ಮಸ್ಕಿ: ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ಅಡ್ಡಿಯಾದ ಬಿ.ವೈ. ವಿಜಯೇಂದ್ರ ಮತ್ತು ಅವರ ಜತೆ ಹಾಸನ, ಶಿವಮೊಗ್ಗ, ಬೆಂಗಳೂರು ಸೇರಿ ಹಲವು ಕಡೆಯಿಂದ ಬಂದ ಅವರ ಬೆಂಬಲಿಗರನ್ನು ಕೂಡಲೇ ಮಸ್ಕಿಯಿಂದ ಹೊರ ಹಾಕಬೇಕು ಎಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದರು.
ಉಪಚುನಾವಣೆಯಲ್ಲಿ ಮತ ಪಡೆಯಲು ಮತದಾರರಿಗೆ ಹಣ ಹಂಚುತ್ತಿರುವ ಬಿಜೆಪಿ ವಿರುದ್ಧ ಶುಕ್ರವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಮುಖಂಡರು, ಸಂತೆ ಬಜಾರ್ ಮಾರ್ಗದ ತಾಪಂ ಕಚೇರಿ ಮುಂದೆ ಎರಡ್ಮೂರು ತಾಸು ಸಾಂಕೇತಿಕ ಧರಣಿ ನಡೆಸಿದರು. ಕನಕ ವೃತ್ತದಿಂದ ಚುನಾವಣಾ ಕಚೇರಿಗೆ ಕೆಪಿಸಿಸಿ ಕಾರ್ಯಧ್ಯಕ್ಷ ಧ್ರುವನಾರಾಯಣ ನೇತೃತ್ವದಲ್ಲಿ ಬಂದ ಕಾಂಗ್ರೆಸ್ ಮುಖಂಡರು, ಬಿಜೆಪಿ ಸರ್ಕಾರ, ಪ್ರತಾಪಗೌಡ ಪಾಟೀಲ ಮತ್ತು ವಿಜಯೇಂದ್ರ ವಿರುದ್ಧ ಧಿಕ್ಕಾರ ಹಾಕಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಮಾತನಾಡಿ, ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಅಕ್ರಮವಾಗಿ ಹಣವನ್ನು ತಮ್ಮ ಕಾರ್ಯಕರ್ತರ ಮೂಲಕ ಹಂಚುತ್ತಿದ್ದಾರೆ. ಹಣ ಹಂಚುತ್ತಿರುವ ದೃಶ್ಯಗಳನ್ನು ಸಾಕ್ಷಿಯಾಗಿ ಕೊಟ್ಟರು ಯಾವುದೇ ಕ್ರಮ ಜರುಗಿಸದೇ ಚುನಾವಣೆ ಆಯೋಗ ಹಾಗೂ ಪೊಲೀಸರು ಕಣ್ಣು ಮುಚ್ಚಿ ಕುಳಿತಿದೆ. ಅಕ್ರಮ ಹಣ ಹಂಚಿಕೆ ಮಾಡುತ್ತಿದ್ದರೂ ಅದನ್ನು ತಡೆಯುವಲ್ಲಿ ವಿಫಲರಾದ ಬಳಗಾನೂರು ಮತ್ತು ತುರ್ವಿಹಾಳ ಸಬ್ ಇನ್ಸ್‌ಪೆಕ್ಟರ್ ಅವರನ್ನು ಅಮಾನತು ಮಾಡುವಂತೆ ಒತ್ತಾಯಿಸಿದರು.
ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರ ಮಾತನಾಡಿ, ಭ್ರಷ್ಟ ಬಿಜೆಪಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮಾಜಿ ಸಚಿವ ಕೃಷ್ಣ ಭೈರಗೌಡ
ಮಾತನಾಡಿ, ಬಿಜೆಪಿ ಸರ್ಕಾರ 20% ಸರ್ಕಾರ. ಈ ಹಣದಲ್ಲಿ ಮತದಾರರಿಗೆ ಹಣ ಹಂಚಲು ಬಂದಿದ್ದಾರೆ ಎಂದು ಆರೋಪಿಸಿದರು.
ಶಿವರಾಜ ತಂಗಡಗಿ ಮಾತನಾಡಿ, ಹಣ ಹಂಚಿಕೆ ಮಾಡಿದ ಹಾಸನ, ಶಿವಮೊಗ್ಗ ಮತ್ತು ಬೆಂಗಳೂರು ಭಾಗದ ಬಿಜೆಪಿ ಕಾರ್ಯಕರ್ತರನ್ನು ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದರೆ ಅವರ ಮೇಲೆ ದೂರು ದಾಖಲಿಸುವುದು ಬಿಟ್ಟು ಅವರನ್ನು ಪೊಲೀಸ್ ವಾಹನದಲ್ಲಿ ಬಿಟ್ಟು ಬಂದಿದ್ದಾರೆ ಎಂದು ಆರೋಪಿಸಿದರು.
ಬಸವರಾಜ ರಾಯರಡ್ಡಿ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ನಾಯಕ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ, ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರ, ರವಿ ಬೋಸರಾಜ, ಎಚ್.ಬಿ.ಮುರಾರಿ, ಪಾಮಯ್ಯ ಮುರಾರಿ, ಸಿದ್ಧಣ್ಣ ಹೂವಿನಬಾವಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.