Advertisement
“ಉದಯವಾಣಿ’ಗೆ ವಿಶೇಷ ಸಂದರ್ಶನ ನೀಡಿದ ಅವರು, ಪ್ರಧಾನಿ ಮೋದಿ ಅವರ ಜನಪ್ರಿಯತೆ, ಕೇಂದ್ರದ ಉತ್ತಮ ಆಡಳಿತದಿಂದ ಜನ ಕರ್ನಾಟಕದಲ್ಲೂ ಬಿಜೆಪಿ ಬೆಂಬಲಿಸುವ ವಿಶ್ವಾಸವಿದೆ ಎಂದು ಹೇಳಿದರು. ಸಂದರ್ಶನದ ವಿವರ ಹೀಗಿದೆ.
ಪ್ರತಿ ರಾಜ್ಯ ವಿಧಾನಸಭಾ ಚುನಾವಣೆಯು ರಾಷ್ಟ್ರ ರಾಜಕಾರಣ ದಲ್ಲಿ ಮಹತ್ವ ಪಡೆದಿರುತ್ತದೆ. ಕರ್ನಾಟಕ ಚುನಾವಣೆಗೂ ಮಹತ್ವವಿದೆ. ಕರ್ನಾಟಕದಲ್ಲಿ ಅಧಿಕಾರ ಹಿಡಿದರೆ ದಕ್ಷಿಣ ಭಾರತ ರಾಜ್ಯಗಳ ಪ್ರವೇಶಕ್ಕೆ ಬಾಗಿಲು ತೆರೆದಂತಾಗುತ್ತದೆ. ಚುನಾವಣೆ ಕಾಂಗ್ರೆಸ್ ಮೇಲೆ ಯಾವ ಪರಿಣಾಮ ಬೀರಬಹುದು?
ಚುನಾವಣೆ ಫಲಿತಾಂಶ ಪ್ರಕಟವಾದಾಗ ಕಾಂಗ್ರೆಸ್‌ಗೆ ಭಾರಿ ನಿರಾಸೆಯಾಗಲಿದೆ. ಏಕೆಂದರೆ ಎಲ್ಲ ಕ್ಷೇತ್ರದಲ್ಲಿ ಆಡಳಿತ ವಿಫಲವಾಗಿದೆ. 3,700ಕ್ಕೂ ಹೆಚ್ಚು ರೈತರ ಆತ್ಮಹತ್ಯೆ ಸಂಭವಿಸಿ ದರೂ ಸರ್ಕಾರ ಸಂವೇದನೆಯನ್ನೇ ಕಳೆದುಕೊಂಡಿದೆ. ಶಾಸಕ ಹ್ಯಾರಿಸ್ ಪುತ್ರ ಅಮಾಯಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸುತ್ತಾನೆ. ಕೆ.ಜೆ.ಜಾರ್ಜ್, ಹ್ಯಾರಿಸ್, ಆರ್.ರೋಷನ್ ಬೇಗ್ ಅವರಿಗೆ ಬೆಂಗಳೂರನ್ನು ಬಿಟ್ಟುಕೊಟ್ಟಂತಿದೆ. ಹಾಗಾಗಿ ಈ ಮೂವರನ್ನು 224 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಪ್ರತೀಕವೆಂದು ಪರಿಗಣಿಸಿ ಬಿಜೆಪಿ ಸ್ಪರ್ಧೆ ನಡೆಸಿದೆ.
