Advertisement

ನಗರಸಭಾ ಅಧ್ಯಕ್ಷೆ ವಿರುದ್ಧ ಹೋರಾಟಕ್ಕೆ ಸಿದ್ಧ : ಮಹಿಳಾ ಮೋರ್ಚಾ

02:05 AM Dec 05, 2018 | Team Udayavani |

ಮಡಿಕೇರಿ: ನಗರದ ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಸಂಪೂರ್ಣವಾಗಿ ವಿಫ‌ಲರಾಗಿರುವ ನಗರಸಭಾ ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸೂಕ್ತವೆಂದು ಅಭಿಪ್ರಾಯಪಟ್ಟಿರುವ ನಗರ ಬಿಜೆಪಿ ಮಹಿಳಾ ಮೋರ್ಚಾ, ಇನ್ನು ಒಂದು ವಾರದೊಳಗೆ ಸಮಸ್ಯೆಗಳನ್ನು ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ಬೀದಿಗಿಳಿದು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಿಳಾ ಮೋರ್ಚಾದ ಸದಸ್ಯೆ ಹಾಗೂ ನಗರಸಭಾ ಸದಸ್ಯರಾದ ಸವಿತಾ ರಾಕೇಶ್‌, ಅಧ್ಯಕ್ಷರ ನಿರ್ಲಕ್ಷ್ಯದಿಂದಾಗಿ ನಗರದ ಎಲ್ಲ ವಾರ್ಡ್‌ಗಳಲ್ಲಿ ಅಭಿವೃದ್ದಿ ಕಾರ್ಯಗಳು ಕುಂಠಿತಗೊಂಡಿವೆ ಎಂದು ಆರೋಪಿಸಿದರು. ಉಪಾಧ್ಯಕ್ಷರು ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರು, ಅಭಿವೃದ್ಧಿ ಪರ ಕಾಳಜಿ ವಹಿಸಿ ಯಾವ ಕಾರ್ಯಕ್ಕೆ ಮುಂದಾದರೂ ಅಧ್ಯಕ್ಷರು ಅಡ್ಡಿಪಡಿಸುತ್ತಿದ್ದಾರೆ.

Advertisement

ಇತ್ತೀಚೆಗೆ ರಸ್ತೆ ವಿಸ್ತರಣೆಗೆ ಬೇಕಾದ ಮಾನದಂಡವನ್ನು ಅನುಸರಿಸದೆ ಸಂಬಂಧಿಸಿದ ಕಟ್ಟಡಗಳ ಮಾಲಿಲಕರಿಗೆ  ನೋಟಿಸ್‌ ನೀಡದೆ ದಿಢೀರ್‌ ಆಗಿ ಕಾರ್ಯಾಚರಣೆ ನಡೆಸಿದ ಹಿನ್ನೆಲೆ ಸ್ಥಾಯಿ ಸಮಿತಿ ಅಧ್ಯಕ್ಷ ಉಣ್ಣಿಕೃಷ್ಣ ಅವರು ಅಧ್ಯಕ್ಷರ ಏಕ ಪಕ್ಷೀಯ ನಿರ್ಧಾರವನ್ನು ವಿರೋಧಿಸಿದ್ದರು. ಆದರೆ ನಿಯಮ ಉಲ್ಲಂ ಸಿದ ಅಧ್ಯಕ್ಷರು ಉಣ್ಣಿಕೃಷ್ಣ ಅವರ ವಿರುದ್ಧ ಉದ್ದಟತನದ ವರ್ತನೆ ತೋರಿದ್ದಾರೆ ಎಂದು ಸವಿತಾ ರಾಕೇಶ್‌ ಟೀಕಿಸಿದರು. ತಪ್ಪಿನ ಅರಿವಾದ ಅನಂತರ ಉಪಾಧ್ಯಕ್ಷರು, ನಗರಸಭೆ ಸಿಬಂದಿಗಳು ಹಾಗೂ ಮೂಡಾ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಸ್ತೆ ವಿಸ್ತರಣೆಯ ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ.

