ಕಾರವಾರ: ಶಾಸಕಿ ರೂಪಾಲಿ ನಾಯ್ಕ ಅವರಿಗೆ ಏಕವಚನದಲ್ಲಿ ನಿಂದಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಕಾರವಾರದಲ್ಲಿ ಶನಿವಾರ ಪ್ರತಿಭಟನೆ ಮಾಡಲಾಯಿತು.
ಜಿಲ್ಲಾಧಿಕಾರಿ ಕಚೇರಿಯ ಬಳಿ ಸಮಾವೇಶಗೊಂಡ ಮಹಿಳಾ ಮೋರ್ಚಾ ಸದಸ್ಯೆಯರು ಹಾಗೂ ನಗರಸಭೆಯ ಬಿಜೆಪಿ ಸದಸ್ಯೆಯರು ಮಾಜಿ ಶಾಸಕ ಸೈಲ್ ವಿರುದ್ಧ ಘೋಷಣೆ ಕೂಗಿದರು. ಮಾಜಿ ಮಾಜಿ ಪರ್ಮನೆಂಟ್ ಮಾಜಿ ಎಂದು ಧಿಕ್ಕಾರ ಹಾಕಿದ ಮಹಿಳಾ ಮೋರ್ಚಾದವರು ಅಕ್ರೋಶ ವ್ಯಕಪಡಿಸಿದರು. ಲಿಖಿತ ಮನವಿಯನ್ನು ರಾಜ್ಯಪಾಲರಿಗೆ ಇದೆ ವೇಳೆ ನೀಡಿದ ಅವರು, ಸೈಲ್ ಅನೇಕ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು, ಐಎಎಸ್ ಅಧಿಕಾರಿ ಸಮ್ಮುಖದಲ್ಲಿ ಹಾಲಿ ಶಾಸಕಿ ರೂಪಾಲಿ ನಾಯ್ಕರನ್ನು ಏಕ ವಚನದಲ್ಲಿ ನಿಂದಿಸಿದ್ದಾರೆ .ಶಾಸಕಿಯ ತಂದೆಯನ್ನು ಸಹ ನಿಂದಿಸಿದ್ದು,ಮಹಿಳೆಯರಲ್ಲಿ ಭಯಾನಕ ವಾತಾವರಣ ಸೃಷ್ಟಿಯಾಗಿದೆ. ಕಾರವಾರ ಕ್ಷೇತ್ರದ ಮಹಿಳೆಯರಿಗೆ ರಕ್ಷಣೆ ನೀಡಬೇಕು. ಮಹಿಳೆಯರನ್ನು ಕೆಟ್ಟ ದೃಷ್ಟಿಯಿಂದ ನೋಡುವುದು, ವ್ಯಂಗ್ಯ ವಾಡುವುದು ,ತುಚ್ಛವಾಗಿ ಕಾಣುವ ಗುಣ ಮಾಜಿ ಶಾಸಕ ಸೈಲ್ ಗೆ ಮೊದಲಿಂದ ಇದೆ. ಹಾಗಾಗಿ ಅವರ ವಿರುದ್ಧ ಕಠಿಣಕ್ರಮ ಕೈಗೊಳ್ಳಬೇಕು.
ಸೈಲ್ ಹಿಂದ ಪ್ರಕರಣ ಒಂದರಲ್ಲಿ ಒಂದುವೊರೆ ವರ್ಷ ಜೈಲಿನಲ್ಲಿದ್ದು ಬಂದಿದ್ದು, ಅವರ ದೃಷ್ಟಿ ಕ್ರೂರವಾಗಿದೆ ಎಂದು ಮಹಿಳಾ ಮೋರ್ಚಾ ಅಪಾದಿಸಿದೆ. ಮಾಜಿಶಾಸಕರ ಜೊತೆ ಓರ್ವ ಗುತ್ತಿಗೆದಾರ ಹಾಗೂ ಓರ್ವ ಸಂಪಾದಕ ಸೇರಿಕೊಂಡು ಮಹಿಳಾ ಶಾಸಕಿ ರೂಪಾಲಿ ನಾಯ್ಕ ವಿರುದ್ಧ ಸತತ ಸಂಚು ರೂಪಿಸುತ್ತಿದ್ದು,ಇದು ಮುಂದುವರಿದಲ್ಲಿ ಮಹಿಳಾ ಮೋರ್ಚಾ ದೊಡ್ಡ ಪ್ರತಿಭಟನೆಗೆ ಮುಂದಾಗಲಿದೆ ಎಂದು ಎಚ್ಚರಿಸಿದ್ದಾರೆ .ಮನವಿಯನ್ನು ರಾಜ್ಯಪಾಲರು,ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗೆ ಕಾರವಾರ ಉಪ ವಿಭಾಗದ ಸಹಾಯಕ ಕಮಿಷನರ್ ಜಯಲಕ್ಷ್ಮಿ ರಾಯಕೊಡ ಅವರ ಮುಖಾಂತರ ಕಳುಹಿಸಲಾಗಿದೆ. ಪ್ರತಿಭಟನೆಯ ನೇತೃತ್ವವನ್ನು ನಗರಸಭೆಯ ಸದಸ್ಯೆ ಮಾಲಾ ಹುಲಸ್ವಾರ, ಸುಜಾತ ಬಾಂದೇಕರ್, ರೋಶನಿ ಮಾಳ್ಸೇಕರ್, ಅನುಶ್ರೀ ಕುಬಾಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮನವಿ ಸ್ವೀಕರಿಸಿದ ಎಸಿ ಜಯಲಕ್ಷ್ಮಿ ರಾಜ್ಯಪಾಲರು ಹಾಗೂ ಗೃಹಸಚಿವರಿಗೆ ನಿಮ್ಮ ಬೇಡಿಕೆ ತಿಳಿಸಲಾಗುವುದು ಹಾಗೂ ಮನವಿ ಪತ್ರವನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದರು.
ಇದನ್ನೂ ಓದಿ: ಮನೀಶ್ ಸಿಸೋಡಿಯಾ ಸಿಬಿಐ ಕಸ್ಟಡಿ ಮತ್ತೆರಡು ದಿನ ವಿಸ್ತರಣೆ