ಶಿಮ್ಲಾ(ಹಿಮಾಚಲಪ್ರದೇಶ): ಹಿಮಾಚಲಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಪ್ರತಿನಿಧಿಸುತ್ತಿರುವ ಹಮಿರ್ ಪುರ್ ಲೋಕಸಭಾ ಕ್ಷೇತ್ರದ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷ ಪರಾಜಯಗೊಂಡಿದೆ. ಆದರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ತವರು ಬಿಲಾಸ್ ಪುರ್ ಲೋಕಸಭಾ ಕ್ಷೇತ್ರದ ಎಲ್ಲಾ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ರಾಜ್ಯಪಾಲ ಗೆಹ್ಲೋಟ್ ಅಂಜನಾದ್ರಿ ಭೇಟಿ; ಪೂಜೆ ನೆರವೇರಿಸುವ ಕುರಿತು ಅರ್ಚಕ-ಅಧಿಕಾರಿಗಳ ಮಧ್ಯೆ ವಾಗ್ವಾದ
ಅನುರಾಗ್ ಠಾಕೂರ್ ಅವರ ತಂದೆ, ಮಾಜಿ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಾಲ್ ಅವರು ಸ್ಪರ್ಧಿಸುತ್ತಿದ್ದ ಸುಜಾನ್ಪುರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೇವಲ 399 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಮಾಜಿ ಸಿಎಂ ಧುಮಾಲ್ ಅವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನಿರಾಕರಿಸಿತ್ತು. ಅಲ್ಲದೇ ಅವರು ನಿವೃತ್ತಿಯಾಗುವಂತೆ ಪಕ್ಷ ಸೂಚಿಸಿತ್ತು. ನಂತರ ನಡೆದ ಸಭೆಯಲ್ಲಿ ಅನುರಾಗ್ ಠಾಕೂರ್ ತಮ್ಮ ತಂದೆಯ ಕಠಿಣ ಕಾರ್ಯವನ್ನು ಶ್ಲಾಘಿಸಿ, ಸಾರ್ವಜನಿಕವಾಗಿ ಕಣ್ಣೀರು ಹಾಕಿದ್ದರು ಎಂದು ವರದಿ ವಿವರಿಸಿದೆ.
ಬೋರಾಂಜ್ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷ ಕೇವಲ 60 ಮತಗಳ ಅಂತರದಿಂದ ಪರಾಜಯಗೊಂಡಿದೆ. ಹಮಿರ್ ಪುರ್ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದು, ಬರ್ಸಾರ್ ಮತ್ತು ನದೌನ್ ಕ್ಷೇತ್ರ ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಂಡಿದೆ.
ಜೆಪಿ ನಡ್ಡಾ ತವರು ಕ್ಷೇತ್ರ ಬಿಲಾಸ್ ಪುರ್ ಲೋಕಸಭಾ ಕ್ಷೇತ್ರದಲ್ಲಿ ಎಲ್ಲಾ ಮೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಅಲ್ಪಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಹಿಮಾಚಲ ಪ್ರದೇಶದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಿಜೆಪಿ 21 ಬಂಡಾಯ ಅಭ್ಯರ್ಥಿಗಳ ಪೈಕಿ ಕೇವಲ ಇಬ್ಬರು ಮಾತ್ರ ಜಯಗಳಿಸಿದ್ದಾರೆ.
ಹಿಮಾಚಲ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ಸೋಲನ್ನನುಭವಿಸಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಬೆಂಬಲಿಗರು ಅನುರಾಗ್ ಠಾಕೂರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಪಕ್ಷದೊಳಗಿನ ಆಂತರಿಕ ಕಲಹವೇ ಪಕ್ಷದ ಸೋಲಿಗೆ ಕಾರಣ ಎಂದು ಆರೋಪಿಸಿದ್ದರು.