ಮೂಡಾದ ಸಿಡಿಪಿ ನಕಾಶೆ ಪ್ರಕಾರ ರಸ್ತೆ ಕಾಮಗಾರಿ, ತಡೆಗೋಡೆ, ಚರಂಡಿ, ನೀರಿನ ಪೈಪ್‌ಗ್ಳ ಸಂಪರ್ಕ ವ್ಯವಸ್ಥೆಗಳಿಗೆ ಹತ್ತು ಕೋಟಿ ರೂ. ಗಳು ಬೇಕಾಗುತ್ತವೆ. ಆದರೆ ಇಷ್ಟೋಂದು ಹಣ ನಗರಸಭೆಯಲ್ಲಿ ಲಭ್ಯವಿಲ್ಲದಿದ್ದರೂ ರಸ್ತೆ ವಿಸ್ತರಣೆಗೆ ಮುಂದಾಗಿರುವುದು ಖಂಡನೀಯವೆಂದು ಸವಿತಾ ರಾಕೇಶ್‌ ತಿಳಿಸಿದರು.

ನಗರಸಭಾ ಕಚೇರಿಯಲ್ಲಿ ಸಿಬಂದಿಗಳ ಕೊರತೆ ಎದ್ದು ಕಾಣುತ್ತಿದ್ದು, ಈ ಬಗ್ಗೆ ಅಧ್ಯಕ್ಷರು ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ್ಯ ಸರಕಾರದ ಬಳಿ ನಿಯೋಗ ತೆರಳುವಂತೆ ಹಲವು ಸಭೆಗಳಲ್ಲಿ ಸಲಹೆ ನೀಡಿದ್ದರೂ ಇಲ್ಲಿಯವರೆಗೆ ನಿಯೋಗವನ್ನು ಕರೆದೊಯ್ಯಲಿಲ್ಲ. ಪ್ಲಾಸ್ಟಿಕ್‌ ತ್ಯಾಜ್ಯವನ್ನು ವಿಂಗಡಿಸುವ ಯಂತ್ರೋಪಕರಣ ದುರಸ್ತಿಗೀಡಾಗಿದ್ದರು ಅಧ್ಯಕ್ಷರು ವೈಜ್ಞಾನಿಕ ರೂಪದ ಕಸ ವಿಲೆವಾರಿಗೆ ಕ್ರಮ ಕೈಗೊಂಡಿಲ್ಲ.

ನಗರಸಭೆ ಕಾಂಗ್ರೆಸ್‌ ಸದಸ್ಯರಾದ ಜುಲೇಕಾಬಿ ತಮ್ಮ ವಾರ್ಡ್‌ನಲ್ಲಿ ಪ್ರಕೃತಿ ವಿಕೋಪದಿಂದ ಹದಗೆಟ್ಟಿರುವ ರಸ್ತೆಯನ್ನು ದುರಸ್ತಿ ಪಡಿಸದೆ ಇರುವ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ತಮ್ಮ ಕಚೇರಿಯ ಪಕ್ಕದಲ್ಲೆ ಇರುವ ಕಾವೇರಿ ಕಲಾಕ್ಷೇತ್ರದ ಶೌಚಾಲಯದ ಶುಚಿತ್ವವನ್ನು ಕಾಪಾಡದ ಅಧ್ಯಕ್ಷರು ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ ಅಗಿರುವುದಲ್ಲದೆ, ಕೇವಲ ಇಬ್ಬರು ಮೂರು ಸದಸ್ಯರ ಮಾತನ್ನಷ್ಟೆ ಕೇಳುತ್ತ ಕಾಲಹರಣ ಮಾಡುತ್ತಿದ್ದಾರೆ ಎಂದು ಸವಿತಾ ರಾಕೇಶ್‌ ಆರೋಪಿಸಿದರು.

