ಹೈದರಾಬಾದ್: ವಸಾಹತುಶಾಹಿಯ ಕುರುಹುಗಳನ್ನು ಅಳಿಸಿಹಾಕುವ ನಿಟ್ಟಿನಲ್ಲಿ ಹೆಜ್ಜೆ ಹಾಕಿರುವ ಬಿಜೆಪಿ, ದೇಶದ ಪ್ರಮುಖ ನಗರಗಳು, ಸ್ಥಳಗಳ ಹೆಸರನ್ನು ಮರುನಾಮಕರಣಗೊಳಿಸಿದೆ. ಇದರ ಮುಂದುವರಿದ ಭಾಗ ಎಂಬಂತೆ ತೆಲಂಗಾಣದ ದಿನಪತ್ರಿಕೆಗಳಲ್ಲಿ ಬಿಜೆಪಿ ನೀಡಿರುವ ಜಾಹೀರಾತಿನಲ್ಲಿ ಕರೀಂನಗರದ ಹೆಸರನ್ನು ಕರಿನಗರ ಎಂದು ಉಲ್ಲೇಖೀಸಲಾಗಿದೆ.
ತೆಲಂಗಾಣದಲ್ಲಿ ಬಿಜೆಪಿ ನಡೆಸುತ್ತಿರುವ “ಪ್ರಜಾ ಸಂಗ್ರಾಮ ಯಾತ್ರೆ’ಯ ಸಮಾರೋಪ ಸಮಾರಂಭ ಗುರುವಾರ ನಡೆದಿದೆ. ಅದರಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್, “ಇದು ಅಕ್ಷರ ದೋಷವಲ್ಲ. ಐತಿಹಾಸಿಕವಾಗಿ ನಗರದ ಹೆಸರು “ಕರಿನಗರ’ ಆಗಿದೆ. ಆದರೆ ನಿಜಾಮರು ಅದನ್ನು ಕರೀಂನಗರ ಎಂದು ಬದಲಾಯಿಸಿದರು,’ ಎಂದು ಹೇಳಿದರು.
“ಕಲ್ಕತ್ತಾ, ಕೋಲ್ಕತಾ ಆಗಬೇಕಾದರೆ, ಮದ್ರಾಸ್ ಚೆನ್ನೈ ಆಗಬೇಕಾದರೆ, ಕರೀಂನಗರ ಏಕೆ ಕರಿನಗರ ಆಗಬಾರದು. ಕರಿ ಎಂದರೆ ಆನೆ. ನಿಜಾಮಾಬಾದ್ ಈ ಮೊದಲು ಇಂದೂರ್ ಆಗಿತ್ತು. ಅದೇ ರೀತಿ ಮೆಹಬೂಬ್‌ನಗರವು ಪಲಮೂರು ಆಗಿತ್ತು. ನಿಜವಾದ ಐತಿಹಾಸಿಕ ಹೆಸರು ಮರಕಳಿಸಬೇಕು ಎಂಬುದು ಪಕ್ಷದ ಯೋಜನೆಯಾಗಿದೆ,’ ಎಂದರು.
ಸಿಎಂ ಕೆ.ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ಸರ್ಕಾರ ಭ್ರಷ್ಟಾಚಾರದಲ್ಲಿ ನಿರತವಾಗಿದೆ. ಕೆಸಿಆರ್‌ಗೆ ಜನರು ಗುಡ್‌ಬೈ ಹೇಳುವ ಕಾಲ ಬಂದಿದೆ. ಅವರ ಬಿಆರ್‌ಎಸ್(ಭಾರತ್ ರಾಷ್ಟ್ರ ಸಮಿತಿ) ಪಕ್ಷ ಶೀಘ್ರ ವಿಆರ್‌ಎಸ್(ಸ್ವಯಂ ನಿವೃತ್ತಿ) ಪಡೆಯಲಿದೆ.
– ಜೆ.ಪಿ.ನಡ್ಡಾ, ಬಿಜೆಪಿ ಅಧ್ಯಕ್ಷ