Advertisement

BJP: ಕಾಂಗ್ರೆಸ್‌ ಔತಣ ಕೂಟದಲ್ಲಿ ಬಿಜೆಪಿ ಶಾಸಕರು ಭಾಗಿ- ಹೋದದ್ದು ಭೋಜನಕ್ಕೆ ಎಂದ ಶಾಸಕರು!

01:03 AM Dec 15, 2023 | Team Udayavani |

ಬೆಳಗಾವಿ: ಪಕ್ಷ ಬಿಡುವುದಿಲ್ಲ ಎನ್ನುತ್ತಲೇ ಪಕ್ಷದ ವಿರುದ್ಧ ಮಾತನಾಡುತ್ತ ಕಾಂಗ್ರೆಸ್‌ ಜತೆಗೆ ಗುರುತಿಸಿಕೊಂಡಿದ್ದ ಮಾಜಿ ಸಚಿವ ಎಸ್‌.ಟಿ. ಸೋಮಶೇಖರ್‌ ಅವರು ಕಾಂಗ್ರೆಸ್‌ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಪಾಲ್ಗೊಳ್ಳುವ ಮೂಲಕ ಹೊಸ ಚರ್ಚೆಗೆ ಕಾರಣರಾಗಿದ್ದಾರೆ.

Advertisement

ಮತ್ತೂಬ್ಬ ಮಾಜಿ ಸಚಿವ ಶಿವರಾಂ ಹೆಬ್ಟಾರ್‌, ವಿಧಾನ ಪರಿಷತ್ತಿನ ಸದಸ್ಯರಾದ ಬಿಜೆಪಿಯ ಎಚ್‌. ವಿಶ್ವನಾಥ್‌ ಸೇರಿ 10 ಶಾಸಕರು ಈ ಕೂಟದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದ್ದು, ಲೋಕಸಭೆ ಚುನಾವಣೆಗೂ ಮುನ್ನ ಈ ಬೆಳವಣಿಗೆ ಹೊಸ ಚರ್ಚೆಗೆ ನಾಂದಿ ಹಾಡಿದೆ.

ಆದರೆ ನಾವು ಹೋಗಿದ್ದು ಔತಣಕೂಟಕ್ಕೇ ವಿನಾ ಕಾಂಗ್ರೆಸ್‌ ಶಾಸಕಾಂಗ ಸಭೆಗೆ ಅಲ್ಲ ಎಂದು ಈ ಎಲ್ಲರೂ ಸಮಜಾಯಿಷಿ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆಯಲು ಯತ್ನಿಸಿದ್ದಾರೆ.
ಬುಧವಾರ ರಾತ್ರಿ ಬೆಳಗಾವಿಯ ಖಾಸಗಿ ರೆಸಾರ್ಟ್‌ನಲ್ಲಿ ಕಾಂಗ್ರೆಸ್‌ ಶಾಸಕರಿಗಾಗಿ ಆಯೋಜಿಸಿದ್ದ ಭೋಜನ ಕೂಟದಲ್ಲಿ ಅನ್ಯಪಕ್ಷಗಳ ಹತ್ತು ಶಾಸಕರು ಭಾಗಿಯಾಗಿದ್ದರ ಬಗ್ಗೆ ಖುದ್ದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌ ಸ್ಪಷ್ಟಪಡಿಸಿದ್ದಾರೆ. ಹಲವು ಬಾರಿ ಕಾಂಗ್ರೆಸ್‌ ಸೇರ್ಪಡೆಯ ವದಂತಿಗಳು ಹರಡಿದಾಗ ತಳ್ಳಿ ಹಾಕಿದ್ದ ಮೂವರೂ ಕಾಂಗ್ರೆಸ್‌ ಔತಣ ಕೂಟದಲ್ಲಿ ಪಾಲ್ಗೊಳ್ಳುವ ಮೂಲಕ ಬಿಜೆಪಿಗೆ ಸ್ಪಷ್ಟ ಸಂದೇಶ ರವಾನಿಸಿದಂತಿದ್ದು, ತಾವೆಲ್ಲರೂ ಪಕ್ಷದಿಂದ ಒಂದು ಕಾಲು ಹೊರಗಿಟ್ಟಿರುವುದನ್ನು ಖಚಿತಪಡಿ ಸಿದಂತಿದೆ. ಅಷ್ಟೇ ಅಲ್ಲದೆ ಸಂಕ್ರಾಂತಿಯ ಅನಂತರ ಕಾಂಗ್ರೆಸ್‌ ಸೇರುವ ಗುಮಾನಿಯೂ ವ್ಯಕ್ತವಾಗಿದೆ.

