ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸಂಸದರಿಗೆ ಅವರ ಕ್ಷೇತ್ರದ ವ್ಯಾಪ್ತಿಗೆ ಬರುವ ವಿಧಾನಸಭೆ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿ ವಹಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಅದಕ್ಕಾಗಿ ಪಾದಯಾತ್ರೆ, ಬೈಕ್ ರ್ಯಾಲಿಗಳನ್ನು ಆಯೋಜಿಸುವಂತೆ ಸೂಚನೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆ ಕುಶಾಲನಗರದಿಂದ ಕಾರವಾರದವರೆಗೆ ರಾಜ್ಯ ಬಿಜೆಪಿ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ಪಾದಯಾತ್ರೆಯಲ್ಲಿ ಕೊಂಚ ಬದಲಾವಣೆಯಾಗಿದ್ದು, ಪಾದಯಾತ್ರೆಯ ಜವಾಬ್ದಾರಿಯನ್ನು ಆಯಾ ಭಾಗದ ಸಂಸದರಿಗೆ ವಹಿಸಲಾಗಿದೆ. ಇದರ ಜತೆಗೆ ಇತರೆ ಲೋಕಸಭಾ ಕ್ಷೇತ್ರಗಳಲ್ಲಿ ಆಯಾ ಸಂಸದರು ಬೈಕ್ ರ್ಯಾಲಿಗಳನ್ನು ಆಯೋಜಿಸುವಂತೆ ಅಮಿತ್ ಶಾ ಸೂಚನೆ ನೀಡಿದ್ದಾರೆ.
ದೆಹಲಿಯಲ್ಲಿ ಗುರುವಾರ ರಾಜ್ಯ ಬಿಜೆಪಿ ಸಂಸದರ ಜತೆ ಸಮಾಲೋಚನೆ ನಡೆಸಿದ ಅಮಿತ್ ಶಾ, ವಿಧಾನಸಭೆ ಚುನಾವಣೆ ಎಂಬ ಕಾರಣಕ್ಕೆ ಸಂಸದರು ನಿರ್ಲಕ್ಷ್ಯ ಮಾಡುವಂತಿಲ್ಲ. ತಮ್ಮ ಕ್ಷೇತ್ರದ ವ್ಯಾಪ್ತಿಗೆ ಬರುವ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡುವ ಜವಾಬ್ದಾರಿ ನೋಡಿಕೊಳ್ಳಬೇಕು. ಅದಕ್ಕಾಗಿ ತಕ್ಷಣದಿಂದಲೇ ಕಾರ್ಯಪ್ರವೃತ್ತರಾಗಬೇಕು ಎಂದು ತಾಕೀತು ಮಾಡಿದ್ದಾರೆ.
ಹೊನ್ನಾವರದಲ್ಲಿ ಹಿಂದೂಪರ ಕಾರ್ಯಕರ್ತ ಪರೇಷ್ ಮೇಸ್ತಾ ಹತ್ಯೆಯಾದ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿ ಕೊಡಗು ಜಿಲ್ಲೆಯ ಕುಶಾಲನಗರದಿಂದ ಉತ್ತರ ಕನ್ನಡ ಜಿಲ್ಲೆಯ ಕಾರವಾರದವರೆಗೆ ಪಾದಯಾತ್ರೆ ನಡೆಸಲು ಬಿಜೆಪಿ ತೀರ್ಮಾನಿಸಿತ್ತು. ಆದರೆ, ಪರಿವರ್ತನಾ ರ್ಯಾಲಿ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಿರಲಿಲ್ಲ. ಇದೀಗ ಆ ಪಾದಯಾತ್ರೆ ನಡೆಸುವಂತೆ ಸಂಸದರಿಗೆ ಅಮಿತ್ ಶಾ ಸೂಚಿಸಿದ್ದಾರೆ. ಈ ಪೈಕಿ ಕೊಡಗು ಜಿಲ್ಲೆಯ ಉಸ್ತುವಾರಿಯನ್ನು ಮೈಸೂರು ಸಂಸದ ಪ್ರತಾಪ್ ಸಿಂಹ, ದಕ್ಷಣ ಕನ್ನಡ ಜಿಲ್ಲೆ ಉಸ್ತುವಾರಿಯನ್ನು ಮಂಗಳೂರು ಸಂಸದ ನಳಿನ್‌ಕುಮಾರ್ ಕಟೀಲ್, ಉಡುಪಿ ಜಿಲ್ಲೆ ಉಸ್ತುವಾರಿಯನ್ನು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮತ್ತು ಉತ್ತರ ಕನ್ನಡ ಜಿಲ್ಲೆ ಉಸ್ತುವಾರಿಯನ್ನು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರಿಗೆ ವಹಿಸಿದ್ದಾರೆ.
ಪಾದಯಾತ್ರೆ ಮಧ್ಯೆ ಒಂದು ಅಥವಾ ಎರಡು ಕಡೆ ಬೃಹತ್ ಸಮಾವೇಶಗಳನ್ನು ನಡೆಸಬೇಕು ಎಂದೂ ಹೇಳಿರುವ ಅಮಿತ್ ಶಾ, ಸಂಸತ್ ಅಧಿವೇಶನ ಮತ್ತು ನಾಯಕರ ಲಭ್ಯತೆ ಆಧರಿಸಿ ದಿನಾಂಕ ನಿಗದಿಪಡಿಸುವಂತೆ ಸೂಚಿಸಿರುವುದಾಗಿ ತಿಳಿದುಬಂದಿದೆ.
ಉಳಿದಂತೆ ಇತರೆ ಸಂಸದರು ತಮ್ಮ ಕ್ಷೇತ್ರದಲ್ಲಿ ಬೈಕ್ ರ್ಯಾಲಿ ಸೇರಿದಂತೆ ವಿವಿಧ ಸಂಘಟನಾ ಚಟುವಟಿಕೆಗಳನ್ನು ನಡೆಸಬೇಕು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಪಕ್ಷದ ಶಾಸಕರು, ಅಭ್ಯರ್ಥಿ ಆಕಾಂಕ್ಷಿಗಳು ವಿಧಾನಸಬೆ ಚುನಾವಣೆ ಮೇಲೆ ಗಮನಹರಿಸಿರುವುದರಿಂದ ಸಂಸದರು ಮತ್ತು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಸೋತವರು ಪಕ್ಷ ಸಂಘಟನೆ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದೂ ನಿರ್ದೇಶನ ನೀಡಿರುವುದಾಗಿ ಮೂಲಗಳು ತಿಳಿಸಿವೆ.
ಸಂಸದರಿಗಿದು ಪರೀಕ್ಷೆ:
ಬಹುತೇಕ ಸಂಸದರು ಮುಂದಿನ ಲೋಕಸಭೆ ಚುನಾವಣೆ ಮೇಲೂ ಕಣ್ಣಿಟ್ಟಿದ್ದು, ಅವರಿಗೆ ಅಮಿತ್ ಶಾ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿ ವಹಿಸುವ ಮೂಲಕ ಅವರನ್ನು ಪರೀಕ್ಷೆಗೊಳಪಡಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.