Related Articles
ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ 14ನೇ ಹಣಕಾಸು ಆಯೋ ಗದಡಿ 2.19 ಲಕ್ಷ ಕೋಟಿ ರೂ. ಹಾಗೂ ನಾನಾ ಯೋಜನೆಗಳಡಿ 80,000 ಕೋಟಿ ರೂ. ಸೇರಿದಂತೆ ಒಟ್ಟು 3 ಲಕ್ಷ ಕೋಟಿ ರೂ. ನೀಡಿದರೂ ಸವಲತ್ತುಗಳು ತಳಮಟ್ಟದ ವರೆಗೆ ತಲುಪುತ್ತಿಲ್ಲ. ಲೆಕ್ಕ ಕೇಳಿದರೂ ನೀಡುತ್ತಿಲ್ಲ. ಎಲ್ಲ ಕ್ಷೇತ್ರಗಳಲ್ಲಿ ವಿಫಲವಾಗಿರುವುದರಿಂದ ಜನರಲ್ಲಿ ತೀವ್ರ ಆಕ್ರೋಶವಿದೆ.
Advertisement
ಕಳಂಕಿತರೆಂಬ ಆರೋಪ ಹೊತ್ತವರಿಗೆ ಟಿಕೆಟ್ ನೀಡಲಾಗಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಏನು ಹೇಳುವಿರಿ?ಯಡಿಯೂರಪ್ಪ ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಾಗ ಮುಖ್ಯಮಂತ್ರಿ ಸ್ಥಾನ ತೊರೆದಿದ್ದರು. ಬಳಿಕ ಎಲ್ಲ ಪ್ರಕರಣವನ್ನು ಹೈಕೋರ್ಟ್ ವಜಾಗೊಳಿಸಿದೆ. ವಿಚಾರಣೆ ಕೈಬಿಟ್ಟಿದೆ. ರೆಡ್ಡಿ ಸಹೋದರರ ವಿರುದ್ಧವೂ ಯಾವುದೇ ಪ್ರಕರಣಗಳಿಲ್ಲ. ಅಪಪ್ರಚಾರ ಮಾಡಿದರೆ ಜನರಿಗೆ ಅರ್ಥವಾಗಲಿದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರು 40 ಲಕ್ಷ ರೂ. ಮೊತ್ತದ ವಾಚ್ ಧರಿಸಿ ಓಡಾಡುವಾಗ ನಾಚಿಕೆಯಾಗುವುದಿಲ್ಲವೇ. ಪ್ರತ್ಯೇಕ ಧರ್ಮ ಮಾನ್ಯತೆಗೆ ಸರ್ಕಾರ ಪ್ರಸ್ತಾಪ ಸಲ್ಲಿಸಿರುವುದು ಬಿಜೆಪಿಗೆ ಹಿನ್ನಡೆಯಾಗುವುದೇ?
ಕಾಂಗ್ರೆಸ್ ಸರ್ಕಾರ ಅಧಿಕಾರಾವಧಿಯ ಕೊನೆಯ ಹಂತದಲ್ಲಿ ಪ್ರಸ್ತಾಪಿಸಿರುವುದರ ಹಿಂದಿನ ಕಾಳಜಿ ಏನು ಎಂಬುದು ಜನರಿಗೆ ಗೊತ್ತಾಗಲಿದೆ. ಹಿಂದಿನ ಯುಪಿಎ ಸರ್ಕಾರ ಪ್ರಸ್ತಾವ ತಿರಸ್ಕರಿಸಿದ್ದು, ಮತಬ್ಯಾಂಕ್‌ಗಾಗಿ ಈ ಪ್ರಯತ್ನ ನಡೆಸಿದೆ ಎಂಬುದು ಗೊತ್ತಾಗುತ್ತದೆ. ಮಾತೆ ಮಹಾದೇವಿ ಸೇರಿದಂತೆ ಇತರೆ ಕೆಲವರು ಹಿಂದಿನಿಂದಲೂ ಕಾಂಗ್ರೆಸ್ ಪರ ಧೋರಣೆ ಹೊಂದಿರುವುದು ಕಂಡುಬರುತ್ತದೆ. ಸೋಷಿಯಲ್ ಎಂಜಿನಿಯರಿಂಗ್ ಪ್ರಯೋಗ ರಾಜ್ಯದಲ್ಲೂ ನಡೆದಿದೆಯೇ?
