Advertisement

ಬಿಜೆಪಿಯಿಂದ ಸುಳ್ಳು ಪ್ರಚಾರದ ಅಬ್ಬರ: ರಾಮಲಿಂಗಾ ರೆಡ್ಡಿ

01:51 PM Sep 21, 2017 | |

ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಜನರಿಗೆ ನೀಡಿದ ಎಲ್ಲಾ ಭರವಸೆಗಳನ್ನು ಶೇ.100ರಷ್ಟು ಈಡೇರಿಸಿದೆ. ಆದರೆ, ಕೇಂದ್ರದ ಬಿಜೆಪಿ ಮಾತ್ರ ಕೇವಲ ಸುಳ್ಳು ಪ್ರಚಾರದಲ್ಲಿಯೇ ನಿರತವಾಗಿದೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.

Advertisement

ಮಲ್ಲಿಕಟ್ಟೆಯಲ್ಲಿರುವ ದ.ಕ. ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಬುಧವಾರ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. 

ದ.ಕ. ಜಿಲ್ಲೆಯ ಕಾಂಗ್ರೆಸ್‌ ಕಾರ್ಯಕರ್ತರು ನಿಷ್ಠಾವಂತರಾಗಿ ಪಕ್ಷದ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕರಾವಳಿಯಲ್ಲಿ ಕಾಂಗ್ರೆಸ್‌ ಮೇಲಿನ ಪ್ರೀತಿಯಿಂದ ನಮ್ಮ ಜತೆಗೆ ಜನರು ಬೆಂಬಲ ನೀಡುತ್ತಿದ್ದಾರೆ. ಈ ಮೂಲಕವಾಗಿ ಮತ್ತೂಮ್ಮೆ ಕರಾವಳಿ ಸೇರಿದಂತೆ ರಾಜ್ಯದಲ್ಲಿ ನಮ್ಮ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂದರು.

ಭಿನ್ನಾಭಿಪ್ರಾಯ ಬದಿಗಿರಿಸಿ: ರೈ
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಮಾತನಾಡಿ, ಕಾಂಗ್ರೆಸ್‌ನ ಗೆಲುವಿಗಾಗಿ ನಮ್ಮೆಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ದುಡಿಯಬೇಕಾಗಿದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಬೆಂಬಲಿಸುವತ್ತ ಮಾತ್ರ ಗಮನಹರಿಸಬೇಕಾಗಿದೆ. ಕಾಂಗ್ರೆಸ್‌ ಮಾತ್ರ ನಮ್ಮ ಧರ್ಮ ಎಂಬುದನ್ನು ನಾವೆಲ್ಲ ಅರಿತಿರಬೇಕು ಎಂದರು.

ಶಾಸಕ ಅಭಯಚಂದ್ರ ಜೈನ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌, ಪ್ರಮುಖರಾದ ಕೋಡಿಜಾಲ್‌ ಇಬ್ರಾಹಿಂ, ವಿಜಯ್‌ ಕುಮಾರ್‌ ಶೆಟ್ಟಿ, ಬಿ.ಎಚ್‌.ಖಾದರ್‌, ಸುರೇಶ್‌ ಬಲ್ಲಾಳ್‌, ಶಶಿಧರ ಹೆಗ್ಡೆ, ಮಮತಾ ಡಿ.ಎಸ್‌.ಗಟ್ಟಿ, ಶಾಲೆಟ್‌ ಪಿಂಟೋ, ಶಾಹುಲ್‌ ಹಮೀದ್‌ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು. 

Advertisement

ವಿಜಯ್‌ ಕುಮಾರ್‌ ಶೆಟ್ಟಿ  ವರ್ಸಸ್‌ ಪ್ರಕಾಶ್‌ ಶೆಟ್ಟಿ  ತುಂಬೆ
ಕಾಂಗ್ರೆಸ್‌ ಕಚೇರಿಯಲ್ಲಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಭಾಷಣ ಮುಗಿಸಿ ಹೊರಡುತ್ತಿದ್ದಂತೆ ಮಾಜಿ ಶಾಸಕ ವಿಜಯ್‌ ಕುಮಾರ್‌ ಶೆಟ್ಟಿ ಮತ್ತು ಜಿ.ಪಂ. ಸದಸ್ಯ ಚಂದ್ರಪ್ರಕಾಶ್‌ ಶೆಟ್ಟಿ ತುಂಬೆ ಮಧ್ಯೆ ಮಾತಿನ ಚಕಮಕಿ ನಡೆಯಿತು. “ಪಕ್ಷದ ನಾಯಕರ ವಿರುದ್ಧವೇ ಇಲ್ಲ ಸಲ್ಲದ ಮಾತನಾಡಿ, ಈಗ ವೇದಿಕೆಯಲ್ಲಿದ್ದೀರಿ? ರಮಾನಾಥ ರೈ ಅವರ ವಿರುದ್ಧ ಅಂದು ಹೇಳಿಕೆ ನೀಡಿದ್ದ ನಿಮಗೆ ಇಂದು ವೇದಿಕೆಯಲ್ಲಿ ಕೂರಲು ನೈತಿಕತೆ ಇದೆಯೇ ಎಂದು ಪ್ರಕಾಶ್‌ ಶೆಟ್ಟಿ ತುಂಬೆ ಅವರು ವಿಜಯ್‌ ಕುಮಾರ್‌ ಶೆಟ್ಟಿ ಅವರಿಗೆ ಪ್ರಶ್ನಿಸಿದರು. ಈ ವೇಳೆ ವಿಜಯ್‌ ಕುಮಾರ್‌ ಶೆಟ್ಟಿ “ಕಾಂಗ್ರೆಸ್‌ ಕಚೇರಿಗೆ ಬರುವುದಕ್ಕೆ ನನಗೆ ಯಾರೂ ಹೇಳಬೇಕೆಂದಿಲ್ಲ. ನೈತಿಕತೆ ಬಗ್ಗೆ ಹೇಳುವ ಅಗತ್ಯವೂ  ಇಲ್ಲ. ಸುದೀರ್ಘ‌ ವರ್ಷಗಳಿಂದ ನಾನು ಕಾಂಗ್ರೆಸ್‌ನಲ್ಲಿ ಇದ್ದವನು’ ಎಂದು ಪ್ರತ್ಯುತ್ತರ ನೀಡಿದರು. ಇಷ್ಟಾದರೂ ಅಲ್ಲೇ ಇದ್ದ  ಸಚಿವರಾದ ರಾಮಲಿಂಗಾ ರೆಡ್ಡಿ, ರಮಾನಾಥ ರೈ ಅವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next