ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕಲಾಪ ನಡೆಯುತ್ತಿರುವ ವೇಳೆ ಧರಣಿ ನಡೆಸುವುದೋ, ಸಭಾತ್ಯಾಗ ಮಾಡುವುದೋ ಎಂಬ ಗೊಂದಲ ಗುರುವಾರ ಬಿಜೆಪಿಯನ್ನು ಕಾಡಿತು. ಬಿಜೆಪಿ ಕಾರ್ಯಕರ್ತ ಪೃಥ್ವಿ ಸಿಂಗ್ ಮೇಲಿನ ಹಲ್ಲೆ ಪ್ರಕರಣ ಹಾಗೂ ಬೆಳಗಾವಿ ಮಹಾನಗರ ಪಾಲಿಕೆ ಸದಸ್ಯ ಅಭಿಜಿತ್ ಧವಳಕರ್ ಅಕ್ರಮ ಬಂಧನ ವಿಚಾರದಲ್ಲಿ ಯಾವ ಕ್ರಮ ಅನುಸರಿಸುವುದು ಎಂಬ ಬಗ್ಗೆ ವಿಪಕ್ಷ ಬಿಜೆಪಿಯ ಹಿಂದಿನ ಸಾಲು ಹಾಗೂ ಮುಂದಿನ ಸಾಲಿನ ಸದಸ್ಯರ ಮಧ್ಯೆ ಗೊಂದಲ ಉಂಟಾದ ಪ್ರಸಂಗ ನಡೆಯಿತು.
ಸರಕಾರಕ್ಕೆ ಬಿಸಿ ಮುಟ್ಟಿಸುವಂತೆ ಹೋರಾಟ ನಡೆಸಿಲ್ಲವೆಂದು ಸ್ವಪಕ್ಷೀಯರ ವಿರುದ್ಧವೇ ಶಾಸಕರಾದ ಎಸ್.ಆರ್. ವಿಶ್ವನಾಥ್ ಹಾಗೂ ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಬಹಿರಂಗವಾಗಿ ಮುನಿಸು ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಅಧಿವೇಶನ ಪ್ರಾರಂಭವಾದ ದಿನದಿಂದಲೂ ಬಿಜೆಪಿ ನಾಯಕರ ಮಧ್ಯೆ ಹುಟ್ಟಿಕೊಂಡಿದ್ದ ಅಂತರ ಹಾಗೂ ವೈರುಧ್ಯ ಗುರುವಾರ ಸ್ಫೋಟಗೊಂಡಿತು. ವಿಪಕ್ಷ ನಾಯಕ ಆರ್. ಅಶೋಕ್ ಸಭಾತ್ಯಾಗದ ನಿರ್ಧಾರ ತೆಗೆದುಕೊಂಡದ್ದು ರಾಜ್ಯಾಧ್ಯಕ್ಷ ವಿಜಯೇಂದ್ರ ಸಹಿತ ಹಲವರ ಬೇಸರಕ್ಕೆ ಕಾರಣವಾಗಿದೆ. ನಾಯಕರು ಸಭಾತ್ಯಾಗ ನಡೆಸಿದರೂ ಅಭಯ ಪಾಟೀಲ್ ಮಾತ್ರ ಧರಣಿ ನಡೆಸಿದರು. ಆದರೆ ಎಸ್.ಆರ್. ವಿಶ್ವನಾಥ್ ಮಾತ್ರ ಅಶೋಕ್ ಬಳಿಗೆ ತೆರಳಿ ವಿರೋಧ ವ್ಯಕ್ತಪಡಿಸಿದರು.
ನಡೆದದ್ದೇನು?
ಪೃಥ್ವಿ ಸಿಂಗ್ ನೀಡಿದ ದೂರು ಆಧರಿಸಿ ಪೊಲೀಸರು ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ ಹಾಗೂ ಬೆಂಬಲಿಗರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಲ್ಲ, ಮಹಾನಾಗರ ಪಾಲಿಕೆ ಸದಸ್ಯರನ್ನು ಅಕ್ರಮವಾಗಿ ಬಂಧಿಸಿದ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ ಎಂದು ಬಿಜೆಪಿ ಶಾಸಕರು ವಿಜಯೇಂದ್ರ ನೇತೃತ್ವದಲ್ಲಿ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಸುನಿಲ್ ಕುಮಾರ್, ಅಭಯ್ ಪಾಟೀಲ್, ಸುರೇಶ್ ಕುಮಾರ್, ಆರಗ ಜ್ಞಾನೇಂದ್ರ ಮೊದಲಾದವರು ಬೆಂಬಲ ನೀಡಿದರು.