ಸೋಷಿಯಲ್ ಎಂಜಿನಿಯರಿಂಗ್‌ನ ಅಗತ್ಯವೇ ಇಲ್ಲದಂತೆ ಆಡಳಿತ ವಿರೋಧಿ ಅಲೆ ಇದೆ. ಸಮಾಜದ ಆಯ್ದ ವರ್ಗವಲ್ಲದೆ, ಎಲ್ಲ ವರ್ಗದವರಲ್ಲೂ ಕಾಂಗ್ರೆಸ್ ವಿರುದ್ಧ ತೀವ್ರ ಆಕ್ರೋಶವಿದೆ. ಅನಂತಕುಮಾರ ಹೆಗಡೆ ಅವರ ಹೇಳಿಕೆಯಿಂದ ದಲಿತ ಮತ ಸೆಳೆಯಲು ಹಿನ್ನಡೆಯಾಗಿದೆಯೇ?
ದಲಿತ ಬಲ, ಎಡಗೈ ಪಂಗಡಗಳ ಮುಖಂಡರು, ಸಂಘಟನೆಗಳು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದು, ತಳಮಟ್ಟದಲ್ಲಿ ಈ ರೀತಿಯ ಭಾವನೆ ಇಲ್ಲ. ರಾಜ್ಯದಲ್ಲಿ ವಿಧಾನಸಭೆ, ಲೋಕಸಭೆ ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳೇ ಹೆಚ್ಚು ಗೆದ್ದಿದ್ದಾರೆ. ಬಿಜೆಪಿಯ ರಾಜಕೀಯ ಸಮಾವೇಶಗಳನ್ನು ಹಿಂದೂ ಸಮಾವೇಶಗಳಾಗಿ ನಡೆಸಲಾತ್ತಿದೆಯೇ?
ಧರ್ಮ ಆಧಾರಿತವಾಗಿ ಚುನಾವಣೆಗಳನ್ನು ಬಿಜೆಪಿ ನಡೆಸುವುದಿಲ್ಲ. ನೀವು ಕೂಡ ಆ ರೀತಿ ನೋಡಬಾರದು. ಅದು ನಮ್ಮ ಸಂವಿಧಾನದ ಮೂಲ ಆಶಯ. ಮತದಾರರನ್ನು ಮತದಾರರಂತೆ ನೋಡಬೇಕೆ ಹೊರತು ಧರ್ಮದ ಆಧಾರದಲ್ಲಿ ನೋಡಬಾರದು. ಒಂದು ಲಕ್ಷ ರೂ.ವರೆಗಿನ ಸಾಲ ಮನ್ನಾ ಭರವಸೆ ಚುನಾವಣೆ ಗೆಲ್ಲುವ ತಂತ್ರವೇ?
ರೈತರ ಸಾಲ ಮನ್ನಾ ಎನ್ನುವುದು ಚುನಾವಣೆಯನ್ನು ಗೆಲ್ಲುವ ಮಾಧ್ಯಮವಲ್ಲ. ರೈತರ ಸ್ಥಿತಿ ಅವಲೋಕಿಸಿ ಪಕ್ಷ ನೀತಿ ರೂಪಿಸಿ ನಂತರ ಸರ್ಕಾರದ ಮೂಲಕ ಕಾರ್ಯಗತಗೊಳಿಸುತ್ತದೆ. ಯುಪಿ, ಮಹಾರಾಷ್ಟ್ರಗಳಲ್ಲೂ ಬಿಜೆಪಿ ಸರ್ಕಾರ ರಚನೆಯಾದ ಬಳಿಕವೇ ಸಾಲ ಮನ್ನಾ ಮಾಡಲಾಗಿದೆ. ಅಗತ್ಯತೆ ಆಧರಿಸಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗುತ್ತಿದೆ. ರಾಜ್ಯದಲ್ಲೂ ಬಿಜೆಪಿ ಸರ್ಕಾರ ರಚನೆಯಾದರೆ ಸಹಕಾರಿ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಲಕ್ಷ ರೂ.ವರೆಗೆ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಲಾಗಿದೆ. ಈಗಲೂ “ಮಿಷನ್- 150′ ತಲುಪುವ ವಿಶ್ವಾಸವಿದೆಯೇ?
