಟೆ, ಆಳಂದ ಹಾಗೂ ಚಿಂಚೋಳಿಯಲ್ಲಿ ತಲಾ ಒಂದು ಮತಗಟ್ಟೆ ಸೇರಿದಂತೆ ಒಟ್ಟು ನಾಲ್ಕು ಕಡೆ ಮತದಾರರ ಪಟ್ಟಿಯಲ್ಲಿ ಸುಭಾಷ್‌ ರಾಥೋಡ್‌ ಹೆಸರಿದ್ದು, ಗುರುತಿನ ಚೀಟಿ ಹೊಂದಿದ್ದಾರೆ ಎಂದು ನಿಯೋಗ ದೂರಿದೆ.

ಬದಲಾದ ಚುನಾವಣಾ ನಿಯಮದ ಅನ್ವಯ ಪ್ರತಿ ಅಭ್ಯರ್ಥಿಯೂ ಯಾವುದಾದರೂ ಅಪರಾಧ ಎಸಗಿದಲ್ಲಿ ಅದರ ಸಂಪೂರ್ಣ ವಿವರ, ಎಫ್ಐಆರ್‌, ಅಪರಾಧದ ಸ್ವರೂಪ, ವಿಧಿಸಿದ ಶಿಕ್ಷೆಯ ವಿವರವಾದ ಮಾಹಿತಿ ನೀಡಬೇಕು.

ಆದರೆ, ಸುಭಾಷ್‌ ರಾಥೋಡ್‌ ವಿರುದ್ಧ ಒಂದು ಎಫ್ಐಆರ್‌ ದಾಖಲಾಗಿದ್ದು, ಅದರ ಮಾಹಿತಿ ನೀಡದೆ ಮುಚ್ಚಿಟ್ಟಿದ್ದಾರೆ. ಅದರ ವಿವರ ದಾಖಲಿಸಬೇಕಾದ ಅಂಕಣದಲ್ಲಿ ತಮಗೆ ಅನ್ವಯಿಸುವುದಿಲ್ಲ ಎಂದು ನಮೂದಿಸಿದ್ದಾರೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಸುಭಾಷ್‌ ರಾಥೋಡ್‌ ಅವರ ಮೇಲೆ ಸೂಕ್ತ ಕ್ರಮ ಜರುಗಿಸುವುದರ ಜತೆಗೆ ನಾಮಪತ್ರವನ್ನು ಅಸಿಂಧುಗೊಳಿಸಲು ಸೂಕ್ತ ನಿರ್ದೇಶನ ನೀಡಬೇಕು ಎಂದು ಕೋರಿದೆ.

Advertisement

ದೂರು ಸಲ್ಲಿಕೆ ಬಳಿಕ ಪ್ರತಿಕ್ರಿಯಿಸಿದ ಅಶ್ವತ್ಥ ನಾರಾಯಣ, ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸುಭಾಷ್‌ ರಾಥೋಡ್‌ ನಾಲ್ಕು ಕಡೆ ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ. ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯಾದವರು ಎರಡು ಕಡೆ ಹೆಸರು ಇದ್ದರೆ ಒಂದು ಕಡೆ ರದ್ದುಪಡಿಸಲು ಅರ್ಜಿ ಸಲ್ಲಿಸಿ ನಂತರ ಮತ್ತೂಂದು ಕಡೆ ಸೇರ್ಪಡೆಗೆ ಅರ್ಜಿ ನೀಡಬೇಕು.

ನಾಲ್ಕು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಮುಂದುವರಿಸುವಂತಿಲ್ಲ. ಈ ಸಂಬಂಧ ಈಗಾಗಲೇ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಅವರು ಚಿಂಚೋಳಿ ಸಹಾಯಕ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ. ಬುಧವಾರ ಜಂಟಿ ಮುಖ್ಯ ಚುನಾವಣಾಧಿಕಾರಿಗಳಿಗೂ ದೂರು ನೀಡಲಾಗಿದ್ದು, ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next