Advertisement

ಬಿಜೆಪಿ ಸಂಸದರಿಗೆ ತವರು ರಾಜಕಾರಣದಾಸೆ

03:45 AM Feb 13, 2017 | Harsha Rao |

ಬೆಂಗಳೂರು: ಸಂಸದರಾಗಿ ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯರಾಗಿರುವ ಕರ್ನಾಟಕದ ಬಹುಪಾಲು ಬಿಜೆಪಿ ಸಂಸದರು ರಾಜ್ಯ ರಾಜಕಾರಣಕ್ಕೆ ಮರಳಲು ಇಚ್ಛಿಸಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತಮಗೆ ಟಿಕೆಟ್‌ ನೀಡುವಂತೆ ಪಕ್ಷದ ಹೈಕಮಾಂಡ್‌ ಮೇಲೆ ಒತ್ತಡ ಹೇರತೊಡಗಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

Advertisement

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಿರುವುದನ್ನು ಊಹಿಸಿರುವ ಪಕ್ಷದ
ಸಂಸದರು ವಿಧಾನಸಭಾ ಟಿಕೆಟ್‌ಗಾಗಿ ದೆಹಲಿಯ ಬಿಜೆಪಿ ವರಿಷ್ಠರ ಬಳಿ ಈಗಿನಿಂದಲೇ ಲಾಬಿ ಆರಂಭಿಸಿದ್ದಾರೆ. ಕೆಲ
ಕೇಂದ್ರ ಸಚಿವರು ಹಾಗೂ ಶೇ.70ರಷ್ಟು ಹಿರಿಯ ಸಂಸದರ ಹೆಸರುಗಳು ಕೇಳಿಬಂದಿವೆ. ಇದರಲ್ಲಿ ಕರಾವಳಿ ಕರ್ನಾಟಕ,
ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದ ಸಂಸದರ ಹೆಸರು ಪ್ರಮುಖವಾಗಿವೆ ಎಂದು ಹೇಳಲಾಗಿದೆ.

ಶಿವಮೊಗ್ಗದ ಸಂಸದರಾಗಿರುವ ಬಿ.ಎಸ್‌.ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಮುಖ್ಯಮಂತ್ರಿ ಅಭ್ಯರ್ಥಿ
ಎಂದು ಹೈಕಮಾಂಡ್‌ನಿಂದ ಘೋಷಿಸಲ್ಪಟ್ಟಿರುವುದರಿಂದ ಅವರಿಗೆ ಸಹಜವಾಗಿಯೇ ಆದ್ಯತೆಯಲ್ಲಿ ಟಿಕೆಟ್‌ ಸಿಗಲಿದ್ದು,
ಉಳಿದ ಸಂಸದರು ಮಾತ್ರ ಈಗಿನಿಂದಲೇ ಶಾಸಕ ಸ್ಥಾನದ ಟಿಕೆಟ್‌ಗಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಒಟ್ಟು 17 ಬಿಜೆಪಿ ಸಂಸದರ ಪೈಕಿ 12 ಸಂಸದರು ವಿಧಾನಸಭಾ ಚುನಾವಣೆಗೆ ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಕೇಂದ್ರ ಸಚಿವರಾಗಿರುವವರು, 3ರಿಂದ 5 ಬಾರಿ ಸಂಸದರಾದರೂ, ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದೆ
ಅಸಮಾಧಾನಗೊಂಡವರು ಹಾಗೂ ಅನಿವಾರ್ಯವಾಗಿ ಸಂಸತ್‌ ಚುನಾವಣೆಗೆ ಸ್ಪರ್ಧಿಸಿ ಗೆದ್ದವರು ವಿಧಾನಸಭಾ
ಚುನಾವಣೆಯಲ್ಲಿ ಶಾಸಕರಾಗಿ ಸ್ಪರ್ಧಿಸಲು ಉತ್ಸುಕತೆ ತೋರಿದ್ದು, ತಮಗೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ಖಾತರಿ ಪಡಿಸುವಂತೆ ಪಕ್ಷದ ವರಿಷ್ಠರ ಬಳಿ ಮನವಿ ಮಾಡತೊಡಗಿದ್ದಾರೆ.