ಅದರಲ್ಲೂ ಸೋಮಶೇಖರ್‌ ಅವರು ಬಿಜೆಪಿ ನಾಯಕರ ವಿರುದ್ಧವೇ ಆಗಾಗ ಹರಿಹಾಯ್ದಿದ್ದರಲ್ಲದೆ, ಜೆಡಿಎಸ್‌ ಜತೆಗಿನ ಮೈತ್ರಿಗೂ ವಿರೋಧ ವ್ಯಕ್ತಪಡಿಸಿದ್ದರು. ಬರಗಾಲದ ಸಂದರ್ಭದಲ್ಲೂ ಮುಸ್ಲಿಮರಿಗೆ 10 ಸಾವಿರ ಕೋಟಿ ರೂ. ಕೊಡುವ ಸಿಎಂ ಘೋಷಣೆ ವಿರುದ್ಧ ಬಿಜೆಪಿ ಸಭಾತ್ಯಾಗ ನಡೆಸಿದಾಗಲೂ ಸೋಮಶೇಖರ್‌ ಮಾತ್ರ ವಿಧಾನಸಭೆಯಲ್ಲೇ ಇದ್ದರು. ಅನಂತರ ಜಮೀರ್‌ ವಿರುದ್ಧ ನಡೆದ ಧರಣಿಯಲ್ಲಿ ಪಾಲ್ಗೊಂಡಿದ್ದರು. ಈಗ ಕಾಂಗ್ರೆಸ್‌ ಭೋಜನ ಕೂಟದಲ್ಲಿ ಪಾಲ್ಗೊಂಡಿರುವುದು ಚರ್ಚೆಗೆ ಕಾರಣವಾಗಿದೆ.

ನಾನು ಕಾಂಗ್ರೆಸ್‌ ಶಾಸಕಾಂಗ ಸಭೆಗೆ ಹೋಗಿಲ್ಲ. ರಾತ್ರಿ 8ರಿಂದ 10ರ ವರೆಗೆ ನಮ್ಮ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಕರೆದಿದ್ದ ಔತಣ ಕೂಟದಲ್ಲಿ ಭಾಗಿಯಾಗಿದ್ದೆ. ಅನಂತರ ಡಿಸಿಎಂ ಅವರ ಆಹ್ವಾನದ ಮೇರೆಗೆ ಊಟಕ್ಕೆ ಹೋಗಿದ್ದೆ.
-ಎಸ್‌.ಟಿ. ಸೋಮಶೇಖರ್‌, ಯಶವಂತಪುರ ಬಿಜೆಪಿ ಶಾಸಕ

Advertisement

ಕಾಂಗ್ರೆಸ್‌ ನಮ್ಮ ಹಳೆಯ ಮನೆ. ಪಕ್ಷದ ಸಭೆಗೆ ಆಹ್ವಾನಿಸಿರಲಿಲ್ಲ, ಊಟಕ್ಕೆ ಕರೆದಿದ್ದರು. ನಾನು ಹೋಗುವ ವೇಳೆಗೆ ಸಭೆ ಆರಂಭವಾಗಿದ್ದರಿಂದ ಅರ್ಧ ತಾಸು ಕುಳಿತಿದ್ದೆ.
-ಎಚ್‌. ವಿಶ್ವನಾಥ್‌, ಮೇಲ್ಮನೆ ಸದಸ್ಯ

ಊಟಕ್ಕೆ ಕರೆದಿದ್ದರು, ಹೋಗಿದ್ದೆವು
ಎಂದು ನನ್ನ ಬಳಿ ಹೇಳಿದ್ದಾರೆ. ಯಾವುದೇ ಶಿಸ್ತು ಉಲ್ಲಂಘನೆ ಆಗಿಲ್ಲ. ಮೊನ್ನೆ ನಡೆದ ಧರಣಿಯಲ್ಲೂ ನಮ್ಮೊಂದಿಗೆ ಇದ್ದರು. ಪಕ್ಷದ ಸಭೆಗಳಲ್ಲಿ ಭಾಗವಹಿಸಿ ದ್ದಾರೆ. ಈ ಬಗ್ಗೆ ಅವರೊಂದಿಗೆ ಮಾತುಕತೆ ಮಾಡುತ್ತೇನೆ.

-ಆರ್‌. ಅಶೋಕ್‌, ವಿಪಕ್ಷ ನಾಯಕ

ಸೋಮಶೇಖರ್‌, ಶಿವರಾಂ ಹೆಬ್ಟಾರ್‌ ಅವರೇಕೆ ಕಾಂಗ್ರೆಸ್‌ ಶಾಸಕಾಂಗ ಸಭೆಗೆ ಬರುತ್ತಾರೆ? ಅವರೇನು ನಮ್ಮ ಪಕ್ಷದ ಶಾಸಕರೇ? ನಾವು ಆಹ್ವಾನ ನೀಡಿದ್ದ ಭೋಜನಕೂಟಕ್ಕೆ ಬಂದಿದ್ದರಷ್ಟೇ. ಇತರ ಪಕ್ಷಗಳ 10 ಶಾಸಕರು ಆಗಮಿಸಿ ದ್ದರು.

-ಡಿ.ಕೆ. ಶಿವಕುಮಾರ್‌, ಡಿಸಿಎಂ

Advertisement

Udayavani is now on Telegram. Click here to join our channel and stay updated with the latest news.

Next