ಈ ಹಂತದಲ್ಲಿ ಅಶೋಕ ಅವರ ಬಳಿ ಬಂದ ಬಿ.ವೈ. ವಿಜಯೇಂದ್ರ ಮುಂದಿನ ನಡೆಯ ಬಗ್ಗೆ ಪ್ರಶ್ನಿಸಿದರು. ವಿಜಯೇಂದ್ರ ತಮ್ಮ ಸ್ಥಾನಕ್ಕೆ ತೆರಳುವಷ್ಟರಲ್ಲಿ ಬಹುತೇಕ ಶಾಸಕರು ಸಭಾಧ್ಯಕ್ಷರ ಪೀಠದ ಎದುರು ತೆರಳಿ ಧರಣಿಗೆ ಸಿದ್ಧರಾಗಿದ್ದರು. ವಿಜಯೇಂದ್ರ ಅವರ ಆಂಗಿಕ ಸೂಚನೆಯೂ ಅದೇ ರೀತಿ ಇತ್ತು. ಆದರೆ ಧರಣಿಗೆ ಹೊರಟಿದ್ದ ಶಾಸಕರಿಗೆ ತಮ್ಮ ಸ್ಥಾನಕ್ಕೆ ತೆರಳುವಂತೆ ಸೂಚಿಸಿದ ವಿಪಕ್ಷ ನಾಯಕ ಅಶೋಕ್, ಸರಕಾರದ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿ ಸಭಾತ್ಯಾಗ ಮಾಡಿದರು. ಮೊದಲ ಹಾಗೂ ಎರಡನೇ ಸಾಲಿನ ಸದಸ್ಯರು ಹೊರನಡೆದರೆ ಯಾವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬುದು ಅರ್ಥವಾಗದೆ ಹಿಂದಿನ ಸಾಲಿನ ಶಾಸಕರು ಗೊಂದಲಕ್ಕೆ ಮುಳುಗಿದರು. ಸಭಾತ್ಯಾಗದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬುದು ತಿಳಿಯುತ್ತಿದ್ದಂತೆ ವಿಶ್ವನಾಥ್ ಅವರು ಅಶೋಕ್ ಎದುರು ತೆರಳಿ ಬೇಸರ ವ್ಯಕ್ತಪಡಿಸಿ ಹೊರನಡೆದರು. ಅಭಯ್ ಪಾಟೀಲ್ ಮಾತ್ರ ಧರಣಿ ನಡೆಸಿದರು.
ಒಟ್ಟಾರೆಯಾಗಿ ಗೊಂದಲ ವಾತಾವರಣ ನಿರ್ಮಾಣವಾದದ್ದರಿಂದ ವಿಪಕ್ಷ ಸದಸ್ಯರ ಕೋಣೆಗೆ ತೆರಳಿ ಅಶೋಕ್ ಜತೆ ವಿಜಯೇಂದ್ರ ಹಾಗೂ ಹಿರಿಯ ಸದಸ್ಯರು ಸಭೆ ನಡೆಸಿದರು. ಈ ಎರಡು ವಿಚಾರಗಳ ಬಗ್ಗೆ ಬುಧವಾರವೂ ಹೋರಾಟ ನಡೆಸಿದ್ದೇವೆ. ಈಗ ಮತ್ತೆ ಧರಣಿ ನಡೆಸಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬ ಕಾರಣಕ್ಕೆ ಸಭಾತ್ಯಾಗ ಮಾಡಲಾಗಿದೆ ಎಂದು ಅಶೋಕ್, ಯತ್ನಾಳ್, ಆರಗ ಜ್ಞಾನೇಂದ್ರ, ಸಿ.ಸಿ.ಪಾಟೀಲ್ ಉಳಿದವರ ಮನವೊಲಿಸಿದ ಬಳಿಕ ವಾತಾವರಣ ತಿಳಿಯಾಯಿತು.