ಮುಂಬರುವ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ತಾವು ಸಚಿವರಾಗಬಹುದು,
ಅವಕಾಶ ಸಿಕ್ಕರೆ ಉಪಮುಖ್ಯಮಂತ್ರಿಗಳಾಗಬಹುದು, ಅದೃಷ್ಟವಿದ್ದರೆ ಭವಿಷ್ಯದಲ್ಲಿ ಮುಖ್ಯಮಂತ್ರಿಯೂ ಆಗಬಹುದು ಎನ್ನುವ ರಾಜಕೀಯ ಲೆಕ್ಕಾಚಾರ ಹಿನ್ನೆಲೆಯಲ್ಲಿ ಸಂಸದರು ಪಕ್ಷದ ಟಿಕೆಟ್‌ಗಾಗಿ ಈಗಿನಿಂದಲೇ ಹೈಕಮಾಂಡ್‌ನ‌ ಒಪ್ಪಿಗೆಗಾಗಿ ಕಾಯತೊಡಗಿದ್ದಾರೆ.

Advertisement

ಬಿಜೆಪಿ ಹಲವು ಸಂಸದರಿಗೆ ಸೇವಾ ಹಿರಿತನವಿದ್ದರೂ, ಜನಪ್ರಿಯತೆ ಇದ್ದರೂ ಹಲವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ತೊರೆಯದಿರುವುದು ಅತೃಪ್ತಿ ಮೂಡಿಸಿದೆ. ಆದರೆ, ಬಹಿರಂಗವಾಗಿ ಪ್ರಧಾನಿ ಮೋದಿ ಆಡಳಿತ ವಿರುದ್ಧ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ವಿರುದ್ಧ ಅಪಸ್ವರ ಎತ್ತಿ ಪಕ್ಷದಲ್ಲಿ ಉಳಿದುಕೊಳ್ಳುವುದು ಕಷ್ಟ. ಈ ಹಿನ್ನೆಲೆಯಲ್ಲಿ
ಲೋಕಸಭೆಗಿಂತ ವಿಧಾನಸಭೆ ರಾಜಕೀಯವೇ ಉತ್ತಮ ಎನ್ನುವ ಅಭಿಪ್ರಾಯಕ್ಕೆ ಬಿಜೆಪಿಯ ಅರ್ಧಕ್ಕಿಂತ ಹೆಚ್ಚು
ಲೋಕಸಭಾ ಸದಸ್ಯರು ಬಂದಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡು ಲೋಕಸಭೆ ಚುನಾವಣೆಯಲ್ಲಿ ಗೆದ್ದು ಸಂಸದರಾಗಿರುವವರು ಸಹ ಮರಳಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್‌ ಪಡೆದು, ಬಿಜೆಪಿ ಸರ್ಕಾರ ಬಂದರೆ ಸಚಿವರಾಗಬಹುದು ಎನ್ನುವ ದೂರದೃಷ್ಟಿಯಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಹೈಕಮಾಂಡ್‌ನ‌ ಮನವೊಲಿಸಲು ತೊಡಗಿದ್ದಾರೆ.

ಶಾಸಕ ಸ್ಥಾನಕ್ಕೆ ಟಿಕೆಟ್‌ ಆಕಾಂಕ್ಷಿಗಳಾಗಿರುವ ಸಂಸದರು ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥಯವನ್ನು
ತಾವು ಹೊಂದಿದ್ದೇವೆ ಮತ್ತು ತಮ್ಮ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಉಳಿದ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು
ಬರುವ ಶಕ್ತಿ ನಮಗಿದೆ. ಟಿಕೆಟ್‌ ಖಾತರಿ ಪಡಿಸಿದರೆ ಈಗಿನಿಂದಲೇ ಕ್ಷೇತ್ರವನ್ನು ಅಂತಿಮ ಮಾಡಿಕೊಂಡು ವಿಧಾನಸಭಾ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳಲು ಹೆಚ್ಚು ಅನುಕೂಲವಾಗಲಿದೆ ಎಂದು ಬಿಜೆಪಿ ಹೈಕಮಾಂಡ್‌ ಬಳಿ ಮೊರೆ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next