ಮೊದಲಿನಿಂದಲೂ “ಮಿಷನ್- 150′ ಗುರಿ ತಲುಪುವ ವಿಶ್ವಾಸವಿದ್ದು, ಅದೇ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. 2019ಕ್ಕೆ ಲೋಕಸಭಾ ಚುನಾವಣೆ ನಡೆಯಲಿದ್ದು, ದೇಶದಲ್ಲಿ ಬಿಜೆಪಿ ಸ್ಥಿತಿಗತಿ?
ಬಿಜೆಪಿಯು ದೇಶದ ಅಭಿವೃದ್ಧಿಗೆ ಆದ್ಯತೆ ನೀಡಿದ್ದು ಪೂರಕ ಕಾರ್ಯಕ್ರಮ ಜಾರಿಗೊಳಿಸಿದೆ. ಬೆಳಕು ಕಾಣದ ಗ್ರಾಮಗಳಿಗೆ ವಿದ್ಯುತ್, ಶೌಚಾಲಯ, ಉಚಿತ ಗ್ಯಾಸ್ ಸಿಲಿಂಡರ್, ಆರೋಗ್ಯ ಸೇವೆ ಸೇರಿದಂತೆ ಒಟ್ಟು 22 ಕೋಟಿ ಕುಟುಂಬಗಳಿಗೆ ಸೌಲಭ್ಯ ಕಲ್ಪಿಸುವಲ್ಲಿ ಯಶಸ್ವಿಯಾಗಿದೆ. ಇದು ಜನರಲ್ಲಿ ಧನಾತ್ಮಕ ಭಾವನೆ ಮೂಡಿಸಿರುವ ವಿಶ್ವಾಸವಿದೆ. ಎಐಸಿಸಿ ಅಧ್ಯಕ್ಷರಾಗಿ ರಾಹುಲ್‌ಗಾಂಧಿ ಆಯ್ಕೆಯಾಗಿರುವ ಸಂದರ್ಭದಲ್ಲಿ ಆ ಪಕ್ಷವನ್ನು ಹೇಗೆ ನೋಡುತ್ತೀರಿ?
ಕಾಂಗ್ರೆಸ್ ಪುರಾತನ, ದೊಡ್ಡ ಪಕ್ಷ. ಆದರೆ ಕ್ರಮೇಣ ಸೊರಗುತ್ತಿದೆ. ಸದ್ಯ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಇದ್ದು, ಮೇ 15ರ ಬಳಿಕ ಒಂದು ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳಲಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳೇ ಎದುರಾಳಿಯೇ?
250 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ- ಕಾಂಗ್ರೆಸ್ ನಡುವೆಯೇ ಹಣಾಹಣಿ ಇರಲಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಶೇ.50ಕ್ಕೂ ಹೆಚ್ಚು ಮತಗಳ ಪಾಲು ಪಡೆಯಲು ಸಿದ್ಧತೆ ನಡೆಸಲಾಗಿದೆ. ಬಿಜೆಪಿ ಬೆಂಬಲಿಗರೆನ್ನಲಾದ ಕೆಳ ವರ್ಗ, ಮಧ್ಯಮ ಕೆಳ ವರ್ಗದವರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂಬ ಭಾವನೆಯಿದೆ?
2014ರ ನಂತರ ನಡೆದ ಬಹುತೇಕ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಗೆದ್ದಿದೆ. ಈ ವರ್ಗಗಳು ಮಾತ್ರವಲ್ಲದೆ ಇತರೆ ವರ್ಗದ ಮತದಾರರ ಬೆಂಬಲವೂ ಸೇರ್ಪಡೆಯಾಗಿದೆ. – ಎಂ.ಕೀರ್ತಿಪ್ರಸಾದ್