Advertisement

Rahul Gandhi “ದೇಶದ ಚುನಾವಣೆ ಮೇಲೆ ಬಿಜೆಪಿ, ಮೋದಿ ನಿಯಂತ್ರಣ’

01:02 AM Sep 11, 2024 | Team Udayavani |

ವಾಷಿಂಗ್ಟನ್‌: ಭಾರತದಲ್ಲಿ ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯು ಸಂಪೂರ್ಣವಾಗಿ ನಿಯಂತ್ರಿತ ವಾಗಿತ್ತು. ಬಿಜೆಪಿ ಬಯಸಿದಂತೆ ಚುನಾವಣ ಆಯೋಗ ಚುನಾವಣೆಯನ್ನು ನಡೆಸಿತು ಎಂದು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಮಂಗಳವಾರ ಗಂಭೀರ ಆರೋಪ ಮಾಡಿದ್ದಾರೆ.

Advertisement

ಅಮೆರಿಕದ ಜಾರ್ಜ್‌ಟೌನ್‌ ವಿಶ್ವ ವಿದ್ಯಾ ನಿಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಚುನಾವಣೆ ನ್ಯಾಯಸಮ್ಮತವಾಗಿ ನಡೆದಿದ್ದರೆ ಬಿಜೆಪಿ 240 ಸ್ಥಾನಗಳನ್ನೂ ಗೆಲ್ಲುತ್ತಿರಲಿಲ್ಲ. ಬಿಜೆಪಿ ತನ್ನ ಯೋಚನೆ ಮತ್ತು ಯೋಜನೆಗಳನ್ನು ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಯಲ್ಲಿ ಪ್ರಚಾರ ಮಾಡುವುದಕ್ಕೆ ಬೇಕಾದ ಅವಕಾಶವನ್ನು ಚುನಾವಣ ಆಯೋಗ ಕಲ್ಪಿಸಿಕೊಟ್ಟಿತು. ಹೀಗಾಗಿ ಪ್ರಧಾನಿ ಮೋದಿ ತಮ್ಮ ಉದ್ದೇಶಗಳನ್ನು ನಿಖರವಾಗಿ ಜನರಿಗೆ ತಲುಪಿಸಿದರು ಎಂದು ಆರೋಪಿಸಿದರು.

ಬಿಜೆಪಿಗೆ ಆರ್ಥಿಕ ನೆರವು ಇತ್ತು
ಚುನಾವಣೆ ನಡೆಸುವ ಸಮಯದಲ್ಲಿ ಬಿಜೆಪಿಯ ಬಳಿ ಸಾಕಷ್ಟು ಹಣಕಾಸಿನ ಶಕ್ತಿ ಇತ್ತು. ಆದರೆ ಆ ಸಮಯದಲ್ಲಿ ಕಾಂಗ್ರೆಸ್‌ನ ಬ್ಯಾಂಕ್‌ ಖಾತೆಗಳನ್ನು ಅಮಾನತಿನಲ್ಲಿಟ್ಟು, ಹಣಕಾಸು ನೆರವು ದೊರೆಯದಂತೆ ಮಾಡಲಾಗಿತ್ತು. ಆದರೂ ಚುನಾವಣೆಯಲ್ಲಿ ನಾವು ಗಳಿಸಿದ ಸ್ಥಾನಗಳ ಬಗ್ಗೆ ನಮಗೆ ಹೆಮ್ಮೆಯಿದೆ ಎಂದು ರಾಹುಲ್‌ ಹೇಳಿದರು. ದೇಶದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು ಇಲ್ಲ ಎಂದು ದೂರಿದ ರಾಹುಲ್‌ ಗಾಂಧಿ, ಸಂಪೂರ್ಣ ಶಿಕ್ಷಣ ವ್ಯವಸ್ಥೆಯನ್ನು ಆರೆಸ್ಸೆಸ್‌ ನಿಯಂತ್ರಿಸುತ್ತದೆ ಎಂದರು. ಇದರ ಜತೆಗೆ ಮಾಧ್ಯಮಗಳನ್ನು ಮತ್ತು ತನಿಖಾ ಸಂಸ್ಥೆಗಳನ್ನೂ ನಿಯಂತ್ರಿಸಲಾಗುತ್ತದೆ ಎಂದು ನಾವು ಆರೋಪಿಸುತ್ತ ಬರುತ್ತಿದ್ದೇವೆ. ಆದರೆ ಜನರಿಗೆ ನಮ್ಮ ಕಳಕಳಿ ಅರ್ಥವಾಗುತ್ತಿಲ್ಲ ಎಂದು ವಿಷಾದಿಸಿದರು.

ರಾಹುಲ್‌ ಗಾಂಧಿ ಹೇಳಿಕೆಯನ್ನು ಸಮರ್ಥಿಸಿರುವ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಚುನಾವಣ ಆಯೋಗ ಬಿಜೆಪಿಗೆ ಸಹಾಯ ಮಾಡಿದೆ. ಹಲವು ರಾಜ್ಯಗಳಲ್ಲಿ ಚುನಾವಣೆಗೆ ಮುನ್ನ ಮೈತ್ರಿ ಮಾಡಿಕೊಳ್ಳಲು ಹಲವು ತಂತ್ರಗಳನ್ನು ಬಳಕೆ ಮಾಡಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ವಿದೇಶ ಪ್ರಯಾಣದ ವೇಳೆ ಭಾರತಕ್ಕೆ ಅವಮಾನ ಮಾಡುವುದನ್ನು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅಭ್ಯಾಸ ಮಾಡಿಕೊಂಡಿದ್ದಾರೆ. ಅವರು ದೇಶದ ವರ್ಚಸ್ಸಿಗೆ ಮಸಿ ಬಳಿಯುತ್ತಿದ್ದಾರೆ. ಇದೊಂದು ರಾಷ್ಟ್ರ ವಿರೋಧಿ ಕೃತ್ಯ.
-ಶಿವರಾಜ್‌ ಸಿಂಗ್‌ ಚೌಹಾಣ್‌, ಕೇಂದ್ರ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next