Advertisement

ಇತ್ತೀಚಿಗೆ ಸಂಭವಿಸಿದ ಪ್ರಕೃತಿ ವಿಕೋಪದ ಹಾನಿ ಪ್ರದೇಶದಲ್ಲಿ ಕಾಮಗಾರಿ ಕೈಗೊಳ್ಳಲು ಕ್ರಿಯಾ ಯೋಜನೆ ತಯಾರಿಸಿದ್ದರು ನಗರಸಭಾ ಅಧ್ಯಕ್ಷರು ಇಲ್ಲಿಯವರೆಗೆ ಈ ಕಡತಕ್ಕೆ ಸಹಿ ಮಾಡಿಲ್ಲ. ನಗರದ ಎಲ್ಲ   23 ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿದ್ದು, ಈ ಅಧ್ಯಕ್ಷರ ಅಗತ್ಯ ನಗರಸಭೆಗೆ ಇಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಕುಡಿಯುವ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡಲು ಅಗತ್ಯವಿರುವ ಯಾವುದೇ ಕ್ರಮಗಳನ್ನು ಕೈಗೊಳ್ಳಲಾಗದ ಅಸಹಾಯಕ ಸ್ಥಿತಿಯಲ್ಲಿ ಅಧ್ಯಕ್ಷರು ಇದ್ದು, ಮುಂದಿನ ಒಂದು ವಾರದೊಳಗೆ ಸಮಸ್ಯೆಗಳಿಗೆ ಪರಿಹಾರ ದೊರೆಯದಿದ್ದಲ್ಲಿ ಮಹಿಳಾ ಮೋರ್ಚಾದ ವತಿಯಿಂದ ಬೀದಿಗಿಳಿದು ಹೋರಾಟ ನಡೆಸುವುದಾಗಿ ಸವಿತಾ ರಾಕೇಶ್‌ ಎಚ್ಚರಿಕೆ ನೀಡಿದರು. ಮತ್ತೂಬ್ಬ ನಗರಸಭೆ ಸದಸ್ಯೆ ಶಿವಕುಮಾರಿ ಮಾತನಾಡಿ, ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವುದೇ ಸೂಕ್ತ ಎಂದರು. ಸುದ್ದಿಗೋಷ್ಠಿಯಲ್ಲಿ ಮಹಿಳಾ ಮೋರ್ಚಾದ  ಉಪಾಧ್ಯಕ್ಷೆ  ಕನ್ನಿಕಾ ದಿನೇಶ್‌, ಸಾಂಸ್ಕೃತಿಕ ಘಟಕದ ಅಧ್ಯಕ್ಷೆ ಭಾರತಿ ರಮೇಶ್‌, ನಗರಸಭಾ ಸದಸ್ಯರಾದ ಲಕ್ಷ್ಮೀ ಕುಟ್ಟಪ್ಪ ಹಾಗೂ ಪ್ರಮುಖರಾದ ಗೌರಮ್ಮ ಉಪಸ್ಥಿತರಿದ್ದರು

ಅಧ್ಯಕ್ಷರು ಅಧಿಕಾರದಲ್ಲಿ ಮುಂದುವರೆಯಬಾರದು’
ಅವೈಜ್ಞಾನಿಕ ರೀತಿಯಲ್ಲಿ ಸುಬ್ರಹ್ಮಣ್ಯ ನಗರ ವ್ಯಾಪ್ತಿಯಲ್ಲಿ ನಗರದ ಕಸವನ್ನೆಲ್ಲ ಸುರಿಯುತ್ತಿರುವುದರಿಂದ ನೊಣಗಳು ತುಂಬಿ ಹೋಗಿದ್ದು, ಸಾಂಕ್ರಾಮಿಕ ರೋಗ ಹರಡುವ ಆತಂಕವಿದೆ. ಈ ಸಮಸ್ಯೆಗಳ ಬಗ್ಗೆ ಹಲವು ಬಾರಿ ಅಧ್ಯಕ್ಷರಿಗೆ ತಿಳಿಸಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ, ವಿಧಾನ ಪರಿಷತ್‌ ಸದಸ್ಯರಾದ ಸುನಿಲ್‌ ಸುಬ್ರಮಣಿ ಅವರ ಸಹಕಾರದಿಂದ ನೊಣಗಳ ತಡೆಗಾಗಿ ಔಷಧವನ್ನು ಸಿಂಪಡಿಸಬೇಕಾಯಿತೆಂದು ತಿಳಿಸಿದ ಶಿವಕುಮಾರಿ ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸದ ಅಧ್ಯಕ್ಷರು ಅಧಿಕಾರದಲ್ಲಿ ಮುಂದುವರೆಯಬಾರದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next